5G Network: ಭಾರತದಲ್ಲಿ ಈ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ 5ಜಿ ನೆಟ್ವರ್ಕ್
5ಜಿ ಸೇವೆಯಿಂದಾಗಿ ಒಟಿಟಿ, ಇಂಟರ್ನೆಟ್ ಆಧಾರಿತ ಮತ್ತು ಉಪಗ್ರಹ ಆಧಾರಿತ ಸಂವಹನ ಸೇವೆಗಳು, ಇನ್-ಫ್ಲೈಟ್, ಸಾಗರಯಾನ, ಪ್ರಸಾರ, ಇಂಟರ್ನೆಟ್ ಹಾಗೂ ಬ್ರಾಡ್ಬ್ರ್ಯಾಂಡ್ ಸೇವಾ ಕ್ಷೇತ್ರಗಳು ಹೆಚ್ಚು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ 5ಜಿ ನೆಟ್ವರ್ಕ್ (5G Network) ಸೇವೆ ದೊರೆಯಲು ಆರಂಭವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸಲಿದೆ. ಇದರಿಂದ, ವಿಶ್ವದಲ್ಲೇ ಎರಡನೇ ಅತಿದೊಡ್ಡ ದೂರಸಂಪರ್ಕ ಕ್ಷೇತ್ರವನ್ನು (Telecom Sector) ಹೊಂದಿರುವ ಭಾರತದ ದೂರಸಂಪರ್ಕ ಉದ್ಯಮಿಗಳು ಹರ್ಷಗೊಂಡಿದ್ದಾರೆ. 5ಜಿ ನೆಟ್ವರ್ಕ್ನಿಂದಾಗಿ ಕೆಲವು ಕ್ಷೇತ್ರಗಳ ಉದ್ಯಮಗಳು ಇನ್ನಷ್ಟು ಬೆಳವಣಿಗೆ ಹೊಂದಲಿವೆ ಎಂದು ‘ಬ್ಯುಸಿನೆಸ್ ಟುಡೇ’ ವರದಿ ಉಲ್ಲೇಖಿಸಿದೆ. 2022ರ ಜುಲೈ ಲೆಕ್ಕಾಚಾರದ ಪ್ರಕಾರ, ದೇಶದಲ್ಲಿ ಒಟ್ಟಾರೆಯಾಗಿ 117 ಕೋಟಿ (Wireless and Wireline) ಟೆಲಿಕಾಂ ಚಂದಾದಾರರಿದ್ದಾರೆ. ಹೀಗಾಗಿ 5ಜಿ ಸೇವೆಯು ಹಲವು ಕ್ಷೇತ್ರಗಳ ಬೆಳವಣಿಗೆಗೆ ಕಾರಣವಾಗಲಿದೆ ಎಂದು ವರದಿ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಪಡೆಯುವವರ ಸಂಖ್ಯೆ ಹೆಚ್ಚಾಯಿತು. ಎಲ್ಲಿಂದ ಬೇಕಾದರೂ ಕೆಲಸ ಮಾಡುವ, ಆನ್ಲೈನ್ ಶಿಕ್ಷಣದಂಥ ಉಪಕ್ರಮಗಳು ಆರಂಭವಾದವು. ಚಿತ್ರ ಮಂದಿರಗಳಲ್ಲಿ ಪ್ರದರ್ಶನಗಳು ಸ್ಥಗಿತಗೊಂಡಿರುವುದು ಜನ ಒಟಿಟಿ ಪ್ಲಾಟ್ಫಾರ್ಮ್ಗಳತ್ತ ಮುಖ ಮಾಡಲು ಕಾರಣವಾಯಿತು. ಆದಾಗ್ಯೂ ತೀವ್ರತರವಾದ ಪೈಪೋಟಿ ಮತ್ತು ಸರ್ಕಾರದ ನೀತಿಗಳಿಂದಾಗಿ ದೂರಸಂಪರ್ಕ ವಲಯ ಕಷ್ಟ ಅನುಭವಿಸಿತು. 2021ರಲ್ಲಿ ಸರ್ಕಾರವು ದೂರಸಂಪರ್ಕ ಕ್ಷೇತ್ರದಲ್ಲಿನ ಹೂಡಿಕೆಗೆ ಉತ್ತೇಜನ ನೀಡುವುದರ ಜತೆಗೆ ಆರೋಗ್ಯಕರ ಪೈಪೋಟಿಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿತು. ಇದು ದೂರಸಂಪರ್ಕ ಕ್ಷೇತ್ರದ ಮೇಲೆ ಪರಿಣಾಮ ಬೀರಿತು ಎಂದು ವರದಿ ಹೇಳಿದೆ.
ಒಟಿಟಿ ಸೇರಿ ಇಂಟರ್ನೆಟ್ ಆಧಾರಿತ ಸೇವೆಗಳಿಗೆ ಪ್ರಯೋಜನ
5ಜಿ ಸೇವೆಯಿಂದಾಗಿ ಒಟಿಟಿ, ಇಂಟರ್ನೆಟ್ ಆಧಾರಿತ ಮತ್ತು ಉಪಗ್ರಹ ಆಧಾರಿತ ಸಂವಹನ ಸೇವೆಗಳು, ಇನ್-ಫ್ಲೈಟ್, ಸಾಗರಯಾನ, ಪ್ರಸಾರ, ಇಂಟರ್ನೆಟ್ ಹಾಗೂ ಬ್ರಾಡ್ಬ್ರ್ಯಾಂಡ್ ಸೇವಾ ಕ್ಷೇತ್ರಗಳು ಹೆಚ್ಚು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ನ ರಿಟೇಲ್ ಸಂಶೋಧನಾ ಮುಖ್ಯಸ್ಥ ದೀಪಕ್ ಜಾನ್ಸಿ ಅಭಿಪ್ರಾಯಪಟ್ಟಿದ್ದಾರೆ.
ಟೆಲಿಕಾಂ ಮೂಲಸೌಕರ್ಯ ಕಂಪನಿಗಳ ವಹಿವಾಟು ವಿಸ್ತರಣೆ
ಇಷ್ಟೇ ಅಲ್ಲದೆ, ದೂರಸಂಪರ್ಕ ಉದ್ಯಮಗಳಿಗೆ ಮೂಲಸೌಕರ್ಯ ಸೇವೆ ಹಾಗೂ ಸಲಕರಣೆಗಳನ್ನು ಒದಗಿಸುವವರ ವಹಿವಾಟಿಗೂ ಪ್ರಯೋಜನವಾಗಲಿದೆ. 4ಜಿ ಹಾಗೂ 5ಜಿ ನೆಟ್ವರ್ಕ್ ಅಳವಡಿಕೆಗೆ ಮೂಲಸೌಕರ್ಯ ಹಾಗೂ ಸಲಕರಣೆಗಳನ್ನು ಪೂರೈಸುವ ಟಾಟಾ ಸಮೂಹದ ತೇಜಸ್ ನೆಟ್ವರ್ಕ್ ಈಗಾಗಲೇ ವಹಿವಾಟಿನಲ್ಲಿ ಬೆಳವಣಿಗೆ ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ
‘ನಾವು ಸದ್ಯದ ಟ್ರೆಂಡ್‌ನಿಂದ ಪ್ರಯೋಜನ ಪಡೆಯುವಲ್ಲಿ ಮುಂಚೂಣಿಯಲ್ಲಿರಲಿದ್ದೇವೆ ಎಂದು ಭಾವಿಸುತ್ತೇವೆ. ಟಾಟಾ ಬ್ರ್ಯಾಂಡ್ ಸಾಮರ್ಥ್ಯ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ತೋರ್ಪಡಿಸಲು ನಮಗೆ ಇದು ನೆರವಾಗಲಿದೆ. ಜಾಗತಿಕ ಟೆಲಿಕಾಂ ಕಂಪನಿಗಳೊಂದಿಗೆ ಉತ್ತಮ ಗ್ರಾಹಕ ಸಂಬಂಧಗಳನ್ನು ಹೊಂದುವ ಮೂಲಕ ಅಂತರರಾಷ್ಟ್ರೀಯ ವ್ಯಾಪಾರವನ್ನು ಹೆಚ್ಚಿಸಲು ನಾವು ಭಾರತದ ಯಶಸ್ಸನ್ನು ವೇದಿಕೆಯಾಗಿ ಬಳಸಲಿದ್ದೇವೆ’ ಎಂದು ತೇಜಸ್ನ ಸಿಇಒ ಮತ್ತು ಎಂಡಿ ಸಂಜಯ್ ನಾಯಕ್ ತಿಳಿಸಿದ್ದಾರೆ.
ದೇಶದ 5ಜಿ ತಂರಗಗುಚ್ಛ ಹರಾಜು ಪ್ರಕ್ರಿಯೆ ಆಗಸ್ಟ್ 1ರಂದು ಕೊನೆಗೊಂಡಿತ್ತು. ಒಟ್ಟು 7 ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ತಂರಗಗುಚ್ಛ ಹರಾಜಾಗಿತ್ತು. ಬಳಿಕ 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ ಸೇವೆ ಆರಂಭವಾಗಿತ್ತು. ಇದಾದ ಒಂದೇ ತಿಂಗಳಲ್ಲಿ 10 ಲಕ್ಷ 5ಜಿ ಗ್ರಾಹಕರನ್ನು ಹೊಂದಿದ್ದೇವೆ ಎಂದು ದೂರಸಂಪರ್ಕ ಕಂಪನಿ ಭಾರ್ತಿ ಏರ್ಟೆಲ್ ಹೇಳಿಕೊಂಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ