Income Tax: ಹೆಚ್ಚಿನ ಮೌಲ್ಯದ ಈ ನಗದು ವಹಿವಾಟುಗಳನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ಗಮನಕ್ಕೆ ತನ್ನಿ

| Updated By: Srinivas Mata

Updated on: Jul 13, 2022 | 12:25 PM

ಕೆಲವು ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ವರದಿ ಮಾಡಬೇಕು. ಯಾವುವು ಆ ವಹಿವಾಟುಗಳು ಹಾಗೂ ಅದನ್ನು ತಿಳಿಸದಿದ್ದರೆ ಏನಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

Income Tax: ಹೆಚ್ಚಿನ ಮೌಲ್ಯದ ಈ ನಗದು ವಹಿವಾಟುಗಳನ್ನು ಕಡ್ಡಾಯವಾಗಿ ಆದಾಯ ತೆರಿಗೆ ಇಲಾಖೆಗೆ ಗಮನಕ್ಕೆ ತನ್ನಿ
ಸಾಂದರ್ಭಿಕ ಚಿತ್ರ
Follow us on

ನಿರ್ದಿಷ್ಟ ಮಿತಿಯನ್ನು ಮೀರಿ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಮಾಡಿದಲ್ಲಿ ಆದಾಯ ತೆರಿಗೆ ಇಲಾಖೆಯು ಅವುಗಳ ಮೇಲ್ವಿಚಾರಣೆ ಮಾಡುತ್ತದೆ. ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲಿಂಗ್‌ನಲ್ಲಿ ಅಂತಹ ವಹಿವಾಟುಗಳನ್ನು ನಮೂದಿಸಲು ಒಂದು ವೇಳೆ ನೀವು ಮರೆತಲ್ಲಿ ಅಥವಾ ಉದ್ದೇಶಪೂರ್ವಕವಾಗಿ ತಪ್ಪಿಸಿದಲ್ಲಿ ಅಧಿಕಾರಿಗಳಿಂದ ನೋಟಿಸ್ ಬರುತ್ತದೆ. ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್ ಹೂಡಿಕೆಗಳು, ಆಸ್ತಿ-ಸಂಬಂಧಿತ ವಹಿವಾಟುಗಳು ಮತ್ತು ಷೇರು ವಹಿವಾಟು ಸೇರಿದಂತೆ ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳ ಮೇಲೆ ನಿಗಾ ಇರಿಸುತ್ತದೆ. ಈ ವಹಿವಾಟುಗಳಿಗೆ ಇರುವ ಮಿತಿಯನ್ನು ಮೀರಿದಲ್ಲಿ ನೋಟಿಸ್ ಪಡೆಯುವುದನ್ನು ತಪ್ಪಿಸಲು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳ ದಾಖಲೆಗಳನ್ನು ಪಡೆಯುವುದಕ್ಕೆ ಹಲವಾರು ಸರ್ಕಾರಿ ಏಜೆನ್ಸಿಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಆದಾಯ ತೆರಿಗೆ ಇಲಾಖೆಯು ಮಾಡಿಕೊಂಡಿದೆ.

ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸಲು ಮತ್ತು ತೆರಿಗೆದಾರರ ನೋಟಿಸ್ ಹಾಗೂ ಪರಿಶೀಲನೆಯನ್ನು ತಪ್ಪಿಸುವ ತನ್ನ ಇ-ಅಭಿಯಾನದ ಭಾಗವಾಗಿ ತೆರಿಗೆ ಇಲಾಖೆಯು ಶಾಶ್ವತ ಖಾತೆ ಸಂಖ್ಯೆಗೆ (PAN) ಜೋಡಣೆ ಮಾಡಲಾದ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಬಹಿರಂಗಪಡಿಸದಿರುವ ಬಗ್ಗೆ ಇ-ಮೇಲ್ ಮತ್ತು ಎಸ್ಸೆಮ್ಮೆಸ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಐಟಿಆರ್​ನಲ್ಲಿ ವರದಿ ಮಾಡದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಸೆಳೆಯಬಹುದಾದ ಕೆಲವು ವಹಿವಾಟುಗಳು ಇಲ್ಲಿವೆ. ಆ ಬಗ್ಗೆ ಮಾಹಿತಿ ನಿಮ್ಮೆದುರು ಇದೆ.

ಉಳಿತಾಯ ಬ್ಯಾಂಕ್ ಖಾತೆ ಮತ್ತು ಚಾಲ್ತಿ ಖಾತೆ ಠೇವಣಿ

ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಬ್ಯಾಂಕ್ ಖಾತೆಯಲ್ಲಿ ರೂ. 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ ಆದಾಯ ತೆರಿಗೆ ಇಲಾಖೆಗೆ ಬಹಿರಂಗಪಡಿಸಬೇಕು. ಅದೇ ರೀತಿ ಚಾಲ್ತಿ ಖಾತೆಗಳಿಗೆ ಇರುವ ಮಿತಿ ರೂ. 50 ಲಕ್ಷ.

ಬ್ಯಾಂಕ್​ಗಳಲ್ಲಿ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್)

ರೂ. 10 ಲಕ್ಷಕ್ಕಿಂತ ಹೆಚ್ಚಿನ ಬ್ಯಾಂಕ್ ಎಫ್‌ಡಿ ಖಾತೆಯಲ್ಲಿನ ನಗದು ಠೇವಣಿಗಳನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕು. ಒಂದು ಅಥವಾ ಬಹು ಎಫ್​ಡಿಗಳಲ್ಲಿ ಜಮೆ ಮಾಡಿದ ಒಟ್ಟು ಮೊತ್ತವು ನಿಗದಿತ ಮಿತಿಗಳನ್ನು ಮೀರಿದರೆ ಫಾರ್ಮ್ 61A, ಹಣಕಾಸಿನ ವಹಿವಾಟುಗಳ ಹೇಳಿಕೆಯನ್ನು ಸಲ್ಲಿಸುವ ಮೂಲಕ ಬ್ಯಾಂಕ್‌ಗಳು ವಹಿವಾಟುಗಳನ್ನು ಬಹಿರಂಗಪಡಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಿಲ್​ಗಳು

ರೂ. 1 ಲಕ್ಷಕ್ಕಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು. ಆದಾಯ ತೆರಿಗೆ ಇಲಾಖೆಯು ಎಲ್ಲ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಜೋಡಣೆ ಮಾಡಲಾದ ಯಾವುದೇ ಹೆಚ್ಚಿನ ಮೌಲ್ಯದ ವಹಿವಾಟನ್ನು ಮರೆಮಾಡುವುದರ ಬಗ್ಗೆ ಗಮನ ಸೆಳೆಯಬಹುದು. ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗೆ ಹಣಕಾಸು ವರ್ಷದಲ್ಲಿ ರೂ. 10 ಲಕ್ಷಕ್ಕಿಂತ ಹೆಚ್ಚಿನ ತೀರುವಳಿಗಳನ್ನು ಐಟಿಆರ್‌ನಲ್ಲಿ ಬಹಿರಂಗಪಡಿಸಬೇಕು.

ಸ್ಥಿರ ಆಸ್ತಿಯ ಮಾರಾಟ ಅಥವಾ ಖರೀದಿ

ರೂ. 30 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿಯ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ತಿಳಿಸಲು ದೇಶಾದ್ಯಂತ ಎಲ್ಲ ಆಸ್ತಿ ನೋಂದಣಿದಾರರು ಮತ್ತು ಉಪ-ನೋಂದಣಿದಾರರಿಗೆ ಕಡ್ಡಾಯಗೊಳಿಸಲಾಗಿದೆ.

ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ಗಳು

ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಬಾಂಡ್‌ಗಳು ಅಥವಾ ಡಿಬೆಂಚರ್‌ಗಳಲ್ಲಿನ ಹೂಡಿಕೆಗಳಿಗೆ ಸಂಬಂಧಿಸಿದ ನಗದು ವಹಿವಾಟಿನ ಮಿತಿಯು ಹಣಕಾಸು ವರ್ಷದಲ್ಲಿ ರೂ. 10 ಲಕ್ಷವನ್ನು ಮೀರಬಾರದು.

ವಾರ್ಷಿಕ ಮಾಹಿತಿ ರಿಟರ್ನ್ (AIR) ಹೇಳಿಕೆಯು ಹಣಕಾಸಿನ ವಹಿವಾಟುಗಳ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ತೆರಿಗೆ ಅಧಿಕಾರಿಗಳು ಈ ಮೂಲಕ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಪತ್ತೆ ಹಚ್ಚುತ್ತಾರೆ. ನಿಮ್ಮ ಫಾರ್ಮ್ 26ASನ ಭಾಗ E ಹೆಚ್ಚಿನ ಮೌಲ್ಯದ ವಹಿವಾಟುಗಳ ಎಲ್ಲ ವಿವರಗಳನ್ನು ಒಳಗೊಂಡಿದೆ.

ವಿದೇಶಿ ಕರೆನ್ಸಿಯ ಮಾರಾಟ

ವಿದೇಶಿ ಕರೆನ್ಸಿಯ ಮಾರಾಟವು ಒಂದು ಹಣಕಾಸು ವರ್ಷದಲ್ಲಿ ರೂ. 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಳಗೊಂಡಿದ್ದಲ್ಲಿ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಬೇಕು.

Published On - 12:25 pm, Wed, 13 July 22