GST Collection: ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಹೆಚ್ಚಳ; ನವೆಂಬರ್ನಲ್ಲಿ ಸರ್ಕಾರದ ಬೊಕ್ಕಸ ಸೇರಿತು 1.46 ಲಕ್ಷ ಕೋಟಿ ರೂ.
1,45,867 ಕೋಟಿ ರೂ. ಜಿಎಸ್ಟಿ ಸಂಗ್ರಹದೊಂದಿಗೆ ಸತತ 9ನೇ ತಿಂಗಳು 1.40 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್ಟಿ ಸಂಗ್ರಹಿಸಿದಂತಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೂಡ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಿತ್ತು.
ನವದೆಹಲಿ: ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಮೂಲಕ 1,45,867 ಕೋಟಿ ರೂ. ಆದಾಯ (Revenue) ಸಂಗ್ರಹವಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಸಂಗ್ರಹವಾದ ಜಿಎಸ್ಟಿ ಆದಾಯಕ್ಕಿಂತ ಇದು ಶೇಕಡಾ 11ರಷ್ಟು ಹೆಚ್ಚು ಎಂದು ಕೇಂದ್ರ ಹಣಕಾಸು ಸಚಿವಾಲಯ (Ministry of Finance) ಗುರುವಾರ ತಿಳಿಸಿದೆ. ಜಿಎಸ್ಟಿ ಸಂಗ್ರಹಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನೊಳಗೊಂಡ ವಿವರವನ್ನು ಸಚಿವಾಲಯ ಟ್ವೀಟ್ ಮಾಡಿದೆ. ಆದರೆ, ಇದೇ ವರ್ಷದ ಅಕ್ಟೋಬರ್ ತಿಂಗಳ ಜಿಎಸ್ಟಿ ಸಂಗ್ರಹಕ್ಕೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಸಂಗ್ರಹವಾಗಿರುವ ಜಿಎಸ್ಟಿ ತುಸು ಕಡಿಮೆಯಾಗಿದೆ.
ನವೆಂಬರ್ನಲ್ಲಿ ಸಂಗ್ರಹವಾದ ಜಿಎಸ್ಟಿ ಆದಾಯದ ಪೈಕಿ 25,681 ಕೋಟಿ ರೂ. ಕೇಂದ್ರ ಜಿಎಸ್ಟಿ ಆಗಿದೆ. 77,103 ಕೋಟಿ ರೂ. ಇಂಟಿಗ್ರೇಟೆಡ್ ಜಿಎಸ್ಟಿ (38,635 ಕೋಟಿ ರೂ. ಆಮದು ಸರಕುಗಳ ಮೇಲೆ ಸಂಗ್ರಹಿಸಿದ ತೆರಿಗೆ), 10,433 ಕೋಟಿ ರೂ. ಸೆಸ್ (ಆಮದು ಸರಕುಗಳ ಮೇಲೆ ಸಂಗ್ರಹಿಸಿದ 817 ಕೋಟಿ ರೂ. ತೆರಿಗೆ ಸೇರಿ) ಒಳಗೊಂಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
? ₹1,45,867 crore gross #GST revenue collected for November 2022, records increase of 11% Year-on-Year
? Monthly #GST revenues more than ₹1.4 lakh crore for nine straight months in a row
Read more ➡️ https://t.co/wCimrOavhZ
(1/2) pic.twitter.com/kuJ2spTjaq
— Ministry of Finance (@FinMinIndia) December 1, 2022
ಸತತ 9ನೇ ತಿಂಗಳು ಹೆಚ್ಚು ಜಿಎಸ್ಟಿ ಸಂಗ್ರಹ
1,45,867 ಕೋಟಿ ರೂ. ಜಿಎಸ್ಟಿ ಸಂಗ್ರಹದೊಂದಿಗೆ ಸತತ 9ನೇ ತಿಂಗಳು 1.40 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಜಿಎಸ್ಟಿ ಸಂಗ್ರಹಿಸಿದಂತಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೂಡ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಿತ್ತು. ಅಕ್ಟೋಬರ್ನಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಲು ಗ್ರಾಮೀಣ ಆರ್ಥಿಕತೆ ಪುನಶ್ಚೇತನ, ಹಬ್ಬದ ಅವಧಿಯ ಮಾರಾಟ ಮುಖ್ಯ ಕಾರಣವಾಗಿತ್ತು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ ಒಟ್ಟು 17,000 ಕೋಟಿ ರೂ. GST ಪರಿಹಾರ ಹಣ ಬಿಡುಗಡೆ, ಕರ್ನಾಟಕಕ್ಕೆ ಎಷ್ಟು ಬಂತು?
ಕಳೆದ ವರ್ಷಕ್ಕೆ ಹೋಲಿಸಿದರೆ ನವೆಂಬರ್ನಲ್ಲಿ ಆಮದು ಸರಕುಗಳ ಮೇಲೆ ಸಂಗ್ರಹಿಸಿದ ತೆರಿಗೆಯ ಪ್ರಮಾಣದಲ್ಲಿ ಶೇಕಡಾ 20ರಷ್ಟು ಹೆಚ್ಚಳವಾಗಿದೆ. ದೇಶೀಯ ವ್ಯವಹಾರಗಳಿಂದ ಸಂಗ್ರಹಿಸಿದ ತೆರಿಗೆಯ ಪ್ರಮಾಣ ಶೇಕಡಾ 8ರಷ್ಟು ಹೆಚ್ಚಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಅಕ್ಟೋಬರ್ಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಕಡಿಮೆ
ಅಕ್ಟೋಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಸಂಗ್ರಹಕ್ಕೆ ಹೋಲಿಸಿದರೆ ನವೆಂಬರ್ನಲ್ಲಿ ಸಂಗ್ರಹವಾದ ಜಿಎಸ್ಟಿ ಆದಾಯ ತುಸು ಕಡಿಮೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ 1,51,718 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ಹಿಂದೆ ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ 1.68 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಅಕ್ಟೋಬರ್ನಲ್ಲಿ ಆಗಿರುವ 1.51 ಲಕ್ಷ ಕೋಟಿ ರೂ. ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.
ವಿವಿಧ ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ನವೆಂಬರ್ 25ರಂದು ಬಿಡುಗಡೆ ಮಾಡಿತ್ತು. 2022ರ ಏಪ್ರಿಲ್‌ನಿಂದ ಜೂನ್ 24ರ ಅವಧಿಯಲ್ಲಿ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಬೇಕಿದ್ದ 17,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 2022-23ರ ಸಾಲಿನಲ್ಲಿ ಈವರೆಗೆ 1,15,662 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿತ್ತು. ಕರ್ನಾಟಕಕ್ಕೆ 1,915 ಕೋಟಿ ರೂ. ಪರಿಹಾರ ದೊರೆತಿತ್ತು. ಮಹಾರಾಷ್ಟ್ರಕ್ಕೆ ಅತಿಹೆಚ್ಚು, ಅಂದರೆ 2081 ಕೋಟಿ ರೂ. ಪರಿಹಾರ ನೀಡಲಾಗಿತ್ತು. ಜಿಎಸ್ಟಿ ಸಂಗ್ರಹದಲ್ಲಿ ಅಗ್ರ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ನಂತರದ ಸ್ಥಾನದಲ್ಲಿ ಕರ್ನಾಟಕವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Thu, 1 December 22