Satellite Spectrum Auction: ಶೀಘ್ರ ಉಪಗ್ರಹ ತರಂಗಗುಚ್ಛ ಹರಾಜು; ಮೊದಲ ದೇಶವಾಗಲಿದೆ ಭಾರತ

| Updated By: Ganapathi Sharma

Updated on: Dec 13, 2022 | 3:04 PM

ಮೊತ್ತ ಮೊದಲ ಬಾರಿಗೆ ಉಪಗ್ರಹ ಸಂವಹನ ತರಂಗಗುಚ್ಛ ಹರಾಜು ಮಾಡಿದ ದೇಶವಾಗಿ ಭಾರತ ಶೀಘ್ರದಲ್ಲೇ ಗುರುತಿಸಿಕೊಳ್ಳಲಿದೆ ಎಂದು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್​ನ ಅಧ್ಯಕ್ಷ ಪಿ.ಡಿ. ವಘೇಲ ತಿಳಿಸಿದ್ದಾರೆ.

Satellite Spectrum Auction: ಶೀಘ್ರ ಉಪಗ್ರಹ ತರಂಗಗುಚ್ಛ ಹರಾಜು; ಮೊದಲ ದೇಶವಾಗಲಿದೆ ಭಾರತ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ಮೊತ್ತ ಮೊದಲ ಬಾರಿಗೆ ಉಪಗ್ರಹ ಸಂವಹನ ತರಂಗಗುಚ್ಛ (Satellite Spectrum) ಹರಾಜು ಮಾಡಿದ ದೇಶವಾಗಿ ಭಾರತ (India) ಶೀಘ್ರದಲ್ಲೇ ಗುರುತಿಸಿಕೊಳ್ಳಲಿದೆ ಎಂದು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್​ನ (TRAI) ಅಧ್ಯಕ್ಷ ಪಿ.ಡಿ. ವಘೇಲ ತಿಳಿಸಿದ್ದಾರೆ. ಇದರೊಂದಿಗೆ ದೂರಸಂಪರ್ಕ ಕ್ಷೇತ್ರದಲ್ಲಿ ಹೂಡಿಕೆ ಹರಿದು ಬರಲಿದೆ ಎಂದು ಅವರು ಹೇಳಿದ್ದಾರೆ. ‘ಬ್ರಾಡ್​ಬ್ಯಾಂಡ್ ಇಂಡಿಯಾ ಫೋರಂ’ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು, ಉಪಗ್ರಹ ತರಂಗಗುಚ್ಛ ಹರಾಜಿಗೆ ಅನುಮತಿ ನೀಡುವಂತೆ ಸಂಬಂಧಪಟ್ಟ ಮಾಹಿತಿ ಮತ್ತು ಪ್ರಸಾರ, ಬಾಹ್ಯಾಕಾಶ ಮತ್ತು ದೂರಸಂಪರ್ಕ ಸಚಿವಾಲಯಗಳಿಗೆ ಟ್ರಾಯ್ ಶೀಘ್ರದಲ್ಲೇ ಶಿಫಾರಸು ಮಾಡಲಿದೆ ಎಂದು ತಿಳಿಸಿದ್ದಾರೆ.

ಹರಾಜು ಮಾಡಲು ಅಗತ್ಯವಿರುವ ತರಂಗಗುಚ್ಛ ಮತ್ತು ಉಪಗ್ರಹ ಆಧಾರಿತ ಸಂವಹನಕ್ಕೆ ಅಗತ್ಯವಿರುವ ಅಂಶಗಳ ಬಗ್ಗೆ ದೂರಸಂಪರ್ಕ ಇಲಾಖೆಯಿಂದ ಉಲ್ಲೇಖವನ್ನೂ ಟ್ರಾಯ್ ಪಡೆದಿದೆ. ಬಾಹ್ಯಾಕಾಶ ಆಧಾರಿತ ತರಂಗಗುಚ್ಛ ಹಂಚಿಕೆ ಮಾಡಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಳ್ಳಲಿದೆ ಎಂಬುದಾಗಿ ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಉಪಗ್ರಹ ತರಂಗಗುಚ್ಛ ಹಂಚಿಕೆಗೆ ಸಂಬಂಧಿಸಿ ಟ್ರಾಯ್ ಕೆಲವೊಂದು ಮಾದರಿಗಳನ್ನು ಸಿದ್ಧಪಡಿಸಲಿದೆ. ಹೊಸ ಹರಾಜು ಇಡೀ ಕ್ಷೇತ್ರದ ಅವನತಿಗೆ ಕಾರಣವಾಗಬಾರದು ಎಂಬುದು ನಮ್ಮ ಕಾಳಜಿ. ಯಾವುದೇ ಹೊಸ ವ್ಯವಸ್ಥೆಯು ನಿರ್ದಿಷ್ಟ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವಂತಿರಬೇಕೇ ವಿನಃ ಹೊರೆಯಾಗಬಾರದು. ಇದು ನಮಗೆ ದೊಡ್ಡ ಸವಾಲಾಗಿದ್ದು, ಈ ಬಗ್ಗೆ ನಮಗೆ ಅರಿವಿದೆ ಎಂದು ವಘೇಲ ಹೇಳಿದ್ದಾರೆ.

ಇದನ್ನೂ ಓದಿ: 5G Network: ಭಾರತದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ 5ಜಿ ನೆಟ್​ವರ್ಕ್

ಉಪಗ್ರಹ ಸಂವಹನದ ಗುಣಮಟ್ಟದ ಪ್ರಕ್ರಿಯೆಗೆ ಸಂಬಂಧಿಸಿದ ತರಂಗಗುಚ್ಛ ಹರಾಜು ಸಮಾಲೋಚನಾ ಪತ್ರವನ್ನು ಟ್ರಾಯ್ ಇನ್ನಷ್ಟೇ ಸಿದ್ಧಪಡಿಸಬೇಕಿದೆ. ಈ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ತಜ್ಞರ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ಸದ್ಯ ಟೆಲಿಕಾಂ ಆಪರೇಟರ್​​ಗಳು ಉಪಗ್ರಹ ತರಂಗಗುಚ್ಛ ಹಂಚಿಕೆಗೆ ಪ್ರಸ್ತಾವ ಸಲ್ಲಿಸಿದ್ದರೆ, ಉಪಗ್ರಹ ಉದ್ದಿಮೆಗಳು ಅದನ್ನು ವಿರೋಧಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶದ 5ಜಿ ತಂರಗಗುಚ್ಛ ಹರಾಜು ಪ್ರಕ್ರಿಯೆ ಆಗಸ್ಟ್ 1ರಂದು ಕೊನೆಗೊಂಡಿತ್ತು. ಒಟ್ಟು 7 ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ತಂರಗಗುಚ್ಛ ಹರಾಜಾಗಿತ್ತು. ಬಳಿಕ 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಇದೀಗ 5ಜಿ ಬೆನ್ನಲ್ಲೇ ಉಪಗ್ರಹ ಸಂವಹನ ತರಂಗಗುಚ್ಛ ಹಂಚಿಕೆ ಪ್ರಸ್ತಾವ ಕೇಳಿಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Tue, 13 December 22