
ನವದೆಹಲಿ, ಫೆಬ್ರುವರಿ 25: ನಷ್ಟದಲ್ಲಿರುವ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಜಿಟಲ್ ಟಿವಿ ವ್ಯವಹಾರಗಳನ್ನು ವಿಲೀನಗೊಳಿಸಲು (Tata Play and Airtel DTH merger) ಟಾಟಾ ಗ್ರೂಪ್ ಮತ್ತು ಏರ್ಟೆಲ್ ಭಾರ್ತಿ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ವಿಲೀನ ಒಪ್ಪಂದ ರೂಪಿಸಲಾಗಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಜಿಟಲ್ ಟಿವಿ ಎರಡೂ ಕೂಡ ಡಿಟಿಎಚ್ ಸೇವೆಗಳನ್ನು ನೀಡುವ ವ್ಯವಹಾರದಲ್ಲಿವೆ. ಇತ್ತೀಚಿನ ದಿನಗಳಲ್ಲಿ ಜನರು ಡಿಟಿಎಚ್ ಬದಲು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ಟ್ರೆಂಡ್ ಇದೆ. ಹೀಗಾಗಿ, ಡಿಟಿಎಚ್ ಸರ್ವಿಸ್ಗೆ ಬೇಡಿಕೆ ಕಡಿಮೆ ಆಗಿದೆ. ಇದು ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ಗಳಿಗೆ ನಷ್ಟವಾಗಲು ಪ್ರಮುಖ ಕಾರಣವಾಗಿದೆ.
ಇತ್ತೀಚಿನ ವಿಲೀನದ ಟ್ರೆಂಡ್ ಇನ್ನೂ ಮುಂದುವರಿಯುತ್ತಿರುವಂತೆ ತೋರುತ್ತಿದೆ. 2016ರಲ್ಲಿ ಡಿಶ್ ಟಿವಿ ಮತ್ತು ವಿಡಿಯೋಕಾನ್ ಡಿಟಿಎಚ್ ವಿಲೀನಗೊಂಡಿದ್ದವು. ಡಿಜಿಟಲ್ ಕ್ಷೇತ್ರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ನ ವಯಾಕಾಮ್18 ಮತ್ತು ವಾಲ್ಟ್ ಡಿಸ್ನಿಯ ಸ್ಟಾರ್ ಇಂಡಿಯಾ ವ್ಯವಹಾರಗಳ ವಿಲೀನವಾಗಿತ್ತು. ಈಗ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ ವಿಲೀನದ ಪ್ರಯತ್ನ ನಡೆದಿದೆ.
ಟಾಟಾ ಪ್ಲೇ ಸದ್ಯ ಭಾರತದ ಅತಿದೊಡ್ಡ ಡಿಟಿಎಚ್ ಸೇವೆಯ ಕಂಪನಿ ಎನಿಸಿದೆ. 1.90 ಕೋಟಿ ಮನೆಗಳಲ್ಲಿ ಟಾಟಾ ಪ್ಲೇ ಸೇವೆ ಚಾಲ್ತಿಯಲ್ಲಿದೆ. ಡಿಟಿಎಚ್ ಮಾರುಕಟ್ಟೆಯಲ್ಲಿ ಟಾಟಾ ಪ್ಲೇ ಶೇ. 32ರಷ್ಟು ಪಾಲು ಹೊಂದಿದೆ. ನಂತರದ ಸ್ಥಾನ ಏರ್ಟೆಲ್ನದ್ದು. ಇದು ಶೇ. 29ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. 2023-24ರಲ್ಲಿ ಟಾಟಾ ಪ್ಲೇ ಆದಾಯ 4,327 ಕೋಟಿ ರೂ ಇದೆ. ಏರ್ಟೆಲ್ ಡಿಟಿಎಚ್ ಆದಾಯ 3,045 ಕೋಟಿ ರೂ ಇದೆ. ಆದರೆ, ಎರಡೂ ಸಂಸ್ಥೆಗಳು ನಷ್ಟ ಅನುಭವಿಸಿರುವುದು ಕ್ರಮವಾಗಿ 354 ಕೋಟಿ ರೂ ಹಾಗೂ 76 ಕೋಟಿ ರೂ. ಈಗ ಲಾಭದ ಹಳಿಗೆ ಬರಲು ಎರಡೂ ಸಂಸ್ಥೆಗಳಿಗೆ ವಿಲೀನದ ದಾರಿ ಸೂಕ್ತವೆನಿಸಿದಂತಿದೆ.
ಇದನ್ನೂ ಓದಿ: ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು
ಏರ್ಟೆಲ್ ಡಿಜಿಟಲ್ ಟಿವಿ ಸಂಸ್ಥೆ ಕೇವಲ ಡಿಟಿಎಚ್ ಸೇವೆ ಮಾತ್ರವಲ್ಲ, ಟೆಲಿಕಾಂ, ಬ್ರಾಡ್ಬ್ಯಾಂಡ್ ಸೇವೆಗಳನ್ನೂ ನೀಡುತ್ತದೆ. ಈಗ ಟಾಟಾ ಪ್ಲೇ ಮತ್ತು ಏರ್ಟೆಲ್ ಡಿಟಿಎಚ್ ವಿಲೀನದ ನಂತರ ಡಿಜಿಟಲ್ ಟಿವಿ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಯ ಉದಯವಾದಂತಾಗುತ್ತದೆ. ವರದಿಗಳ ಪ್ರಕಾರ, ವಿಲೀನದ ಬಳಿಕ ಶುರುವಾಗುವ ಹೊಸ ಕಂಪನಿಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯ ಪಾಲು ಶೇ. 52-55ರಷ್ಟಿರಬಹುದು. ಟಾಟಾ ಗ್ರೂಪ್ನ ಪಾಲು ಶೇ. 45-48ರಷ್ಟಿರಬಹುದು ಎನ್ನಲಾಗಿದೆ. ಏರ್ಟೆಲ್ನ ಸೀನಿಯರ್ ಮ್ಯಾನೇಜ್ಮೆಂಟ್ ಈ ಹೊಸ ಕಂಪನಿಯ ಆಡಳಿತ ಚುಕ್ಕಾಣಿ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ