ಚೆನ್ನೈ, ಸೆಪ್ಟೆಂಬರ್ 29: ತೂತ್ತುಕುಡಿ ಮೂಲದ ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ನ (TMB- Tamilnad Mercantile Bank) ಸಿಇಒ ಮತ್ತು ಎಂಡಿ ಎಸ್ ಕೃಷ್ಣನ್ ರಾಜೀನಾಮೆ ನೀಡಿದ್ದಾರೆ. ಒಂದು ವಾರದ ಹಿಂದಷ್ಟೇ ಈ ಬ್ಯಾಂಕ್ನಿಂದ 9,000 ಕೋಟಿ ರೂ ಹಣ ಟ್ಯಾಕ್ಸಿ ಚಾಲಕನ ಖಾತೆಗೆ ವರ್ಗಾವಣೆ ಆದ ಸುದ್ದಿ ದೇಶಾದ್ಯಂತ ವೈರಲ್ ಆಗಿತ್ತು. ಆ ಕಾರಣಕ್ಕೆ ಸಿಇಒ ರಾಜೀನಾಮೆ ನೀಡಿದರಾ ಎಂಬುದು ಗೊತ್ತಿಲ್ಲ. ಆದರೆ, ಖಾಸಗಿ ಕಾರಣದಿಂದ ಎಸ್ ಕೃಷ್ಣನ್ ಅವರು ಟಿಎಂಬಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರೆಂದು ಬ್ಯಾಂಕ್ ಹೇಳಿದೆ. ಎಸ್ ಕೃಷ್ಣನ್ ಅವರು 2022ರ ಸೆಪ್ಟೆಂಬರ್ 4ರಂದು ತಮಿಳ್ನಾಡ್ ಮೆರ್ಕಂಟೈಲ್ ಬ್ಯಾಂಕ್ಗೆ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿ ನೇಮಕವಾಗಿದ್ದರು.
‘ಬ್ಯಾಂಕ್ನ ಎಂಡಿ ಮತ್ತು ಸಿಇಒ ಎಸ್ ಕೃಷ್ಣನ್ ವೈಯಕ್ತಿಕ ಕಾರಣ ನೀಡಿ ಸೆಪ್ಟೆಂಬರ್ 28ರಂದು ರಾಜೀನಾಮೆ ನೀಡಿದ್ದಾರೆ. ಬ್ಯಾಂಕ್ನ ಮಂಡಳಿ ಸಭೆಯಲ್ಲಿ ಅವರ ರಾಜೀನಾಮೆ ಅಂಗೀಕರಿಸಲಾಗಿದ್ದು, ಅದನ್ನು ಆರ್ಬಿಐಗೆ ಕಳುಹಿಸಿಕೊಡಲಾಗಿದೆ. ರಿಸರ್ವ್ ಬ್ಯಾಂಕ್ನಿಂದ ಮುಂದಿನ ಸಲಹೆ ಅಥವಾ ಮಾರ್ಗದರ್ಶನ ಬರುವವರೆಗೂ ಕೃಷ್ಣನ್ ಅವರು ಎಂಡಿ ಮತ್ತು ಸಿಇಒ ಆಗಿ ಮುಂದುವರಿಯುತ್ತಾರೆ…’ ಎಂದು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ ಟಿಎಂಬಿ ತಿಳಿಸಿದೆ.
ಇದನ್ನೂ ಓದಿ: ಎರಡು ವರ್ಷವಾದರೂ ಎಫ್ಟಿಎಸ್ಇ ಇಂಡೆಕ್ಸ್ ಪಟ್ಟಿಗೆ ಸೇರ್ಪಡೆಯಾಗದ ಭಾರತೀಯ ಬಾಂಡ್ಗಳು; ಏನಿದರ ಎಫೆಕ್ಟ್?
‘ನನ್ನ ಅಧಿಕಾರಾವಧಿ ಇನ್ನೂ ಮುಕ್ಕಾಲು ಭಾಗ ಇದೆಯಾದರೂ ವೈಯಕ್ತಿಕ ಕಾರಣಗಳಿಗಾಗಿ ಬ್ಯಾಂಕ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಬ್ಯಾಂಕ್ನಲ್ಲಿ ಪೂರ್ಣಾವಧಿ ನಿರ್ದೇಶಕರು ಇರುವುದು ಒಬ್ಬರೇ ಆದ್ದರಿಂದ ಈ ಬಗ್ಗೆ ಆರ್ಬಿಐನ ಮಾರ್ಗದರ್ಶನ ಕೋರುವೆ,’ ಎಂದು ಸಿಇಒ ಎಸ್ ಕೃಷ್ಣನ್ ಹೇಳಿದ್ದಾರೆ.
ಎಸ್ ಕೃಷ್ಣನ್ ಅವರು ತಮಿಳುನಾಡ್ ಮರ್ಕಂಟೈಲ್ ಬ್ಯಾಂಕ್ಗೆ ಸಿಇಒ ಆಗಿ ನೇಮಕವಾಗುವ ಮುನ್ನ ಬೇರೆ ಕೆಲ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ 2017ರಿಂದ 2020ರವರೆಗೂ ಕೆಲಸ ಮಾಡಿದ್ದರು. ಅದಾದ ಬಳಿಕ ಕೆನರಾ ಬ್ಯಾಂಕ್ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ, ಮತ್ತು ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ನಲ್ಲಿ ಸಿಇಒ ಆಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಎರಡು ಸಾವಿರ ರೂ ನೋಟುಗಳ ವಿನಿಮಯಕ್ಕೆ ಡೆಡ್ಲೈನ್ ವಿಸ್ತರಣೆ; ಅಕ್ಟೋಬರ್ವರೆಗೂ ಕಾಲಾವಕಾಶ ಸಿಗುವ ಸಾಧ್ಯತೆ
ಕಳೆದ ವಾರ ತಮಿಳುನಾಡು ಮರ್ಸಂಟೈಲ್ ಬ್ಯಾಂಕ್ನ ಚೆನ್ನೈ ಶಾಖೆಯಿಂದ ಅಚಾನಕ್ಕಾಗಿ ಟ್ಯಾಕ್ಸಿ ಚಾಲಕರೊಬ್ಬರ ಖಾತೆಗೆ 9,000 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕಿಂಗ್ ವಲಯಕ್ಕೆ ಇದು ಅಕ್ಷರಶಃ ಶಾಕ್ ಕೊಟ್ಟ ಘಟನೆಯಾಗಿತ್ತು. ತಾಂತ್ರಿಕ ದೋಷದಿಂದ ಈ ಪ್ರಮಾದ ಆಯಿತು ಎಂದು ಟಿಎಂಬಿ ಆ ವಹಿವಾಟಿನ ವಿವರ ನೀಡಿತು. ಸದ್ಯ, ಆ ತಪ್ಪು ಬೇಗನೇ ಗಮನಕ್ಕೆ ಬಂದು, ಚಾಲಕನ ಖಾತೆಯಿಂದ ಅಷ್ಟೂ ಹಣವನ್ನು ವಾಪಸ್ ಪಡೆದುಕೊಳ್ಳಲಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ