ನವದೆಹಲಿ, ನವೆಂಬರ್ 15: ಡೊನಾಲ್ಡ್ ಟ್ರಂಪ್ 2.0 ಸರ್ಕಾರದಲ್ಲಿ ಇಲಾನ್ ಮತ್ತು ವಿವೇಕ್ ರಾಮಸ್ವಾಮಿಗೆ ಜವಾಬ್ದಾರಿಯುತ ಟ್ಯಾಸ್ಕ್ ಸಿಕ್ಕಿದೆ. ಸರ್ಕಾರಿ ಕ್ಷಮತಾ ಇಲಾಖೆ ಅಥವಾ ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿ (DOGE) ಇಲಾಖೆಗೆ ಅವರಿಬ್ಬರೂ ಮುಖ್ಯಸ್ಥರಾಗಿದ್ದಾರೆ. ಬಹಳ ಕ್ಷಿಪ್ರ ವೇಗದಲ್ಲಿ ಇಲಾಖೆ ಮೈಕೊಡವಿಕೊಂಡಿದೆ. ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಕೆಲಸಕ್ಕೆ ಬೇಕಾದ ಮಾನದಂಡಗಳನ್ನು ನೋಡಿದರೆ ಹೆಚ್ಚಿನ ಜನರು ಅರ್ಜಿ ಹಾಕುವುದು ಅನುಮಾನ ಅನಿಸಬಹುದು. ಆದರೆ, ಸಾಕಷ್ಟು ಜನರು ಅರ್ಜಿ ಗುಜರಾಯಿಸಲು ಆಸಕ್ತಿ ತೋರುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ, ಡೋಜೆ ಇಲಾಖೆಯು ಕೆಲಸಕ್ಕೆ ಬೇಕಾದ ಮಾನದಂಡವನ್ನು ತನ್ನ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದೆ.
‘ಡೋಜೆ ಇಲಾಖೆಯಲ್ಲಿ ನಮಗೆ ನೆರವು ನೀಡಲು ಆಸಕ್ತಿ ತೋರಿರುವ ಸಾವಿರಾರು ಅಮೆರಿಕನ್ನರಿಗೆ ನಾವು ಆಭಾರಿಯಾಗಿದ್ದೇವೆ. ಆದರೆ ಪಾರ್ಟ್ ಟೈಮ್ ಆಗಿ ಐಡಿಯಾ ನೀಡುವವರು ಬೇಕಾಗಿಲ್ಲ. ಸೂಪರ್ ಹೈ ಐಕ್ಯೂ ಹೊಂದಿರುವ ಕ್ರಾಂತಿಕಾರಿಗಳ ಸಣ್ಣ ತಂಡ ಬೇಕು. ವಾರಕ್ಕೆ 80 ಗಂಟೆಗೂ ಅಧಿಕ ಕಾಲ ಕೆಲಸ ಮಾಡಬೇಕು. ಸಂಬಳ ಬಹಳ ಕಡಿಮೆ ನಿರೀಕ್ಷಿಸಬೇಕು…’ ಎಂದು ಡೋಜೆ ಇಲಾಖೆಯ ಪೋಸ್ಟ್ನಲ್ಲಿ ಪ್ರಮುಖ ಮಾನದಂಡಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: Indian Economy: 2025ರಿಂದ 2027ರವರೆಗೆ ಭಾರತದ ಜಿಡಿಪಿ ದರ ಶೇ. 6.5-7: S&P ಅಂದಾಜು
ಈ ಅರ್ಹತೆಗಳನ್ನು ಹೊಂದಿರುವವರು ಅವರ ಸಿವಿಗಳನ್ನು ಇಲಾಖೆಯ ಎಕ್ಸ್ ಅಕೌಂಟ್ಗೆ ಡಿಎಂ (ಡೈರೆಕ್ಟ್ ಮೆಸೇಜ್) ಮಾಡಬೇಕಂತೆ. ಅಗ್ರ ಶೇ. 1ರಷ್ಟು ಅರ್ಜಿಗಳನ್ನು ಇಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರೇ ಪರಿಶೀಲನೆ ಮಾಡುತ್ತಾರಂತೆ. ಹಾಗಂತ ಪೋಸ್ಟ್ನಲ್ಲಿ ತಿಳಿಸಲಾಗಿದೆ.
We are very grateful to the thousands of Americans who have expressed interest in helping us at DOGE. We don’t need more part-time idea generators. We need super high-IQ small-government revolutionaries willing to work 80+ hours per week on unglamorous cost-cutting. If that’s…
— Department of Government Efficiency (@DOGE) November 14, 2024
ಕುತೂಹಲವೆಂದರೆ, ಇಲ್ಲಿ ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ ಕೇಳಲಾಗಿಲ್ಲ. ವೃತ್ತಿಪರ ಅನುಭವವನ್ನೂ ಕೇಳಲಾಗಿಲ್ಲ. ವಯೋಮಿತಿಯನ್ನೂ ನಿರ್ದಿಷ್ಟಪಡಿಸಲಾಗಿಲ್ಲ. ಬುದ್ಧಿವಂತರಾದ ಮತ್ತು ಕಷ್ಟಪಟ್ಟು ದುಡಿಯುವ ಮತ್ತು ಹಣಕ್ಕಾಗಿ ಕೆಲಸ ಮಾಡದಂತಹ ವ್ಯಕ್ತಿಗಳ ಪಡೆಯನ್ನು ಇಲಾಖೆಯಲ್ಲಿ ನಿರ್ಮಿಸಲು ಹೊರಟಂತಿದೆ.
ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಕೆಲಸಕ್ಕೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಮೆಸೇಜ್ ಮಾಡಬೇಕೆಂದು ಕೇಳಲಾಗಿದೆ. ಇಲ್ಲಿ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಡೈರೆಕ್ಟ್ ಮೆಸೇಜ್ ಕಳುಹಿಸಬೇಕಾದರೆ ಖಾತೆಯು ವೆರಿಫೈ ಆಗಿರಬೇಕು. ವೆರಿಫೈ ಮಾಡಬೇಕೆಂದರೆ ತಿಂಗಳಿಗೆ ಎಂಟು ಡಾಲರ್ ಆಗುತ್ತದೆ. ಸುಮಾರು 700 ರೂ ಆಗುತ್ತದೆ. ಹಾಗಿದ್ದವರು ಡಿಎಂ ಮಾಡಬಹುದು. ಇಲಾನ್ ಮಸ್ಕ್ ತಮ್ಮ ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಸಬ್ಸ್ಕ್ರಿಪ್ಷನ್ ಹೆಚ್ಚಿಸಿಕೊಳ್ಳಲು ಡೋಜೆ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರಾ ಎಂದೂ ಮೇಲ್ನೋಟಕ್ಕೆ ಅನಿಸಬಹುದು.
ಇಲಾನ್ ಮಸ್ಕ್ ಇದೇ ಎಕ್ಸ್ ಪೋಸ್ಟ್ನ ತ್ರೆಡ್ನಲ್ಲಿ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರ ಪ್ರತಿಕ್ರಿಯೆಯ ಪೋಸ್ಟ್ವೊಂದಕ್ಕೆ ಸ್ಪಂದಿಸಿದ ಇಲಾನ್ ಮಸ್ಕ್, ‘ಇಲಾಖೆಯ ಕೆಲಸ ನಿಜಕ್ಕೂ ತ್ರಾಸವೇ ಇರುತ್ತದೆ. ಸಾಕಷ್ಟು ಶತ್ರುಗಳನ್ನು ನಿರ್ಮಿಸುತ್ತದೆ. ಕಾಂಪೆನ್ಸೇಶನ್ ಕೂಡ ಸೊನ್ನೆ ಇರುತ್ತದೆ. ಎಂಥ ದೊಡ್ಡ ಡೀಲ್ ನೋಡಿ,’ ಎಂದು ಕೇಕೆಯ ಇಮೋಜಿ ಹಾಕಿ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ