ಷೇರುವಹಿವಾಟಿನಲ್ಲಿ ಗಂಡಸರು ವಿಫಲರಾಗ್ತಾರೆ, ಹೆಂಗಸರು ಒಳ್ಳೆಯ ಹೂಡಿಕೆದಾರರಾಗುತ್ತಾರೆ ಎಂದು ಸೆಬಿ ಸಂಸ್ಥೆಯ ಪೂರ್ಣಾವಧಿ ಸದಸ್ಯ ಅನಂತನಾರಾಯಣ್ ಗೋಪಾಲಕೃಷ್ಣನ್ (SEBI whole-time member Anant Narayan Gopalakrishnan) ಹೇಳುತ್ತಾರೆ. ಮನಿಕಂಟ್ರೋಲ್ನ ಕ್ರಿಯೇಟರ್ ಎಕನಾಮಿ ಸಮಿಟ್ 2023 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಷೇರು ವಹಿವಾಟು, ಷೇರುಪೇಟೆ ವ್ಯವಹಾರಗಳು ಹಾಗೂ ಗಂಡಸರು ಮತ್ತು ಹೆಂಗಸರ ಮಧ್ಯೆ ಹೂಡಿಕೆ ಪ್ರವೃತ್ತಿಯಲ್ಲಿರುವ ವ್ಯತ್ಯಾಸಗಳ ಬಗ್ಗೆ ಬಹಳಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅನಂತನಾರಾಯಣ್ ಗೋಪಾಲಕೃಷ್ಣನ್ ಕೆಲ ಸಂಶೋಧನಾ ವರದಿಯ ಅಂಶವನ್ನಾಧರಿಸಿ ಹೂಡಿಕೆ ಬಗ್ಗೆ ಟಿಪ್ಸ್ ನೀಡಿದ್ದಾರೆ. ಅವರ ಪ್ರಕಾರ ನೀವು ಷೇರು ಏರಿಕೆ ವೇಳೆಯೋ, ಇಳಿಕೆ ವೇಳೆಯೋ ವಹಿವಾಟು ನಡೆಸುವುದಕ್ಕಿಂತ ಷೇರು ಹೂಡಿಕೆ ಮಾಡಿ ಸುಮ್ಮನಾಗಿಟ್ಟರೆ ಹೆಚ್ಚು ಲಾಭ ಮಾಡಬಹುದು. ನೀವು ಟ್ರೇಡಿಂಗ್ ಮಾಡಿದಷ್ಟೂ ಲಾಭ ಕಡಿಮೆ ಆಗುತ್ತಾ ಹೋಗುತ್ತದೆ. ಆದ್ದರಿಂದ ಹೆಚ್ಚು ಟ್ರೇಡಿಂಗ್ ಮಾಡದೇ ಹೂಡಿಕೆ ಮಾಡಿ ಸುಮ್ಮನಿರುವುದು ಉತ್ತಮ ಎಂದು ಸೆಬಿ ಪೂರ್ಣಾವಧಿ ಸದಸ್ಯರಾದ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ ತಿರಸ್ಕೃತಗೊಳ್ಳದಂತೆ ಎಚ್ಚರ ವಹಿಸುವುದು ಹೇಗೆ? ತಜ್ಞರ ಈ ಸಲಹೆ ನೋಡಿ
ಇಲ್ಲಿ ಎ ಗೋಪಾಲಕೃಷ್ಣನ್ ಇನ್ನೊಂದು ಸಂಶೋಧನಾ ವರದಿ ಆಧರಿಸಿ ಮತ್ತೊಂದು ಕುತೂಹಲಕಾರಿ ಸಂಗತಿ ತಿಳಿಸಿದ್ದಾರೆ. ಅವರ ಪ್ರಕಾರ, ಹೆಂಗಸರು ರಿಸ್ಕ್ ತೆಗೆದುಕೊಳ್ಳಲು ಭಯ ಪಡುತ್ತಾರೆ. ಹೀಗಾಗಿ ಅವರು ಹೆಚ್ಚು ಟ್ರೇಡಿಂಗ್ ಮಾಡುವುದಿಲ್ಲ. ಪರಿಣಾಮವಾಗಿ, ರಿಟರ್ನ್ಸ್ ಹೆಚ್ಚು ಸಿಗುತ್ತದೆ. ಹೆಂಗಸರಿಗೆ ಹೋಲಿಸಿದರೆ ಹೆಚ್ಚು ಸಾಹಸಿಪ್ರವೃತ್ತಿಯವರಾದ ಗಂಡಸರು ರಿಸ್ಕ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅವರು ಟ್ರೇಡಿಂಗ್ ಹೆಚ್ಚು ಮಾಡುತ್ತಾರೆ. ಪರಿಣಾಮವಾಗಿ ರಿಟರ್ನ್ಸ್ ಕಡಿಮೆ ಆಗುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
‘ರಿಸರ್ಚ್ ಪೇಪರ್ನಿಂದ ನಾನು ಕಂಡುಕೊಂಡ ಸಂಗತಿ ಎಂದರೆ, ಪುರುಷರು ಹೆಚ್ಚು ಆತ್ಮವಿಶ್ವಾಸ ಹೊಂದಿರುವುದರಿಂದ ಹೆಚ್ಚು ಟ್ರೇಡ್ ಮಾಡುತ್ತಾರೆ. ಹೆಚ್ಚು ಕಳೆದುಕೊಳ್ಳುತ್ತಾರೆ. ಹಳೆಯ ರಿಸರ್ಚ್ ಪೇಪರ್ ಪ್ರಕಾರ, ಯಾರು ಉತ್ತಮ ಹೂಡಿಕೆದಾರರೆನಿಸುತ್ತಾರೆ? ಪುರುಷನಾ, ಮಹಿಳೆಯಾ? ಉತ್ತರ ಮಹಿಳೆಯೇ’ ಎಂದು ಅನಂತನಾರಾಯಣ್ ಗೋಪಾಲಕೃಷ್ಣನ್ ತಿಳಿಸುತ್ತಾರೆ.
ಇದನ್ನೂ ಓದಿ: ಬಾಪ್ ಆಫ್ ಚಾರ್ಟ್: ಷೇರುಮಾರುಕಟ್ಟೆಯ ಕಿಂಗ್ ಮೇಕರ್ ಆಗುತ್ತೇನೆಂದು ಜನರಿಗೆ ಮಂಕುಬೂದಿ ಹಾಕಿರುವ ನಸೀರ್ ಅನ್ಸಾರಿ ಕಥೆ ಕೇಳಿ..!
ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಫೈನಾನ್ಸ್ ಇನ್ಫ್ಲುಯೆನ್ಸರ್ಗಳ ಸಲಹೆ ನಂಬಿ ಜನರು ಹಣ ಕಳೆದುಕೊಂಡ ಬಗ್ಗೆ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಅನಂತನಾರಾಯಣ್, ‘ನಿಮ್ಮ ಅಮ್ಮನೋ ಅಥವಾ ಸಹೋದರನೋ ಆಗಿದ್ದರೆ ಅವರಿಗೆ ಏನು ಸಲಹೆ ನೀಡುತ್ತೀರಿ ಎಂಬುದನ್ನು ಯೋಚಿಸಿ. ನೀವು ಷೇರು ವ್ಯವಹಾರಗಳ ಬಗ್ಗೆ ಸಲಹೆ ನೀಡುತ್ತೀರಿ ಎಂದರೆ ನೀವು ಅಡ್ವೈಸರ್ ಎನಿಸುತ್ತೀರಿ. ಅಡ್ವೈಸರ್ ಆಗಲು ನೀವು ಸೆಬಿಯಲ್ಲಿ ನೊಂದಾಯಿಸಬೇಕಾಗುತ್ತದೆ,’ ಎಂದು ಅನಧಿಕೃತವಾಗಿ ಟ್ರೇಡಿಂಗ್ ಸಲಹೆಗಳನ್ನು ನೀಡುವ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರುಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ