Coal Production: ಫಲಕೊಟ್ಟ ಕೇಂದ್ರದ ಕಾರ್ಯತಂತ್ರ; ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರೀ ಹೆಚ್ಚಳ
ಕಳೆದ ತಿಂಗಳು ಕೋಲ್ ಇಂಡಿಯಾ ಲಿಮಿಟೆಡ್ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 12.82ರ ಪ್ರಗತಿ ಸಾಧಿಸಿದೆ. ಎಸ್ಸಿಸಿಎಲ್ ಹಾಗೂ ಕ್ಯಾಪ್ಟಿವ್ ಮೈನ್ಸ್ ಕೂಡ ಕ್ರಮವಾಗಿ ಶೇಕಡಾ 7.84 ಮತ್ತು ಶೇಕಡಾ 6.87ರ ಬೆಳವಣಿಗೆ ದಾಖಲಿಸಿವೆ.
ನವದೆಹಲಿ: ಕಲ್ಲಿದ್ದಲು ಉತ್ಪಾದನೆ (Coal Production), ಪೂರೈಕೆ ಹೆಚ್ಚಳದ ನಿಟ್ಟಿನಲ್ಲಿ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕೈಗೊಂಡಿರುವ ಹಲವು ಉಪಕ್ರಮಗಳು ಕೊನೆಗೂ ಫಲಕೊಟ್ಟಿವೆ. ನವೆಂಬರ್ ತಿಂಗಳಲ್ಲಿ ದೇಶದ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 11.66ರ ಬೆಳವಣಿಗೆ ಕಂಡುಬಂದಿದ್ದು, 75.87 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದೆ. 2021ರ ನವೆಂಬರ್ನಲ್ಲಿ ದೇಶದಲ್ಲಿ 67.94 ಟನ್ ಕಲ್ಲಿದ್ದಲು ಉತ್ಪಾದನೆಯಾಗಿತ್ತು.
ಕಳೆದ ತಿಂಗಳು ಕೋಲ್ ಇಂಡಿಯಾ ಲಿಮಿಟೆಡ್ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 12.82ರ ಪ್ರಗತಿ ಸಾಧಿಸಿದೆ. ಎಸ್ಸಿಸಿಎಲ್ ಹಾಗೂ ಕ್ಯಾಪ್ಟಿವ್ ಮೈನ್ಸ್ ಕೂಡ ಕ್ರಮವಾಗಿ ಶೇಕಡಾ 7.84 ಮತ್ತು ಶೇಕಡಾ 6.87ರ ಬೆಳವಣಿಗೆ ದಾಖಲಿಸಿವೆ. ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ರವಾನೆ ಪ್ರಮಾಣವೂ ನವೆಂಬರ್ನಲ್ಲಿ ಶೇಕಡಾ 3.55ರಷ್ಟು ಹೆಚ್ಚಾಗಿ 62.34 ದಶಲಕ್ಷ ಟನ್ ತಲುಪಿದೆ. ಹಿಂದಿನ ವರ್ಷ ಇದು 60.2 ದಶಲಕ್ಷ ಟನ್ ಆಗಿತ್ತು.
ಪ್ರಮುಖ 37 ಗಣಿಗಳ ಪೈಕಿ 24ರಲ್ಲಿ ಶೇಕಡಾ 100ಕ್ಕಿಂತಲೂ ಹೆಚ್ಚು ಉತ್ಪಾದನೆಯಾಗಿದೆ. ಐದು ಗಣಿಗಳಲ್ಲಿ ಶೇಕಡಾ 80ರಿಂದ 100ರಷ್ಟು ಉತ್ಪಾದನೆ ದಾಖಲಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.
2030ರ ವೇಳೆಗೆ ದೇಶದ ಕಲ್ಲಿದ್ದಲು ಉತ್ಪಾದನೆಯನ್ನು 1.5 ಶತಕೋಟಿ ಟನ್ಗಳಿಗೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಇಲಾಖೆಯ ರಾಜ್ಯ ಖಾತೆ ಸಚಿವ ರಾವ್ಸಾಹೇಬ್ ದಾನ್ವೆ ಪಾಟೀಲ್ ಇತ್ತೀಚೆಗೆ ಹೇಳಿದ್ದರು. ಕಲ್ಲಿದ್ದಲು ವಲಯದಲ್ಲಿ ದೇಶವು ಸ್ವಾವಲಂಬಿಯಾಗುವ ಗುರಿಯನ್ನು ಹೊಂದಿದೆ. ದೇಶವು ಸುಸ್ಥಿರ ಕಲ್ಲಿದ್ದಲು ಗಣಿಗಾರಿಕೆಯನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದರು.
ದೇಶದ ಒಟ್ಟು ಜಿಡಿಪಿಯಲ್ಲಿ ಕಲ್ಲಿದ್ದಲಿನ ಪಾಲು ಶೇಕಡಾ 2.5ರಷ್ಟಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದರಂತೆ ಗುರಿ ಸಾಧಿಸಲು ದಾಪುಗಾಲಿಡುತ್ತಿದ್ದೇವೆ. ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿಗಾರಿಕೆ ಸಂಬಂಧಿತ ಹರಾಜಿನಲ್ಲಿ ಭಾಗಿಯಾಗುವವರಿಗೆ ಶೇಕಡಾ 50ರ ವರೆಗೆ ರಿಯಾಯಿತಿ ನೀಡಲಾಗುವುದು ಎಂದು ಪ್ರಲ್ಹಾದ ಜೋಶಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೂಡಿಕೆ ಸಮಾವೇಶದಲ್ಲಿ ಹೇಳಿದ್ದರು. ವಿದ್ಯುತ್ ಉತ್ಪಾದನಾ ಕಂಪನಿಗಳು ಹಾಗು ನಿಗಮಗಳಿಗೆ ಕಲ್ಲಿದ್ದಲನ್ನು ಸುಧಾರಿತ ಮಾರ್ಗದಲ್ಲಿ ಪೂರೈಸುವಂತೆ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದಷ್ಟೇ ಜೋಶಿ ಸೂಚನೆ ನೀಡಿದ್ದರು.
ಅಸಂಘಟಿತ ವಲಯಗಳ ಪೈಕಿ ಅತಿಹೆಚ್ಚು ಉದ್ಯೋಗ ನೀಡುತ್ತಿರುವ ಕಲ್ಲಿದ್ದಲು ಉತ್ಪಾದನೆ ಕ್ಷೇತ್ರವು ದೇಶದ ಆರ್ಥಿಕತೆಗೂ ಬಲ ನೀಡಿದೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಿರುವುದು ಅಸಂಘಟಿತ ವಲಯದ ಉದ್ಯೋಕಾವಕಾಶ ಸೃಷ್ಟಿ ನಿಟ್ಟಿನಲ್ಲಿಯೂ ಭರವಸೆ ಮೂಡಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ