ನಾಳೆ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಗಣಿ ಹೂಡಿಕೆದಾರರ ಸಮಾವೇಶ
ಬೆಂಗಳೂರಿನಲ್ಲಿ ಶನಿವಾರ ನಡೆಯುವ ಗಣಿ ಹೂಡಿಕೆದಾರರ ಸಮಾವೇಶವು ಭಾರತದಲ್ಲಿನ ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಾಳೆ ಶನಿವಾರ (ಡಿ. 3) ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ (Investors Conclave on Commercial Coal Blocks at Bangalore) ನಡೆಯಲಿದ್ದು ಹೂಡಿಕೆದಾರರಿಗೆ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಮುಕ್ತ ಆಹ್ವಾನ ನೀಡಿದ್ದಾರೆ.
ನಿನ್ನೆ ಮುಂಬೈನಲ್ಲಿ ನಡೆದ ಕಲ್ಲಿದ್ದಲು (Coal) ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ನಾಳೆ ಬೆಂಗಳೂರಿನಲ್ಲಿ ಗಣಿಗಾರಿಕೆ ಕುರಿತಂತೆ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ, ಆಸಕ್ತರು ಬೆಂಗಳೂರಿನಲ್ಲಿ ನಡೆಯೋ ಸಮಾವೇಶದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೂಡಿಕೆದಾರರಿಗೆ ಆಹ್ವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆಯುವ ಗಣಿ ಹೂಡಿಕೆದಾರರ ಸಮಾವೇಶವು ಭಾರತದಲ್ಲಿನ ಗಣಿಗಾರಿಕೆ ಕ್ಷೇತ್ರದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಳೆ ನಡೆಯುವ ಸಮಾವೇಶ ಗಣಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರ ಪಾಲಿಗೆ ಸುವರ್ಣಾವಕಾಶವನ್ನು ತೆರೆದಿಟ್ಟಿದೆ.
ವಾಣಿಜ್ಯ, ಗಣಿ ಹರಾಜು ಮತ್ತು ದೇಶದ ಗಣಿಗಾರಿಕೆ ವಲಯದಲ್ಲಿ ವಿವಿಧ ಅವಕಾಶಗಳ ಕುರಿತು ಸಮಾವೇಶವನ್ನು ನಡೆಸಲಾಗುತ್ತಿದೆ. ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದು, ವಿವಿಧ ವಾಣಿಜ್ಯ ಗಣಿಗಳ ಮೆಗಾ ಹರಾಜು ಕುರಿತು ಹೂಡಿಕೆದಾರರಿಗೆ ಮಾಹಿತಿ ಒದಗಿಸುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ವಿದ್ಯುತ್ ಉತ್ಪಾದನೆ ಅವಶ್ಯಕವಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ಮಹಾರಾಷ್ಟ್ರಕ್ಕೆ 13 ಕಲ್ಲಿದ್ದಲು ಬ್ಲಾಕ್ಸ್ ಗಳನ್ನ ನೀಡಲಾಗಿದೆ. ಇದರಲ್ಲಿ 5 ಗಣಿ ಬ್ಲಾಕ್ಸ್ ಗಳು ಸಂಪೂರ್ಣವಾಗಿ ಅನ್ವೇಷಿಸಲಾಗಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಬಳಕೆಯನ್ನು ಇನ್ನಷ್ಟು ಸುಧಾರಿಸುವ ಮಾರ್ಗಗಳ ಅಧಿಕಾರಿಗಳೊಂದಿಗೆ ಇದೇ ವೇಳೆ ಪ್ರಲ್ಹಾದ ಜೋಶಿ ಸಭೆ ನಡೆಸಿದ್ದಾರೆ. ಕಲ್ಲಿದ್ದಲು ವ್ಯಾಗನ್‌ಗಳ ಇಳಿಸುವಿಕೆಯ ಸಮಯವನ್ನು ಸುಧಾರಿಸಲು ಒತ್ತು ಸೇರಿದಂತೆ, ದೀರ್ಘಾವಧಿಯ ಕಲ್ಲಿದ್ದಲು ದಾಸ್ತಾನು ನಿರ್ಮಿಸಲು ಆರ್‌ಎಸ್‌ಆರ್ (ರೈಲ್ ಕಮ್ ಸೀ) ಮೋಡ್ ಅನ್ನು ಅನ್ವೇಷಿಸಲು ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ದಾರೆ. ರೋಡ್ ಮೋಡ್ ಮತ್ತು ರೋಪ್‌ವೇ ಮೂಲಕ 40,000 TPD ಕಲ್ಲಿದ್ದಲನ್ನು ಎತ್ತಬಹುದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯನಿರತರಾಗುವಂತೆ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿರ್ದೇಶನ ನೀಡಿದ್ದಾರೆ.
Published On - 4:54 pm, Fri, 2 December 22