ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

Tata Consultancy Services layoff news: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯಲ್ಲಿ 30,000 ಉದ್ಯೋಗಿಗಳಿಗೆ ಕೆಲಸ ಹೋಗುತ್ತೆ ಎನ್ನುವ ಸುದ್ದಿ ಇದೆ. ಟಿಸಿಎಸ್​ನ ಮ್ಯಾನೇಜ್ಮೆಂಟ್ ಈ ಸುದ್ದಿಯನ್ನು ತಳ್ಳಿಹಾಕಿದ್ದು, ಶೇ. 2ರಷ್ಟು ಉದ್ಯೋಗಿಗಳಿಗೆ ಕೆಲಸ ಹೋಗಬಹುದು ಎಂದಿದೆ. ಆದರೆ, ಕೆಲ ಮಾಧ್ಯಮಗಳು ವಿವಿಧ ಮೂಲಗಳನ್ನು ಉಲ್ಲೇಖಿಸಿ, ಕೆಲಸ ಹೋಗುವ ಉದ್ಯೋಗಿಗಳ ಸಂಖ್ಯೆ 30,000 ದಾಟಬಹುದು ಎಂದು ವರದಿ ಮಾಡಿವೆ.

ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?
ಟಿಸಿಎಸ್

Updated on: Sep 30, 2025 | 6:27 PM

ನವದೆಹಲಿ, ಸೆಪ್ಟೆಂಬರ್ 30: ಭಾರತದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿ ಎನಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನಲ್ಲಿ (TCS) ಭಾರೀ ಪ್ರಮಾಣದಲ್ಲಿ ಲೇ ಆಫ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ರಾಚಿದೆ. ಟಿಸಿಎಸ್​ನಲ್ಲಿ 30,000 ಮಂದಿಯನ್ನು ಲೇ ಆಫ್ (Layoff) ಮಾಡಲಾಗುತ್ತಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಮೊನ್ನೆಯಿಂದ ಹರಿದಾಡುತ್ತಿದೆ. ಆದರೆ, ಟಿಸಿಎಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಮ್ಮ ಉದ್ಯೋಗಬಳಗದ ಪುನಾರಚನೆ ಕಾರ್ಯದಲ್ಲಿ ಶೇ. 2 ಮಂದಿಗೆ ಕೆಲಸ ಹೋಗಬಹುದು ಎಂದು ಹೇಳಿದೆ. ಅಂದರೆ, ಸುಮಾರು 12,000 ಮಂದಿ ಟಿಸಿಎಸ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

ಒಂದೇ ಕಂಪನಿಯಲ್ಲಿ 12,000 ಮಂದಿಗೆ ಕೆಲಸ ಹೋಗುವುದು ಸಣ್ಣ ಸಂಗತಿಯಂತೂ ಅಲ್ಲ. ಭಾರತದಲ್ಲಿ ಅತಿಹೆಚ್ಚು ಉದ್ಯೋಗ ನೀಡಿರುವ ದಾಖಲೆ ಟಿಸಿಎಸ್​ನದ್ದು. ಆರು ಲಕ್ಷಕ್ಕೂ ಅಧಿಕ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಭಾಗಗಳಿಂದ 12,000 ಮಂದಿಗೆ ಕೆಲಸ ಹೋಗುವ ನಿರೀಕ್ಷೆ ಇದೆ. ಈ ಲೇ ಆಫ್ ಪ್ರಕ್ರಿಯೆ ಈಗ್ಗೆ ಕೆಲವಾರು ತಿಂಗಳಿಂದ ಚಾಲನೆಯಲ್ಲಿದೆ ಎನ್ನುವ ಸುದ್ದಿ ಇದೆ.

ಇದನ್ನೂ ಓದಿ: ಅಮೆರಿಕದ ಹೊರಗೆ ನಿರ್ಮಾಣವಾದ ಯಾವುದೇ ಸಿನಿಮಾಗೂ ಶೇ. 100 ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್

ಕಳೆದ ಕೆಲ ತಿಂಗಳಿಂದ ಕಂಪನಿಯ ಮ್ಯಾನೇಜ್ಮೆಂಟ್ ವತಿಯಿಂದ ಹಲವು ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಬಲವಂತ ಮಾಡಲಾಗುತ್ತಿದೆ. ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸಲಾಗುತ್ತಿದೆ. ಒತ್ತಡಕ್ಕೆ ಬಗ್ಗದವರನ್ನು ಕೆಲಸದಿಂದ ಕಿತ್ತುಹಾಕಲಾಗುತ್ತಿದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳಲಿರುವ ಸಂಖ್ಯೆ 12,000 ಅಲ್ಲ, ಇನ್ನೂ ಹೆಚ್ಚಿರಬಹುದು ಎಂದು ಐಟಿ ಒಕ್ಕೂಟಗಳು, ಉದ್ಯೋಗಿಗಳು ಶಂಕಿಸುತ್ತಿದ್ದಾರೆ ಎಂದು ಆ ವರದಿಯಲ್ಲಿ ಹೇಳಲಾಗಿದೆ. ವಿವಿಧ ಮೂಲಗಳಿಂದ ತಮಗೆ ಬಂದ ಮಾಹಿತಿ ಪ್ರಕಾರ ಲೇ ಆಫ್ ಸಂಖ್ಯೆ 30,000 ದಾಟಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಭಾರತಕ್ಕೆ ತನ್ನ ರೇಟಿಂಗ್ ಉಳಿಸಿದ ಮೂಡೀಸ್; ಭಾರತದ ಮೇಲೆ ಅಮೆರಿಕದ ಸುಂಕದ ಪರಿಣಾಮ ಸೀಮಿತ ಎಂದ ಏಜೆನ್ಸಿ

ಆದರೆ, ಮನಿಕಂಟ್ರೋಲ್ ಉಲ್ಲೇಖಿಸಿದ ಮತ್ತೊಂದು ಮೂಲದ ಪ್ರಕಾರ, ಐಟಿ ಯೂನಿಯನ್​ಗಳು ಹೇಳಿದಂತೆ 30,000 ಮಂದಿ ಲೇ ಆಫ್ ಆಗುತ್ತಿದ್ದಾರೆನ್ನುವುದು ಸುಳ್ಳು. ಇಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದರೆ ಟಿಸಿಎಸ್ ಕಾರ್ಯನಿರ್ವಹಣೆಗೆ ತೊಂದರೆ ಆಗುತ್ತದೆ. ಐಟಿ ಯೂನಿಯನ್​ಗಳು ಉದ್ದೇಶಪೂರ್ವಕವಾಗಿ ಈ ಸಂಖ್ಯೆ ಹೇಳುತ್ತಿವೆ ಎನ್ನಲಾಗಿದೆ.

ವಿಶ್ವದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿ ಎನಿಸಿದ ಅಕ್ಸೆಂಚರ್ 11,000 ಉದ್ಯೋಗಿಗಳನ್ನು ಲೇ ಆಫ್ ಮಾಡಿರುವ ಸುದ್ದಿ ಇತ್ತೀಚೆಗೆ ಬಂದಿತ್ತು. ಈಗ ಟಿಸಿಎಸ್​ನ ಸರದಿಯಾಗಿದೆ. ಎಐ ಟೆಕ್ನಾಲಜಿ ಅಡಿ ಇಟ್ಟ ಬಳಿಕ ಐಟಿ ಕ್ಷೇತ್ರದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ