SBI loan rates: ಎಸ್ಬಿಐನ ಎಂಸಿಎಲ್ಆರ್ ಏರಿಕೆ; ಸಾಲಕ್ಕೆ ತುಸು ಹೆಚ್ಚಲಿದೆ ಬಡ್ಡಿ
SBI MCLR rates: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕನಿಷ್ಠ ಬಡ್ಡಿದರವಾದ ಎಂಸಿಎಲ್ಆರ್ ಅನ್ನು 5 ಮೂಲಾಂಕಗಳಷ್ಟು ಹೆಚ್ಚಿಸಿದೆ. ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದ ಅವಧಿಯ ಸಾಲಗಳಿಗೆ ಎಂಸಿಎಲ್ಆರ್ ಅನ್ನು ಎಸ್ಬಿಐ ಹೆಚ್ಚಿಸಿದೆ. ಇನ್ನುಳಿದ ಅವಧಿಯ ಸಾಲಗಳಿಗೆ ಮೊದಲಿದ್ದ ಕನಿಷ್ಠ ಬಡ್ಡಿದರಗಳೇ ಮುಂದುವರಿಯಲಿವೆ.
ನವದೆಹಲಿ, ನವೆಂಬರ್ 15: ಎಚ್ಡಿಎಫ್ಸಿ ಬ್ಯಾಂಕ್ ಬಳಿಕ ಎಸ್ಬಿಐ ಕೂಡ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸಿದೆ. ಐದು ಮೂಲಾಂಕಗಳಷ್ಟು ದರಗಳು ಹೆಚ್ಚಿವೆ. ಮೂರು ಕಾಲಾವಧಿಗಳ ಸಾಲಗಳ ಮೇಲೆ ಇದು ಪರಿಣಾಮ ಬೀರಲಿದೆ. ಇವತ್ತು ಶುಕ್ರವಾರದಿಂದಲೂ ಹೊಸ ದರಗಳು ಅನ್ವಯಕ್ಕೆ ಬರಲಿವೆ ಎನ್ನಲಾಗಿದೆ. ವರದಿಗಳ ಪ್ರಕಾರ ಮೂರು ತಿಂಗಳು, ಆರು ತಿಂಗಳು ಹಾಗು ಒಂದು ವರ್ಷದ ಅವಧಿಯ ಸಾಲಗಳಿಗೆ ಇರುವ ಬಡ್ಡಿದರದಲ್ಲಿ 5 ಮೂಲಾಂಕಗಳಷ್ಟು ಹೆಚ್ಚಳವಾಗಿದೆ.
ಮೂರು ತಿಂಗಳ ಅವಧಿಯ ಸಾಲಕ್ಕೆ ಬಡ್ಡಿದರ ಶೇ. 8.50ಯಿಂದ ಶೇ. 8.55ಕ್ಕೆ ಹೆಚ್ಚಿಸಲಾಗಿದೆ. ಆರು ತಿಂಗಳ ಸಾಲಕ್ಕೆ ಬಡ್ಡಿದರ ಶೇ. 8.85ರಿಂದ ಶೇ. 8.90ಕ್ಕೆ ಹೆಚ್ಚಳವಾಗಿದೆ. ಇನ್ನು, ಒಂದು ವರ್ಷದ ಅವಧಿಗೆ ಸಾಲದ ದರ ಶೇ. 8.95ರಿಂದ ಶೇ. 9ಕ್ಕೆ ಏರಿದೆ. ಇನ್ನುಳಿದ ಕಾಲಾವಧಿಯ ಸಾಲಗಳಿಗೆ ಬಡ್ಡಿದರದಲ್ಲಿ ಯಾವ ವ್ಯತ್ಯಯ ಆಗುವುದಿಲ್ಲ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್
ನವೆಂಬರ್ 15ರಿಂದ ಎಸ್ಬಿಐ ಸಾಲ ದರ
- 15 ದಿನ ಅವಧಿಯ ಸಾಲ: ಬಡ್ಡಿದರ ಶೇ. 8.20
- ಒಂದು ತಿಂಗಳು: ಶೇ. 8.20
- ಮೂರು ತಿಂಗಳು: ಶೇ. 8.55
- ಆರು ತಿಂಗಳು: ಶೇ. 8.90
- ಒಂದು ವರ್ಷ: ಶೇ. 9
- ಎರಡು ವರ್ಷ: ಶೇ. 9.05
- ಮೂರು ವರ್ಷ: ಶೇ. 9.10ರಷ್ಟು ಬಡ್ಡಿ
ಈ ಎಂಸಿಎಲ್ಆರ್ ದರಗಳ ಬದಲಾವಣೆಗೆ ಅನುಗುಣವಾಗಿ ಎಸ್ಬಿಐನ ಸಾಲದ ದರಗಳೂ ಬದಲಾಗಲಿವೆ. ಇತ್ತೀಚೆಗೆ ಎಚ್ಡಿಎಫ್ಸಿ ಬ್ಯಾಂಕ್ ಕೂಡ ಎಂಸಿಎಲ್ಆರ್ ದರಗಳನ್ನು ಐದು ಮೂಲಾಂಕಗಳಷ್ಟು ಏರಿಕೆ ಮಾಡಿತ್ತು. 15 ದಿನಗಳು, ಒಂದು ತಿಂಗಳು ಮತ್ತು ಮೂರು ವರ್ಷದ ಅವಧಿಯ ಸಾಲಗಳಲ್ಲಿ ಬಡ್ಡಿದರ ಹೆಚ್ಚಿಸಿತ್ತು.
ಇದನ್ನೂ ಓದಿ: Layoffs: 17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್
ಏನಿದು ಎಂಸಿಎಲ್ಆರ್?
ಎಂಸಿಎಲ್ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ಸ್. ಅಂದರೆ ಸಾಲಕ್ಕೆ ವಿಧಿಸುವ ಬಡ್ಡಿದರದ ಕನಿಷ್ಠ ಮಿತಿ ಅದು. ಬ್ಯಾಂಕ್ನ ಕನಿಷ್ಠ ಬಡ್ಡಿದರ ಇದು. ಒಂದು ಬ್ಯಾಂಕು ತನ್ನ ಎಂಸಿಎಲ್ಆರ್ಗಿಂತ ಕಡಿಮೆ ದರಕ್ಕೆ ಸಾಲ ನೀಡಲು ಆಗುವುದಿಲ್ಲ. ಅದೇ ಕನಿಷ್ಠ ಬಡ್ಡಿದರ.
ಆರ್ಬಿಐ ರಿಪೋದರ ಬದಲಾಯಿಸುವಂತೆ ಎಲ್ಸಿಎಲ್ಆರ್ ಇತ್ಯಾದಿ ದರಗಳನ್ನೂ ಎರಡು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಸದ್ಯ ಆರ್ಬಿಐನ ಎಂಸಿಎಲ್ಆರ್ ಶೇ. 6.80ರಿಂದ ಶೇ. 7.65ರ ಶ್ರೇಣಿಯಲ್ಲಿದೆ. ಬ್ಯಾಂಕುಗಳು ತಮ್ಮ ಎಂಸಿಎಲ್ಆರ್ಗಳನ್ನು ಬದಲಾಯಿಸಿಕೊಳ್ಳಲು ಸ್ವತಂತ್ರವಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ