ನವದೆಹಲಿ, ಸೆಪ್ಟೆಂಬರ್ 17: ಸಾಕಷ್ಟು ಹಿನ್ನಡೆಗಳಿಂದಾಗಿ ಬಿಸಿನೆಸ್ನಲ್ಲಿ ದಿವಾಳಿ ಆಗಿರುವ ಅನಿಲ್ ಅಂಬಾನಿ ಮತ್ತೆ ಕಂಬ್ಯಾಕ್ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಅವರ ಬಿಸಿನೆಸ್ ಗ್ರೂಪ್ನ ಕಂಪನಿಯೊಂದಕ್ಕೆ ಮಹತ್ವದ ಗುತ್ತಿಗೆಯೊಂದು ಸಿಕ್ಕಿದೆ. ರಿಲಾಯನ್ಸ್ ಪವರ್ ಸಂಸ್ಥೆ 500 ಮೆಗಾವ್ಯಾಟ್ ಬ್ಯಾಟರಿ ಸ್ಟೋರೇಜ್ ಗುತ್ತಿಗೆಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ಅನಿಲ್ ಅಂಬಾನಿ ಅವರು ಮರುಬಳಕೆ ಇಂಧನ ಮತ್ತು ಎನರ್ಜಿ ಸ್ಟೋರೇಜ್ ವಲಯಕ್ಕೆ ಪದಾರ್ಪಣೆ ಮಾಡಿದಂತಾಗಿದೆ. ಸೋಲಾರ್ ಎನರ್ಜಿ ಕಾರ್ಪೊರೇಶನ್ (ಎಸ್ಇಸಿಐ) ಸೆಪ್ಟೆಂಬರ್ 11ರಂದು ನಡೆಸಿದ ಇ-ರಿವರ್ಸ್ ಹರಾಜಿನಲ್ಲಿ ರಿಲಾಯನ್ಸ್ ಪವರ್ ಸಲ್ಲಿಸಿದ ಬಿಡ್ಡಿಂಗ್ಗೆ ಗೆಲುವು ಸಿಕ್ಕಿದೆ.
ಭಾರತೀಯ ಸೌರ ಶಕ್ತಿ ನಿಗಮ (ಎಸ್ಇಸಿಐ) ದೇಶಾದ್ಯಂತ ಎನರ್ಜಿ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ 500 ಮೆಗಾವ್ಯಾಟ್ ಸ್ಟೋರೇಜ್ಗೆ ಕಳೆದ ವಾರ ಹರಾಜು ನಡೆಸಲಾಗಿತ್ತು. ಆನ್ಲೈನ್ನಲ್ಲಿ ನಡೆದ ಆಕ್ಷನ್ನಲ್ಲಿ ರಿಲಾಯನ್ಸ್ ಪವರ್ ಸೇರಿದಂತೆ ವಿವಿಧ ಸಂಸ್ಥೆಗಳು ಭಾಗಿಯಾಗಿದ್ದವು. ರಿಲಾಯನ್ಸ್ ಪವರ್ ಅತಿ ಕಡಿಮೆ ಬೆಲೆ ಕೋಟ್ ಮಾಡಿತು ಎನ್ನಲಾಗಿದೆ. ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಒಂದು ಮೆಗಾವ್ಯಾಟ್ ವಿದ್ಯುತ್ ಸಂಗ್ರಹಕ್ಕೆ ರಿಲಾಯನ್ಸ್ ಪವರ್ 3.81999 ಲಕ್ಷ ರೂ ಬೆಲೆಗೆ ಬಿಡ್ಡಿಂಗ್ ಸಲ್ಲಿಸಿತು ಎನ್ನಲಾಗಿದೆ. ಅಂತಿಮವಾಗಿ ರಿಲಾಯನ್ಸ್ ಪವರ್ಗೆ ಈ ಗುತ್ತಿಗೆ ನೀಡಲಾಗಿದೆ.
ಇದನ್ನೂ ಓದಿ: 1,900 ಕೋಟಿ ರೂಗೆ ಕಟ್ಟಿದ ರಸ್ತೆಗೆ 8,000 ಕೋಟಿ ರೂ ಟೋಲ್? ನಿತಿನ್ ಗಡ್ಕರಿ ಉತ್ತರ ಇದು
ಒಟ್ಟು 1,000 ಮೆಗಾವ್ಯಾಟ್ನ ಬಿಇಎಸ್ಎಸ್ (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ) ಯೂನಿಟ್ ಸ್ಥಾಪನೆಯ ಪೈಕಿ ರಿಲಾಯನ್ಸ್ ಪವರ್ ಸಂಸ್ಥೆಗೆ 500 ಮೆಗಾವ್ಯಾಟ್ ಗುತ್ತಿಗೆ ಸಿಕ್ಕಿದೆ. ಈ ಬಿಇಎಸ್ಎಸ್ ಟೆಂಡರ್ನಲ್ಲಿ ರಿಲಾಯನ್ಸ್ ಪವರ್ ಕೋಟ್ ಮಾಡಿದ ಬೆಲೆ ಈವರೆಗಿನ ಕನಿಷ್ಠದ್ದು ಎನ್ನಲಾಗಿದೆ.
ಒಪ್ಪಂದ ಜಾರಿಗೆ ಬಂದ 24 ತಿಂಗಳಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಯೋಜನೆ ಚಾಲನೆಯಲ್ಲಿರಬೇಕು ಎಂದು ಒಪ್ಪಂದದಲ್ಲಿ ನಿಯಮ ಇದೆ.
ರಿಲಾಯನ್ಸ್ ಪವರ್ಗೆ ಈ ಮಹತ್ವದ ಗುತ್ತಿಗೆ ಸಿಗುತ್ತಂದೆಯೇ ಅದರ ಷೇರಿಗೆ ಸ್ವಲ್ಪ ಬೇಡಿಕೆ ಹೆಚ್ಚಳ ಆಗುತ್ತಿದೆ. ನಿನ್ನೆ ಮತ್ತು ಇವತ್ತು ರಿಲಾಯನ್ಸ್ ಪವರ್ ಷೇರು ಬೆಲೆ ಹೆಚ್ಚಳವಾಗಿದ್ದು ಇವತ್ತು ಮಧ್ಯಾಹ್ನದ ವೇಳೆ 31.36 ರೂ ತಲುಪಿದೆ. ಮಂಗಳವಾರ ಶೇ. 1ರಷ್ಟು ಷೇರುಬೆಲೆ ಹೆಚ್ಚಿದೆ.
ಇದನ್ನೂ ಓದಿ: ರಾಧಿಕಾ ಗುಪ್ತಾ ಶ್ರೀಮಂತ ಉದ್ಯಮಿಯಾದರೂ ಲಕ್ಷುರಿ ಕಾರು ಒಲ್ಲೆ ಎನ್ನುವುದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ
ಅನಿಲ್ ಅಂಬಾನಿ ಅವರ ಇನ್ನೊಂದು ಕಂಪನಿಯಾದ ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಷೇರುಬೆಲೆಯೂ ಹೆಚ್ಚಳವಾಗತೊಡಗಿದೆ. ಈ ಸಂಸ್ಥೆ ಬಂಡವಾಳ ಸಂಗ್ರಹಕ್ಕೆ ಮುಂದಾಗುತ್ತಿದೆ ಎನ್ನುವಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿರುವುದು ಜನರು ಈ ಷೇರಿನತ್ತ ಮುಗಿಬೀಳಲು ಕಾರಣವಾಗಿರಬಹುದು.
ರಿಲಾಯನ್ಸ್ ಇನ್ಫ್ರಾ ಒಂದು ಸಂದರ್ಭದಲ್ಲಿ ಹೆಚ್ಚೂಕಡಿಮೆ ಪ್ರತೀ ಷೇರಿಗೆ ಎರಡೂವರೆ ಸಾವಿರ ರೂ ಮೌಲ್ಯ ಹೊಂದಿತ್ತು. ಈಗ ಅದು 231 ರೂಗೆ ಇಳಿದಿದೆ. ಕಳೆದ ನಾಲ್ಕು ವರ್ಷದಿಂದ ತಕ್ಕಮಟ್ಟಿಗೆ ಮೇಲೇರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ