ಸೋಲ್, ಫೆಬ್ರುವರಿ 7: ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ (Tesla) ದಕ್ಷಿಣ ಕೊರಿಯಾ ದೇಶದಲ್ಲಿ ಮಾರುಕಟ್ಟೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಜನವರಿಯ ಇಡೀ ಒಂದು ತಿಂಗಳಲ್ಲಿ ಟೆಸ್ಲಾ ಒಂದೇ ಒಂದು ಕಾರು ಮಾರಾಟ ಮಾಡಿದೆ. ತಂತ್ರಜ್ಞಾನದಲ್ಲಿ ಬಹಳ ಮುಂದಿರುವ ಕೊರಿಯಾದಲ್ಲಿ ಇವಿ (EV- electric vehicle) ಮಾರಲು ಟೆಸ್ಲಾ ಹರಸಾಹಸ ಮಾಡಬೇಕಾಗಿದೆ. ಒಂದು ತಿಂಗಳಲ್ಲಿ ಒಂದು ಕಾರ್ ಮಾತ್ರ ಮಾರಾಟವಾಗುವುದೆಂದರೆ ದಾರುಣ ಪರಿಸ್ಥಿತಿಯೇ. 2022ರಲ್ಲಿ ಜುಲೈ ತಿಂಗಳಲ್ಲಿ ಟೆಸ್ಲಾದ ಒಂದೂ ಕಾರು ಸೇಲ್ ಆಗಿರಲಿಲ್ಲ. ಅದಾದ ಬಳಿಕ ಟೆಸ್ಲಾಗೆ ಆಗಿರುವ ಅತ್ಯಂತ ನಿರಾಸೆ ಎಂದರೆ ಈ ವರ್ಷದ ಜನವರಿಯದ್ದು. ಆದರೆ, ದಕ್ಷಿಣ ಕೊರಿಯಾದಲ್ಲಿ ಟೆಸ್ಲಾ ಮಾತ್ರವಲ್ಲ, ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳೂ ಡಿಮ್ಯಾಂಡ್ ಕಳೆದುಕೊಂಡಿವೆ. ಡಿಸೆಂಬರ್ಗೆ ಹೋಲಿಸಿದರೆ ಜನವರಿಯಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ಶೇ. 80ರಷ್ಟು ಕಡಿಮೆ ಆಗಿದೆ. ಇದಕ್ಕೆ ಕಾರಣಗಳೂ ಹಲವುಂಟು.
ಇದನ್ನೂ ಓದಿ: ಕೇವಲ 15,000 ರೂ ಸಂಬಳ ಪಡೆಯುವ ಸಿಇಒ; ಜೀವನ ಹೇಗೆ ನಡೆಸ್ತಾರೆ ಕುನಾಲ್? ಎಂಥವರನ್ನೂ ಕರಗಿಸೀತು ಇವರ ಜೀವನ ಕಥೆ
ದಕ್ಷಿಣ ಕೊರಿಯಾದ ಸರ್ಕಾರ ಈ ಫೆಬ್ರುವರಿ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಜನವರಿಯಲ್ಲಿ ಅಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮಾರಾಟ ಆಗಿಲ್ಲದಿರಬಹುದು.
ಆದರೆ, ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾದ ಮಾಡೆಲ್ ವೈ ಎಲೆಕ್ಟ್ರಿಕ್ ಕಾರು 2023ರಲ್ಲಿ ಟಾಪ್ ಸೆಲ್ಲರ್ ಎನಿಸಿತ್ತು. ಆ ಕಾರು ಕೊರಿಯಾದಲ್ಲಿ ಮಾರಾಟ ಕಾಣದೇ ಹೋಗಿದ್ದು ಅಚ್ಚರಿ ಮೂಡಿಸಿದೆ.
ಟೆಸ್ಲಾದ ಮಾಡೆಲ್ ವೈ ಕಾರು ಚೀನಾದಲ್ಲಿ ತಯಾರಾಗುತ್ತದೆ. ಕೊರಿಯಾದ ಹಲವು ಜನರಿಗೆ ಮೇಡ್ ಇನ್ ಚೀನಾದ ಉತ್ಪನ್ನವೆಂದರೆ ಅಷ್ಟಕಷ್ಟೇ. ಗುಣಮಟ್ಟ ಕಳಪೆಯಾಗಿರುತ್ತದೆಂಬ ಭಾವನೆ ಅಲ್ಲಿನ ಜನರಲ್ಲಿದೆ. ಟೆಸ್ಲಾ ಮೇಡ್ ಇನ್ ಚೀನಾ ಎಂದಾದ್ದರಿಂದ ಅದರ ಬಗ್ಗೆ ಅವರ ಆಸಕ್ತಿ ಕಡಿಮೆಯೇ ಆಗಿದೆ.
2022ರಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಥಳೀಯ ಕಂಪನಿಗಳ ಕಾರುಗಳೇ ಹೆಚ್ಚಾಗಿ ಮಾರಾಟವಾಗಿರುವುದು. ಹ್ಯೂಂಡಾಯ್, ಕಿಯಾದ ಕಾರುಗಳು ಇವಿ ಮಾರುಕಟ್ಟೆಯಲ್ಲಿ ಅಧಿಕವಾಗಿ ಆಕ್ರಮಿಸಿವೆ. ಟೆಸ್ಲಾದ ಮಾಡೆಲ್ ವೈ ಮತ್ತು ಮಾಡೆಲ್ 3 ಕಾರುಗಳು ಒಟ್ಟು 14-15 ಸಾವಿರ ಸಂಖ್ಯೆಯಲ್ಲಿ ಮಾರಾಟವಾಗಿವೆ.
ಟೆಸ್ಲಾದ ಮಾಡೆಲ್ ವೈ ಕಾರು ದಕ್ಷಿಣ ಕೊರಿಯಾ ದೇಶದಲ್ಲಿ 5.7 ಕೋಟಿ ವೋನ್ ಮಾರಾಟ ದರ ಹೊಂದಿದೆ. ಅಂದರೆ ಭಾರತೀಯ ರುಪಾಯಿಯಲ್ಲಿ ಅದು 35 ಲಕ್ಷ ರುಪಾಯಿಗೆ ಅಲ್ಲಿ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ