ಭಾರತಕ್ಕೆ ತನ್ನ ರೇಟಿಂಗ್ ಉಳಿಸಿದ ಮೂಡೀಸ್; ಭಾರತದ ಮೇಲೆ ಅಮೆರಿಕದ ಸುಂಕದ ಪರಿಣಾಮ ಸೀಮಿತ ಎಂದ ಏಜೆನ್ಸಿ
Moody's retains BAA3 Rating for India: ಇನ್ವೆಸ್ಟ್ಮೆಂಟ್ ಗ್ರೇಡ್ ವ್ಯಾಪ್ತಿಗೆ ಬರುವ ಬಿಎಎ1 ರೇಟಿಂಗ್ ಅನ್ನು ಮೂಡೀಸ್ ಭಾರತಕ್ಕೆ ನೀಡಿದೆ. ಭಾರತದ ಹಣಕಾಸು ಸ್ಥಿತಿ ಸ್ಥಿರವಾಗಿರುವುದರಿಂದ ಈ ರೇಟಿಂಗ್ ಅನ್ನು ಮೂಡೀಸ್ ಉಳಿಸಿದೆ. ವಿವಿಧ ದೇಶಗಳಿಗೆ ಹೂಡಿಕೆಯ ರಿಸ್ಕ್ ಎಷ್ಟಿದೆ ಎಂದು ಮೂಡೀಸ್ ವಿವಿಧ ರೇಟಿಂಗ್ಗಳ ಮೂಲಕ ತಿಳಿಸುತ್ತದೆ.

ನವದೆಹಲಿ, ಸೆಪ್ಟೆಂಬರ್ 29: ಜಾಗತಿಕ ರೇಟಿಂಗ್ ಏಜೆನ್ಸಿಯಾದ ಮೂಡೀಸ್ (Moody’s) ಭಾರತದ ಹಣಕಾಸು ಪರಿಸ್ಥಿತಿ ಬಗ್ಗೆ ವಿಶ್ವಾಸ ಮುಂದುವರಿಸಿದೆ. ತಾನು ನೀಡಿದ್ದ ಬಿಎಎ3 ರೇಟಿಂಗ್ (BAA3 rating) ಅನ್ನೇ ಅದು ಮುಂದುವರಿಸಿದೆ. ಭಾರತಕ್ಕೆ ಸಕಾರಾತ್ಮಕವಾಗಿರುವ ಅಂಶಗಳು ಹಾಗೂ ನಕಾರಾತ್ಮಕವಾಗಿರುವ ಅಂಶಗಳ ಬಗ್ಗೆ ಮೂಡೀಸ್ ತನ್ನದೇ ವ್ಯಾಖ್ಯಾನ ಮಾಡಿ, ಹೇಳಿಕೆ ಬಿಡುಗಡೆ ಮಾಡಿದೆ. ಒಟ್ಟಾರೆ ಭಾರತದ ಭವಿಷ್ಯದ ಹಣಕಾಸು ಪರಿಸ್ಥಿತಿ ಸ್ಥಿರವಾಗಿರಲಿದೆ ಎಂದೂ ಅದು ಅಂದಾಜು ಮಾಡಿದೆ.
‘ಭಾರತದ ಹಣಕಾಸು ಅಂಶಗಳು ಕ್ರಮೇಣ ಸುಧಾರಿಸುತ್ತಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ಬೆಳವಣಿಗೆ ಸಾಮರ್ಥ್ಯ ಉತ್ತಮವಾಗಿದೆ. ಆದರೆ, ಜಾಗತಿಕವಾದ ಸ್ಥೂಲ ಆರ್ಥಿಕ ಅಂಶವು ಅನಿಶ್ಚಿತವಾಗಿರುವುದರಿಂದ ಹಣಕಾಸು ಬಿಗಿತ ಹೆಚ್ಚಿರುತ್ತದೆ. ಆದಾಯ ಕಡಿಮೆ ಆಗಬಹುದು. ಸಾಲ ಇಳಿಸುವ ಹಾದಿ ಕಠಿಣಗೊಳ್ಳಬಹುದು’ ಎಂದು ಸಕಾರಾತ್ಮಕ ಮತ್ತು ನಕಾರಾತ್ಮಕವಾದ ಸಂಗತಿಗಳನ್ನು ಮೂಡೀಸ್ ತನ್ನ ವರದಿಯಲ್ಲಿ ಬಿಚ್ಚಿಟ್ಟಿದೆ.
ಇದನ್ನೂ ಓದಿ: RBI MPC Meeting Today: ಇಂದಿನಿಂದ ಆರ್ಬಿಐ ಎಂಪಿಸಿ ಸಭೆ; ಅ. 1ಕ್ಕೆ ಪ್ರಮುಖ ನಿರ್ಧಾರಗಳ ಪ್ರಕಟ
ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದು, ವಿತ್ತೀಯ ಕೊರತೆ ಸರಿದೂಗಿಸಲು ಆಂತರಿಕವಾದ ಹಣಕಾಸು ತಳಹದಿ ಸ್ಥಿರವಾಗಿರುವುದು ಈ ಕಾರಣಕ್ಕೆ ಭಾರತಕ್ಕೆ ರೇಟಿಂಗ್ ಅನ್ನು ಉಳಿಸಲಾಗಿದೆ ಎಂದು ಮೂಡೀಸ್ ಏಜೆನ್ಸಿ ಹೇಳಿದೆ.
ಮೂಡೀಸ್ನ ಕ್ರೆಡಿಟ್ ರೇಟಿಂಗ್ ಲೆಕ್ಕಾಚಾರ ಹೇಗೆ?
ಮೂಡೀಸ್ನಂತಹ ಏಜೆನ್ಸಿಗಳು ವಿವಿಧ ದೇಶಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಕ್ರೆಡಿಟ್ ರೇಟಿಂಗ್ ನೀಡುತ್ತವೆ. ಈ ದೇಶಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ರಿಸ್ಕ್ ಇರುತ್ತೆ ಎಂಬುದನ್ನು ಈ ರೇಟಿಂಗ್ಗಳು ಸೂಚಿಸುತ್ತವೆ.
ಮೂಡೀಸ್ ಸಂಸ್ಥೆ ಎಎಎನಿಂದ ಹಿಡಿದು ಸಿ ವರೆಗೂ ವಿವಿಧ ರೇಟಿಂಗ್ಗಳನ್ನು ನೀಡುತ್ತದೆ. ಇನ್ವೆಸ್ಟ್ಮೆಂಟ್ ಗ್ರೇಡ್ನಲ್ಲಿ ಎಎಎನಿಂದ ಬಿಎಎ3ವರೆಗೂ ರೇಟಿಂಗ್ ಇದೆ. ಎಎಎ, ಎಎ1 ಹೀಗೆ ಅನುಕ್ರಮವಾಗಿ ಇದು ಸಾಗುತ್ತದೆ. ಭಾರತಕ್ಕೆ ನೀಡಲಾಗಿರುವ ಬಿಎಎ3 ರೇಟಿಂಗ್ ಇನ್ವೆಸ್ಟ್ಮೆಂಟ್ ಗ್ರೇಡ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ರೇಟಿಂಗ್ ಇಳಿಸಿಬಿಟ್ಟರೆ ಭಾರತ ಸ್ಪೆಕುಲೇಟಿವ್ ಗ್ರೇಡ್ ಹಂತಕ್ಕೆ ಜಾರುತ್ತದೆ. ಅಂದರೆ, ಹೂಡಿಕೆ ಮಾಡಲು ರಿಸ್ಕ್ ಬಹಳ ಇರುವ ಸ್ಥಳವೆನಿಸುತ್ತದೆ.
ಇದನ್ನೂ ಓದಿ: 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಅಕ್ಸೆಂಚರ್; ಸಿಇಒ ಜೂಲೀ ಸ್ವೀಟ್ ಬಿಚ್ಚಿಟ್ಟ ಕಾರಣ ಇದು
ಸ್ಪೆಕುಲೇಟಿವ್ ಗ್ರೇಡ್ನಲ್ಲಿ ಬಿಎ1ನಿಂದ ಹಿಡಿದು ಸಿ ವರೆಗೆ ವಿವಿಧ ರೇಟಿಂಗ್ಗಳಿವೆ. ಸಿಎಎ1ನಿಂದ ಕೆಳಗಿರುವ ರೇಟಿಂಗ್ಗಳು ಆ ದೇಶದಲ್ಲಿ ಹೂಡಿಕೆ ಬಹಳ ರಿಸ್ಕಿ ಎಂಬುದನ್ನು ಸೂಚಿಸುತ್ತದೆ.
ಭಾರತದ ಮೇಲೆ ಅಮೆರಿಕ ಸುಂಕದ ಪರಿಣಾಮ?
ಭಾರತದ ಮೇಲೆ ಅಮೆರಿಕ ಹೇರಿರುವ ಶೇ. 50ರಷ್ಟು ಸುಂಕದಿಂದ ಏನು ಪರಿಣಾಮ ಆಗಬಹುದು ಎಂದು ಮೂಡೀಸ್ ತನ್ನದೇ ಅಂದಾಜು ಮಾಡಿದೆ. ಅದರ ಪ್ರಕಾರ ನಕಾರಾತ್ಮಕ ಪರಿಣಾಮ ಬಹಳ ಸೀಮಿತವಾಗಿ ಆಗಬಹುದು. ಆದರೆ, ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನಲ್ಲಿ ದೀರ್ಘಾವಧಿಯಲ್ಲಿ ಭಾರತದ ಪ್ರಗತಿಗೆ ತುಸು ಹಿನ್ನಡೆಯಾಗಬಹುದು ಎಂದು ಮೂಡೀಸ್ ವಿಶ್ಲೇಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




