GST Council Meet: ಜಿಎಸ್ಟಿ ಅಪರಾಧ; ಕೇಂದ್ರದಿಂದ ಕೆಲವು ವಿನಾಯಿತಿ ಸಾಧ್ಯತೆ
ಜಿಎಸ್ಟಿ ನಿಯಮಗಳ ಅಡಿಯಲ್ಲಿ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಬೇಕಾದ ಮಿತಿಯನ್ನು 5 ಕೋಟಿ ರೂ.ನಿಂದ 20 ಕೋಟಿ ರೂ.ಗೆ ಹೆಚ್ಚಿಸುವ ಪ್ರಸ್ತಾವ ಮಂಡಳಿಯ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST Council) ಮಂಡಳಿಯು ಇದೇ 17ರಂದು ಸಭೆ ನಡೆಸಲಿದೆ. ಜಿಎಸ್ಟಿ (GST) ಕಾನೂನಿನ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗಿರುವ ಕೆಲವು ನಿಯಮಗಳಲ್ಲಿ ಸಡಿಲ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ಜಿಎಸ್ಟಿ ನಿಯಮಗಳ ಅಡಿಯಲ್ಲಿ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಬೇಕಾದ ಮಿತಿಯನ್ನು 5 ಕೋಟಿ ರೂ.ನಿಂದ 20 ಕೋಟಿ ರೂ.ಗೆ ಹೆಚ್ಚಿಸುವ ಪ್ರಸ್ತಾವ ಮಂಡಳಿಯ ಮುಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ಜಿಎಸ್ಟಿ ಮಂಡಳಿಯ ಸಭೆ ನಡೆಯಲಿದ್ದು, ರಾಜ್ಯಗಳ ಹಣಕಾಸು ಸಚಿವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆ ಅಥವಾ ದುರುಪಯೋಗದ ಮೊತ್ತವು 5 ಕೋಟಿ ರೂ.ಗಿಂತ ಹೆಚ್ಚಿದ್ದಲ್ಲಿ ಅಂಥ ತೆರಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸೆಪ್ಟೆಂಬರ್ನಲ್ಲಿ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿತ್ತು. ತೆರಿಗೆದಾರರ ವಿರುದ್ಧ ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂದು ಸರ್ಕಾರ ಹೇಳಿತ್ತು.
ತೆರಿಗೆ ವಂಚನೆ ಆರೋಪ ಎದುರಿಸುತ್ತಿರುವವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಆರಂಭಿಸಲು ಇರುವ ಮಿತಿಯನ್ನು 20 ಕೋಟಿ ರೂ.ಗೆ ಹೆಚ್ಚಿಸಬೇಕೆಂಬ ಪ್ರಸ್ತಾವ ಈಗ ಸರ್ಕಾರದ ಮುಂದಿದೆ. ಜತೆಗೆ, ಮಿತಿಗಿಂತ ಕಡಿಮೆ ಮೊತ್ತದ ಜಿಎಸ್ಟಿ ವಂಚನೆ ಆರೋಪ ಎದುರಿಸುತ್ತಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಪ್ರಸ್ತಾವಬೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: GST Council Meet: ಡಿಸೆಂಬರ್ 17ಕ್ಕೆ ಜಿಎಸ್ಟಿ ಮಂಡಳಿ ಸಭೆ; ಆನ್ಲೈನ್ ಗೇಮಿಂಗ್ ತೆರಿಗೆ ಹೆಚ್ಚಳ ಸಾಧ್ಯತೆ
ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (IPC) ಅಡಕವಾಗಿರುವ ಅಪರಾಧಗಳನ್ನು ಜಿಎಸ್ಟಿ ಕಾಯ್ದೆಯಿಂದ ತೆರವುಗೊಳಿಸಿ ಜಿಎಸ್ಟಿಯನ್ನು ಮತ್ತಷ್ಟು ತೆರಿಗೆದಾರಸ್ನೇಹಿ ಮಾಡುವ ಬಗ್ಗೆ ಮಂಡಳಿ ಚಿಂತನೆ ನಡೆಸುತ್ತಿದೆ. ಜಿಎಸ್ಟಿ ಅಧಿಕಾರಿಗಳ ಕಾನೂನು ಸಮಿತಿಯು ಜಿಎಸ್ಟಿ ಕಾಯ್ದೆಯ ಸೆಕ್ಷನ್ 132ರಲ್ಲಿ ಮಾಡಬೇಕಿರುವ ಬದಲಾವಣೆಗಳನ್ನು ಅಂತಿಮಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಜಿಎಸ್ಟಿ ಕಾನೂನಿನಲ್ಲಿ ಬದಲಾವಣೆ ಮಾಡುವ ಪ್ರಸ್ತಾವಕ್ಕೆ ಮಂಡಳಿ ಅನುಮತಿ ನೀಡಿದರೆ ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ಮಾಡಿ ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಸಂಸತ್ ಅನುಮೋದನೆ ನೀಡಿದರೆ ರಾಜ್ಯ ಸರ್ಕಾರಗಳೂ ಜಿಎಸ್ಟಿ ನಿಯಮಗಳಲ್ಲಿ ತಿದ್ದುಪಡಿ ಮಾಡಬೇಕಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ ವಿಮೆ ಪ್ರೀಮಿಯಂನ ಜಿಎಸ್ಟಿ ಮಿತಿಯನ್ನು ಈಗಿರುವ ಶೇಕಡಾ 18ಕ್ಕಿಂತ ಕಡಿಮೆ ಮಾಡಬೇಕು ಎಂಬ ಕುರಿತು ಅನೇಕ ಸಲಹೆಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ಯಾಸಿನೋಗಳು, ಆನ್ಲೈನ್ ಗೇಮಿಂಗ್ ಹಾಗೂ ಕುದುರೆ ರೇಸಿಂಗ್ಗಳ ಮೇಲೆ ಜಿಎಸ್ಟಿ ಪ್ರಮಾಣ ಹೆಚ್ಚಿಸುವಂತೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ವರದಿ ಸಿದ್ಧಪಡಿಸಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪಿಸುವ ಕುರಿತೂ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ