Indian Economy: 2025ರಿಂದ 2027ರವರೆಗೆ ಭಾರತದ ಜಿಡಿಪಿ ದರ ಶೇ. 6.5-7: S&P ಅಂದಾಜು
India GDP rate from 2025-2027: ಭಾರತದ ಆರ್ಥಿಕತೆ ಮುಂದಿನ ಹಣಕಾಸು ವರ್ಷದಿಂದ ಆರಂಭಿಸಿ ಮೂರು ವರ್ಷಗಳವರೆಗೆ ಶೇ. 6.5ರಿಂದ ಶೇ. 7ರ ವಾರ್ಷಿಕ ದರದವರೆಗೆ ಬೆಳವಣಿಗೆ ಹೊಂದಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ. ಖಾಸಗಿ ವಲಯದ ಅನುಭೋಗ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ವೆಚ್ಚದಲ್ಲಿ ಹೆಚ್ಚಳ ಇವು ಆರ್ಥಿಕತೆಗೆ ಪುಷ್ಟಿ ಕೊಡಬಹುದು ಎಂದು ಅದು ನಿರೀಕ್ಷಿಸಿದೆ.
ನವದೆಹಲಿ, ನವೆಂಬರ್ 15: S&P ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಮುಂದಿನ ಮೂರು ಹಣಕಾಸು ವರ್ಷದಲ್ಲಿ, ಅಂದರೆ 2027ರ ಮಾರ್ಚ್ವರೆಗೆ ಭಾರತದ ಆರ್ಥಿಕತೆ ಶೇ. 6.5ರಿಂದ ಶೇ. 7ರವರೆಗಿನ ವಾರ್ಷಿಕ ದರದಲ್ಲಿ ಬೆಳೆಯಬಹುದು. ಮೂಲಸೌಕರ್ಯ ಕ್ಷೇತ್ರಕ್ಕೆ ವೆಚ್ಚ ಹೆಚ್ಚುತ್ತಿರುವುದರಿಂದ ಮತ್ತು ಖಾಸಗಿ ಅನುಭೋಗದಲ್ಲಿ ಏರಿಕೆ ಆಗುವುದರಿಂದ ಭಾರತ ಉತ್ತಮ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಎಸ್ ಅಂಡ್ ಪಿ ಅಭಿಪ್ರಾಯಪಟ್ಟಿದೆ.
ಭಾರತದ ಸಕಾರಾತ್ಮಕ ಆರ್ಥಿಕತೆಯಿಂದಾಗಿ ಬ್ಯಾಂಕುಗಳ ಪ್ರಬಲ ಸ್ಥಿತಿ ಮುಂದುವರಿಯುತ್ತದೆ. ಕಾರ್ಪೊರೇಟ್ ಬ್ಯಾಲನ್ಸ್ ಶೀಟ್, ರಿಸ್ಕ್ ಮ್ಯಾನೇಜ್ಮೆಂಟ್ ವಿಧಾನಗಳಲ್ಲಿ ಸುಧಾರಣೆ ಆಗಿರುವುದು ಇವೆಲ್ಲವೂ ಬ್ಯಾಂಕುಗಳನ್ನು ಇನ್ನಷ್ಟು ಸುದೃಢಗೊಳಿಸಲಿವೆ. ದೇಶದಲ್ಲಿ ಆಗುತ್ತಿರುವ ರಚನಾತ್ಮಕ ಸುಧಾರಣೆಗಳು ಹಾಗೂ ಪೂರಕ ಆರ್ಥಿಕ ಬಲವರ್ಧನೆ ಈ ಎರಡೂ ಮಿಳಿತಗೊಂಡು ಹಣಕಾಸು ಸಂಸ್ಥೆಗಳಿಗೆ ಪುಷ್ಟಿ ಸಿಗಲು ಸಹಾಯವಾಗಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಡಿಸೆಂಬರ್ 21ಕ್ಕೆ ರಾಜಸ್ಥಾನದ ಜೈಸಲ್ಮೇರ್ನಲ್ಲಿ 55ನೇ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ
‘ಭಾರತದ ಮೂಲಸೌಕರ್ಯ ವೆಚ್ಚ ಹಾಗೂ ಪ್ರಬಲ ಖಾಸಗಿ ಅನುಭೋಗವು ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡುವ ನಿರೀಕ್ಷೆ ಇದೆ. 2025ರಿಂದ 2027ರವರೆಗಿನ ಹಣಕಾಸು ವರ್ಷಗಳಲ್ಲಿ ಶೇ. 6.50-7.0 ರ ವಾರ್ಷಿಕ ದರದಲ್ಲಿ ಜಿಡಿಪಿ ಬೆಳವಣಿಗೆ ಆಗಬಹುದು’ ಎಂದು S&P ಹೇಳಿದೆ.
ಸದ್ಯ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 8.2ರಷ್ಟು ಬೆಳೆದಿತ್ತು. 2024-25ರ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ಕೆಲ ಹಣಕಾಸು ಮತ್ತು ಬ್ರೋಕರೇಜ್ ಸಂಸ್ಥೆಗಳು ಈ ವರ್ಷದ ಜಿಡಿಪಿ ದರ ಶೇ. 7ರ ಆಸುಪಾಸಿನಷ್ಟು ಇರಬಹುದು ಎಂದು ಅಂದಾಜು ಮಾಡಿವೆ. ಎಸ್ ಅಂಡ್ ಪಿ ಮಾಡಿರುವ ಅಂದಾಜು ಕೂಡ ಇದೇ ಹಾದಿಯಲ್ಲಿ ಸಾಗುತ್ತದೆ.
ಇದನ್ನೂಓದಿ: SBI loan rates: ಎಸ್ಬಿಐನ ಎಂಸಿಎಲ್ಆರ್ ಏರಿಕೆ; ಸಾಲಕ್ಕೆ ತುಸು ಹೆಚ್ಚಲಿದೆ ಬಡ್ಡಿ
ಬ್ಯಾಂಕುಗಳ ಪ್ರಬಲ ಸಾಲ ಆಸ್ತಿ
ಭಾರತದ ಬ್ಯಾಂಕಿಂಗ್ ವಲಯದ ಬಗ್ಗೆ ಎಸ್ ಅಂಡ್ ಪಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. 2024ರ ಮಾರ್ಚ್ 31ಕ್ಕೆ ಭಾರತೀಯ ಬ್ಯಾಂಕುಗಳು ಹೊಂದಿರುವ ಅಸುರಕ್ಷಿತ ಅಥವಾ ದುರ್ಬಲ ಸಾಲಗಳ ಪ್ರಮಾಣ ಶೇ. 3.5ರಷ್ಟಿದೆ. 2025ರ ಮಾರ್ಚ್ 31ರೊಳಗೆ ಇದು ಶೇ. 3ಕ್ಕೆ ಇಳಿಯಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ