
ನವದೆಹಲಿ, ನವೆಂಬರ್ 19: ಹಾಲಿವುಡ್ನ ಸ್ಕೈಫೈ ಸಿನಿಮಾಗಳಲ್ಲಿ ಕಾಣುವ ದೃಶ್ಯಗಳು ಮುಂದಿನ ದಿನಗಳಲ್ಲಿ ನಿಜವಾಗುವಂತೆ ಕಾಣುತ್ತಿದೆ. ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸಬೇಕೆನ್ನುವ ಹಠವನ್ನು ಮನುಷ್ಯ ಬಿಟ್ಟಿಲ್ಲ. ಆ ನಿಟ್ಟಿನಲ್ಲಿ ಪ್ರಯೋಗಗಳು ನಡೆದೇ ಇವೆ. ಈ ಮಧ್ಯೆ ಬಾಹ್ಯಾಕಾಶದಲ್ಲಿ ಹಾಗೂ ಚಂದ್ರನಲ್ಲಿ ಡಾಟಾ ಸೆಂಟರ್ಗಳನ್ನು (Data Centers) ಸ್ಥಾಪಿಸುವ ಗಂಭೀರ ಪ್ರಯತ್ನಗಳು ನಡೆದಿವೆ. ಎಐ ಪರಿಕರಗಳು (AI infrastructure) ಬಂದ ಬಳಿಕ ಮನುಷ್ಯನಿಗೆ ಅಗಾಧವಾಗಿರುವ ವಿದ್ಯುತ್ ಅಗತ್ಯವನ್ನು ಪೂರೈಸುವುದು ಕಷ್ಟವಾಗಿದೆ. ಈ ಸಮಸ್ಯೆ ನೀಗಿಸಲು ಮನುಷ್ಯನ ಕಣ್ಣು ಈಗ ಭೂಮಿಯಾಚೆ ನೆಟ್ಟಿದೆ.
ಮನುಷ್ಯರು ಬಳಸುವ ಡಾಟಾವನ್ನು ನಿಭಾಯಿಸಲು ಬೃಹತ್ ಡಾಟಾ ಸೆಂಟರ್ಗಳು ಬೇಕು. ಈ ಡಾಟಾ ಸೆಂಟರ್ಗಳನ್ನು ನಿಭಾಯಿಸಲು ಭಾರೀ ಪ್ರಮಾಣದ ವಿದ್ಯುತ್ ಬೇಕು. ಆ ವಿದ್ಯುತ್ ಶಕ್ತಿಯ ಬಿಸಿ ತಣಿಸಲು ಸಾಕಷ್ಟು ನೀರು ಅಥವಾ ತಂಪು ಬೇಕು. ಸದ್ಯಕ್ಕೆ ಇದನ್ನು ನಿಭಾಯಿಸಲಾಗುತ್ತಿದೆ. ಆದರೆ, ಮುಂಬರುವ ದಿನಗಳಲ್ಲಿ ಎಐ ಇನ್ನೂ ಹೆಚ್ಚು ಬೆಳೆಯಲಿದೆ. ದೊಡ್ಡ ದೊಡ್ಡ ಡಾಟಾ ಸೆಂಟರ್ಗಳು ಸಾಕಷ್ಟು ಸಂಖ್ಯೆಯಲ್ಲಿ ಬೇಕಾಗುತ್ತದೆ. ಇದನ್ನು ನಿಭಾಯಿಸಲು ಭೂಮಿಯಲ್ಲಿರುವ ಸಂಪನ್ಮೂಲ ಸಾಕಾಗುವುದಿಲ್ಲ. ಭೂಮಿಯಲ್ಲಿ ಬೀಳುವ ಸೂರ್ಯನ ಬಿಸಿಲು ಕೂಡ ಸೀಮಿತವೇ ಇದೆ. ಈ ಕಾರಣಕ್ಕೆ ಗೂಗಲ್, ಎನ್ವಿಡಿಯಾ, ಅಮೇಜಾನ್ ಮೊದಲಾದ ಸಂಸ್ಥೆಗಳು ಭೂಮಿಯಾಚೆ ನೋಡತೊಡಗಿವೆ.
ಇದನ್ನೂ ಓದಿ: ಹೂಡಿಕೆದಾರರಿಗೆ Escrow ಅಕೌಂಟ್; ಸರ್ಕಾರದಿಂದ ಹಣ ಗ್ಯಾರಂಟಿ; ಆಂಧ್ರ ಸಿಎಂ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ
ಗೂಗಲ್ ಸಂಸ್ಥೆಯು ಭೂಕಕ್ಷೆಯಲ್ಲಿ ಉಪಗ್ರಹ ಮೂಲಕ ಸೌರಶಕ್ತ ಎಐ ಡಾಟಾ ಸೆಂಟರ್ಗಳನ್ನು ಸ್ಥಾಪಿಸಲು ಹೊರಟಿದೆ. ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್ಗಳಿಗೆ ಬೇಕಾದಷ್ಟು ಸೂರ್ಯನ ಶಕ್ತಿ ಮತ್ತು ತಂಪು ಎರಡೂ ಸಿಗುತ್ತದೆ. ಗೂಗಲ್ನ ಸನ್ಕ್ಯಾಚರ್ ಮತ್ತು ಮೂನ್ಶಾಟ್ ಯೋಜನೆಗಳ ಪ್ರಯೋಗ ಈಗಾಗಲೇ ಶುರುವಾಗಿದೆ.
ಚೀನಾ ಕೂಡ ಕೆಳ ಭೂಕಕ್ಷೆಗೆ 12 ಎಐ ಶಕ್ತ ಸೆಟಿಲೈಟ್ಗಳನ್ನು ಸ್ಥಾಪಿಸುವ ಯೋಜನೆ ಹಾಕಿದೆ. ಇದು ಕೈಗೂಡಿದರೆ ವಿಶ್ವದ ಮೊದಲ ಆರ್ಬಿಟಲ್ ಸೂಪರ್ಕಂಪ್ಯೂಟರ್ ನೆಟ್ವರ್ಕ್ ಎನಿಸಲಿದೆ.
ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ಭೂಮಿಗಿಂತ ಚಂದ್ರ ಸೂಕ್ತವಂತೆ. ಚಂದ್ರನಲ್ಲಿ ಬಹಳ ವ್ಯಾಪಕವಾದ ಸೂರ್ಯನ ಶಕ್ತಿ ಸಿಗುತ್ತದೆ. ಅದರ ಗುರುತ್ವಾಕರ್ಷಣ ಶಕ್ತಿಯೂ ಕಡಿಮೆ ಇರುತ್ತದೆ. ಇದರಿಂದ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ಚಂದ್ರ ಬಹಳ ಸೂಕ್ತ ಸ್ಥಳ ಎಂದು ಪರಿಣಿತರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ
‘ಭೂಮಿಯನ್ನು ನಾವು ಉಳಿಸಲೇಬೇಕು. ಪ್ಲಾನ್ ಬಿ ಇಲ್ಲವೇ ಇಲ್ಲ’ ಎಂದು ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಸ್ಪಷ್ಟವಾಗಿ ಹೇಳುತ್ತಾರೆ. ಅಂದರೆ, ಅವರ ಪ್ರಕಾರ ಚಂದ್ರನು ಭೂಮಿಯ ಮುಂದಿನ ಕಾರ್ಯಕ್ಷೇತ್ರವಾಗುವುದು ನಿಶ್ಚಿತ. ಜೆಫ್ ಬೇಜೋಸ್ ಅವರ ಬ್ಲೂ ಆರಿಜಿನ್ (Blue Origin) ಸಂಸ್ಥೆಯು ಚಂದ್ರನ ಕಕ್ಷೆಯಲ್ಲಿ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ನೆರವಾಗುವ ರಾಕೆಟ್ ಮತ್ತು ಲ್ಯಾಂಡರ್ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ