ನವದೆಹಲಿ, ಜುಲೈ 25: ಸಮರ್ಪಕ ವ್ಯವಸ್ಥೆಯ ಕಾರಣದಿಂದಾಗಿ ಕಳೆದ ಕೆಲ ವರ್ಷಗಳಿಂದ ಹೆಚ್ಚು ತೆರಿಗೆ ಸಂಗ್ರಹ (Tax Collection) ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಮನ್ (Nirmala Sitharaman) ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ತೆರಿಗೆ ದರ ಹೆಚ್ಚಿಸಿಲ್ಲ. ಆದರೂ ಕೂಡ ತೆರಿಗೆ ಆದಾಯ ಹೆಚ್ಚಾಗಿದೆ. ತೆರಿಗೆ ಸಂಗ್ರಹ ವ್ಯವಸ್ಥೆಯ ದಕ್ಷತೆಯಿಂದಾಗಿ (System Efficiency) ಅಧಿಕ ತೆರಿಗೆ ಸಂಗ್ರಹ ಸಾಧ್ಯವಾಗಿದೆ ಎಂದು ಸಚಿವೆ ಹೇಳಿದ್ದಾರೆ. ಜುಲೈ 24ರಂದು ನಡೆದ 164ನೇ ಆದಾಯ ತೆರಿಗೆ ದಿನಾಚರಣೆ (Income Tax Day Celebration) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ತೆರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬದಲಾವಣೆ ತಂದಿದೆ ಎಂದಿದ್ದಾರೆ.
ಬಹುತೇಕ ಸಮಸ್ಯೆಗಳಿಗೆ ತಂತ್ರಜ್ಞಾನವೇ ಉತ್ತರ ಎಂಬ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಬಹಳ ಸ್ಪಷ್ಟತೆ ಇದೆ. ಈ ವಿಚಾರ ಗಮನದಲ್ಲಿಟ್ಟುಕೊಂಡು ಕೇಂದ್ರೀಯ ನೇರ ತೆರಿಗೆ ಮಂಡಳಿ ಕೆಲಸ ನಿರ್ವಹಿಸುತ್ತಿದೆ. ಇದರಿಂದಾಗಿ ತೆರಿಗೆ ವಂಚನೆ ಪ್ರಕರಣಗಳು ಕಡಿಮೆ ಆಗಿವೆ. ತಂತ್ರಜ್ಞಾನದ ಕಾರಣದಿಂದಾಗಿ ಇನ್ಕಮ್ ಟ್ಯಾಕ್ಸ್ ಅಸೆಸ್ಮೆಂಟ್ನಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ: Income Tax Day 2023: ಸಿಪಾಯಿ ದಂಗೆಯಿಂದಾದ ನಷ್ಟಕ್ಕೆ ಪರಿಹಾರವಾಗಿ ಬ್ರಿಟಿಷರು ಜಾರಿಗೊಳಿಸಿದ್ದರು ಆದಾಯ ತೆರಿಗೆ
ಬಹಳ ಪಾರದರ್ಶಕವಾದ, ಗ್ರಾಹಕ ಸ್ನೇಹಿ ಆದಾಯ ತೆರಿಗೆ ವ್ಯವಸ್ಥೆಯು ಆದಾಯ ತೆರಿಗೆ ಪಾವತಿದಾರರಿಗೆ ಲಭ್ಯ ಇರುತ್ತದೆ ಎಂದು ಭರವಸೆ ನೀಡಿದ ಕೇಂದ್ರ ಸಚಿವೆ, ಈ ವರ್ಷ ನೋಟೀಸ್ ನೀಡಲಾದ 1 ಲಕ್ಷ ತೆರಿಗೆ ಪಾವತಿದಾರರ ಅಸೆಸ್ಮೆಂಟ್ಗಳನ್ನು ಮುಂದಿನ ವರ್ಷದ ಮಾರ್ಚ್ನೊಳಗೆ ಮುಗಿಸಲಾಗುವುದು ಎಂದೂ ಹೇಳಿದ್ದಾರೆ.
50 ಲಕ್ಷ ರೂಗಿಂತ ಹೆಚ್ಚು ಮೊತ್ತದ ವಾರ್ಷಿಕ ಆದಾಯ ಇರುವ ತೆರಿಗೆ ಪಾವತಿದಾರರಿಗೆ ಮಾತ್ರ ಈ ನೋಟೀಸ್ಗಳನ್ನು ನೀಡಲಾಗಿರುವುದು ತಿಳಿದುಬಂದಿದೆ. ಇತ್ತೀಚೆಗಷ್ಟೇ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ವಿನಾಯಿತಿ ಮಿತಿ ವಿಚಾರದ ಬಗ್ಗೆ ಸ್ಪಷ್ಟನೆ ನೀಡುತ್ತಾ, 7 ಲಕ್ಷದಿಂದ ಮೇಲ್ಪಟ್ಟು 27 ಸಾವಿರ ರೂವರೆಗೂ ತೆರಿಗೆ ವಿನಾಯಿತಿ ಇರುತ್ತದೆ ಎಂದಿದ್ದರು. ಅಧಿಕೃತವಾಗಿ ತೆರಿಗೆ ವಿನಾಯಿತಿ ಮಿತಿ ಇರುವುದು 7 ಲಕ್ಷ ರೂವರೆಗೆ ಮಾತ್ರ. ಆದರೆ, ಅದಕ್ಕೆ ಅಲ್ಪಸ್ವಲ್ಪ ಆದಾಯ ಹೆಚ್ಚಿದ್ದರೆ ತೆರಿಗೆ ಪಾವತಿಸಬಹುದಾ ಎಂಬ ಗೊಂದಲ ಏರ್ಪಟ್ಟ ಹಿನ್ನೆಲೆಯಲ್ಲಿ ಹೆಚ್ಚುವರಿ 27,000 ರೂವರೆಗೂ ವಿನಾಯಿತಿ ಮಿತಿ ಹೆಚ್ಚಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ