ಭಾರತೀಯ ಕಂಪನಿಗಳಿಗೆ ಪ್ರಸಕ್ತ ಕ್ವಾರ್ಟರ್ನಲ್ಲಿ ಶೇ. 7-8ರಷ್ಟು ಆದಾಯವೃದ್ಧಿ ನಿರೀಕ್ಷೆ: ಐಸಿಆರ್ಎ
ICRA projection of revenue growth for India Inc in Q4: 2025ರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತೀಯ ಕಂಪನಿಗಳ ಆದಾಯ ಶೇ. 7ರಿಂದ 8ರಷ್ಟು ಹೆಚ್ಚಬಹುದು ಎಂದು ಐಸಿಆರ್ಎ ನಿರೀಕ್ಷಿಸಿದೆ. ಗ್ರಾಮೀಣ ಬೇಡಿಕೆ ಮತ್ತು ಸರ್ಕಾರದ ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಆಗಿರುವುದರಿಂದ ಕಂಪನಿಗಳ ಸರಾಸರಿ ಆದಾಯದಲ್ಲಿ ಏರಿಕೆಯಾಗಬಹುದು ಎನ್ನಲಾಗಿದೆ. ಹಿಂದಿನ ಕ್ವಾರ್ಟರ್ನಂತೆ ಈ ಬಾರಿಯೂ ಕಂಪನಿಗಳ ಪ್ರಾಫಿಟ್ ಮಾರ್ಜಿನ್ ಶೇ. 18ರ ಆಸುಪಾಸಿನಲ್ಲಿ ಇರಬಹುದು.

ನವದೆಹಲಿ, ಫೆಬ್ರುವರಿ 24: ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ನಲ್ಲಿ, ಅಂದರೆ 2025ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಭಾರತೀಯ ಕಾರ್ಪೊರೇಟ್ ಕಂಪನಿಗಳು ಶೇ. 7-8ರಷ್ಟು ಆದಾಯ ವೃದ್ಧಿ ಕಾಣಬಹುದು ಎಂದು ರೇಟಿಂಗ್ ಸಂಸ್ಥೆಯಾದ ಐಸಿಆರ್ಎ ಅಂದಾಜು ಮಾಡಿದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ ಹೆಚ್ಚಿದ ಬೇಡಿಕೆ (Rural demand), ಹಾಗೂ ಸರ್ಕಾರದಿಂದ ಹೆಚ್ಚಿದ ಬಂಡವಾಳ ವೆಚ್ಚದಿಂದಾಗಿ ಉದ್ಯಮ ವಲಯಕ್ಕೆ ಉತ್ತಮ ಬೆಳವಣಿಗೆ ಸಿಗುವ ಅವಕಾಶ ದಟ್ಟವಾಗಿದೆ ಎಂಬುದು ಈ ಏಜೆನ್ಸಿಯ ಅನಿಸಿಕೆ.
ಹಿಂದಿನ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್) ಭಾರತೀಯ ಕಂಪನಿಗಳ ಲಾಭದ ಮಾರ್ಜಿನ್ (ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್) ಉತ್ತಮವಾಗಿತ್ತು. ಈ ಕ್ವಾರ್ಟರ್ನಲ್ಲಿ ಶೇ. 18.2ರಿಂದ ಶೇ. 18.4ರ ಮಾರ್ಜಿನ್ ಮುಂದುವರಿಯಬಹುದು ಎಂದು ಐಸಿಆರ್ಎ ನಿರೀಕ್ಷಿಸಿದೆ.
ಇದನ್ನೂ ಓದಿ: ಅತಿವೇಗದ ಆರ್ಥಿಕತೆ; ಮುಂಬರುವ ವರ್ಷಗಳಲ್ಲೂ ಭಾರತ ಮುಂಚೂಣಿಯಲ್ಲಿ: ಮಧ್ಯಪ್ರದೇಶದಲ್ಲಿ ಪ್ರಧಾನಿ ಹೇಳಿಕೆ
‘ಮುಂಗಾರು ಬೆಳೆಗಳ ಉತ್ತಮ ಫಸಲಿನಿಂದ ಮಾರ್ಚ್ ಕ್ವಾರ್ಟರ್ನಲ್ಲಿ ಗ್ರಾಮೀಣ ಬೇಡಿಕೆ ಉತ್ತಮವಾಗಿರುವ ನಿರೀಕ್ಷೆ ಇದೆ. ಸದ್ಯ ಚಾಲನೆಯಲ್ಲಿರುವ ಹಿಂಗಾರು ಬೆಳೆಗಳ (Rabi season) ಫಸಲು ಬಗ್ಗೆಯೂ ನಿರೀಕ್ಷೆ ಹೆಚ್ಚಿದೆ. 2025ರಲ್ಲಿ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಇದ್ದರೆ ಆಹಾರ ಉತ್ಪಾದನೆ ಮತ್ತು ಗ್ರಾಮೀಣ ಬೇಡಿಕೆ ಉತ್ತಮವಾಗಿರಬಹುದು,’ ಎಂದು ಐಸಿಆರ್ಎ ಸೀನಿಯರ್ ವೈಸ್ ಪ್ರೆಸಿಡೆಂಟ್ ಕಿಂಜಲ್ ಶಾ ಹೇಳಿದ್ದಾರೆ.
ಐಸಿಆರ್ಎ ಪ್ರಕಾರ, ಎಲೆಕ್ಟ್ರಿಕ್ ವಾಹನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ನಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ (Sunrise sectors) ಸರ್ಕಾರದ ಪಿಎಲ್ಐ ಸ್ಕೀಮ್ನಿಂದ ಉತ್ತೇಜಿತಗೊಂಡು ಹೂಡಿಕೆಗಳು ಹೆಚ್ಚುವುದು ಮುಂದುವರಿಯಬಹುದು ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.
ಇದನ್ನೂ ಓದಿ: ಸತತ 5 ತಿಂಗಳು ಷೇರುಪೇಟೆ ಕುಸಿತ; 29 ವರ್ಷಗಳಲ್ಲಿ ಇಷ್ಟು ಸುದೀರ್ಘ ಹಿನ್ನಡೆ ಇದೇ ಮೊದಲು
ಜಾಗತಿಕ ಆರ್ಥಿಕ ಮತ್ತು ರಾಜಕೀಯ ಚಿತ್ರಣದಲ್ಲಿ ಪರಿವರ್ತನೆ, ವಿದೇಶ ವಿನಿಮಯ ದರಗಳಲ್ಲಿನ (foreign exchange rate) ಚಲನೆ, ಹೊಸ ಅಮೆರಿಕ ಅಧ್ಯಕ್ಷರ ನೀತಿಗಳ ಪರಿಣಾಮ, ಭಾರತ ಸರ್ಕಾರದ ವೆಚ್ಚದಲ್ಲಿ ಹೆಚ್ಚಳ, ದೇಶೀಯ ನಗರ ಬೇಡಿಕೆಯಲ್ಲಿ ಚೇತರಿಕೆ, ಈ ಅಂಶಗಳು ಸದ್ಯೋಭವಿಷ್ಯದಲ್ಲಿ ಗಮನಾರ್ಹ ಎನಿಸಲಿವೆ ಎಂದು ಐಸಿಆರ್ಎ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




