Russia Economy: ದಿವಾಳಿಯತ್ತ ಸಾಗಿರುವ ರಷ್ಯಾಗೆ ಉಕ್ರೇನ್​ ಯುದ್ಧದಲ್ಲಿ 2 ದಿನಕ್ಕೆ ಆದ ನಷ್ಟ 38 ಸಾವಿರ ಕೋಟಿ ರೂಪಾಯಿ

| Updated By: Vinay Bhat

Updated on: Mar 15, 2022 | 7:00 AM

ಉಕ್ರೇನ್​ ಮೇಲೆ ಯದ್ಧ ಮಾಡುವುದಕ್ಕೆ ರಷ್ಯಾ ಕಟ್ಟುತ್ತಿರುವ ಬೆಲೆ ಎಷ್ಟು? ಎರಡು ದಿನಕ್ಕೆ 38 ಸಾವಿರ ಕೋಟಿ ರೂಪಾಯಿ ಆಗಿದೆ. ರಷ್ಯಾ ದೇಶ ದಿವಾಳಿಯತ್ತ ಸಾಗುತ್ತಿದೆ.

Russia Economy: ದಿವಾಳಿಯತ್ತ ಸಾಗಿರುವ ರಷ್ಯಾಗೆ ಉಕ್ರೇನ್​ ಯುದ್ಧದಲ್ಲಿ 2 ದಿನಕ್ಕೆ ಆದ ನಷ್ಟ 38 ಸಾವಿರ ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾವನ್ನು (Russia – Ukraine War) ನೋಡುತ್ತಿರುವ ಜಗತ್ತಿಗೆ ಅದೇನೋ ದೊಡ್ಡ ಶಕ್ತಿಯಂತೆ ಕಾಣುತ್ತಿರಬಹುದು. ಆದರೆ ವಾಸ್ತವ ಏನು ಗೊತ್ತಾ? ಈ ಯುದ್ಧವು ಅದಾಗಲೇ ರಷ್ಯಾವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಬಡ್ಡಿ ದರ ದುಪ್ಪಟ್ಟಾಗಿದೆ. ಷೇರು ಮಾರುಕಟ್ಟೆಯ ದುಕಾನು ಬಂದ್ ಆಗಿದೆ. ರಷ್ಯಾ ದೇಶದ ಕರೆನ್ಸಿ ರೂಬಲ್ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಈ ಯುದ್ಧದಲ್ಲಿ ಸೇನಾ ವೆಚ್ಚ ಈ ಹಿಂದೆಂದೂ ಕಾಣದ ಮಟ್ಟಕ್ಕೆ ಜಾಸ್ತಿ ಆಗಿದ್ದು, ನಾನಾ ದೇಶಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇರಿರುವ ನಿರ್ಬಂಧಕ್ಕೆ ನಲುಗಿ ಹೋಗಿದೆ. ರಷ್ಯಾ ನಾಗರಿಕರಿಗೆ ಈಗ ಮೆಕ್​ಡೊನಾಲ್ಡ್ಸ್ ಅಥವಾ ಸ್ಟಾರ್​ಬಕ್ಸ್​ನಲ್ಲಿ ಖರೀದಿಸಲು ಅವಕಾಶವೇ ಇಲ್ಲ. ಏಕೆಂದರೆ ಅವರಿಗೆ ರಷ್ಯಾದ ಕರೆನ್ಸಿಯಾದ ರೂಬಲ್ ಅನ್ನು ಬದಲಿಸಿಕೊಳ್ಳುವುದಕ್ಕೆ ಅವಕಾಶ ಇಲ್ಲ. ಒಂದು ಅಂದಾಜಿನ ಪ್ರಕಾರ, ಮುಂದಿನ ವರ್ಷ ರಷ್ಯಾದ ಆರ್ಥಿಕತೆ ಶೇ 7ರಷ್ಟು ಕುಸಿಯಲಿದೆ. ಉಕ್ರೇನ್​ನ ವಿರುದ್ಧ ಯುದ್ಧ ಸಾರುವ ಮುನ್ನ ಶೇ 2ರಷ್ಟು ಬೆಳವಣಿಗೆ ಕಾಣುವ ಅಂದಾಜಿತ್ತು. ಮತ್ತೂ ಕೆಲವರು ಹೇಳುವಂತೆ ಕುಸಿತವು ಶೇ 15ರಷ್ಟು ಸಹ ಆಗಬಹುದು.

1998ನೇ ಇಸವಿಯಲ್ಲಿ ಆಗಿದ್ದ ರಷ್ಯನ್ ಷೇರು ಮಾರುಕಟ್ಟೆಯ ಮಹಾ ಪತನಕ್ಕಿಂತ ಈಗಿನದು ಅತಿದೊಡ್ಡದು ಎನ್ನಲಾಗುತ್ತಿದ. ಅಂದ ಹಾಗೆ ಕಳೆದ ಒಂದು ದಶಕದಲ್ಲೇ ರಷ್ಯಾ ಅಂಥ ಬೆಳವಣಿಗೆ ಕಂಡಿಲ್ಲ. ತೈಲ ಹಾಗೂ ಅನಿಲ ರಫ್ತು ಮಾಡುವುದರಿಂದ ವೈವಿಧ್ಯವಾಗಿ ಏನನ್ನೂ ಮಾಡುವುದಕ್ಕೆ ಆ ದೇಶ ವಿಫಲ ಆಗಿದೆ. ಈ ಮಧ್ಯೆ ರಷ್ಯಾದ ಮೇಲೆ ಇಂಧನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವುದಕ್ಕೆ ಯುರೋಪಿಯನ್ ಒಕ್ಕೂಟದಿಂದ ಯೋಜನೆ ರೂಪಿಸಲಾಗಿದೆ. ಅಮೆರಿಕ ಮತ್ತು ಯು.ಕೆ. ಹಂತಹಂತವಾಗಿ ಸ್ವಾವಲಂಬಿಯಾಗಲು ಮತ್ತು ಆಮದನ್ನು ಕಡಿಮೆ ಮಾಡಲು ಆರಂಭಿಸಿವೆ.

ಕೊನೆಗೆ ಉಳಿಯುವುದು ಚೀನಾ, ಬೆಲಾರಸ್
ಒಂದು ವೇಳೆ ದೀರ್ಘಾವಧಿಯಲ್ಲಿ ಸನ್ನಿವೇಶ ಹೀಗೆ ಮುಂದುವರಿದು, ನಿರ್ಬಂಧ ಹಾಗೇ ಉಳಿದುಬಿಟ್ಟರೆ ಚೀನಾ ಮತ್ತು ಬೆಲಾರಸ್ ಹೊರತುಪಡಿಸಿ ಇನ್ನೆಲ್ಲ ಪ್ರಮುಖ ಭಾಗೀದಾರರ ಜತೆಗೆ ಸಂಬಂಧ ಕಡಿತಗೊಳಿಸಲಿದೆ ರಷ್ಯಾ. ರೇಟಿಂಗ್ ಏಜೆನ್ಸಿಗಳು ಹೇಳುತ್ತಿರುವಂತೆ, ಸದ್ಯದಲ್ಲೇ ಸಾಲಗಾರರಿಗೆ ಹಣ ವಾಪಸ್​ ನೀಡುವುದಕ್ಕೂ ಕಷ್ಟವಾಗಲಿದ್ದು, ಮತ್ತೆ ಆರ್ಥಿಕತೆ ಮೇಲೆ ದೀರ್ಘಾವಧಿಯ ಪರಿಣಾಮ ಎದುರಾಗಲಿದೆ. ಹಾಗೆ ಗೌರವ-ವರ್ಚಸ್ಸನ್ನು ಕಳೆದುಕೊಂಡ ರಷ್ಯಾಗೆ ದೊಡ್ಡ ಮಟ್ಟದ ಖಾತ್ರಿ ನೀಡದೆ ಸಾಧ್ಯವಿಲ್ಲ. ಒಂದು ವೇಳೆ ವಿದೇಶ ಬಂಡವಾಳ ಸೆಳೆಯಬೇಕು ಅಂತಾದಲ್ಲಿ ಸಂಪೂರ್ಣವಾಗಿ ಚೀನಾದ ಮೇಲೆ ಅವಲಂಬಿಸಬೇಕು.

ಒಂದು ವೇಳೆ ಉಕ್ರೇನ್​ನಲ್ಲಿ ಪುಟಿನ್​ ಅಂದುಕೊಂಡಂತೆಯೇ ವಿಜಯ ಸಾಧಿಸಿದಲ್ಲಿ ಆರ್ಥಿಕ ಸನ್ನಿವೇಶ ಮತ್ತೂ ಕೆಟ್ಟದಾಗಲಿದೆ. ಇಡೀ ದೇಶವನ್ನು ಸುತ್ತುವರಿದು, ತನಗೆ ಬೇಕಾದಂಥ ಕೈಗೊಂಬೆ ಸರ್ಕಾರವೊಂದನ್ನು ತಂದರೆ, ಉಕ್ರೇನ್​ನಲ್ಲಿ ನಾಶಪಡಿಸಿದಂಥ ಮೂಸೌಕರ್ಯವನ್ನು ಮರು ನಿರ್ಮಾಣ ಮಾಡುವ ಜವಾಬ್ದಾರಿಯೂ ರಷ್ಯಾಗೆ ಬೀಳುತ್ತದೆ. ಇನ್ನು ಉಕ್ರೇನಿಯನ್ನರು ಮೂಲತಃ ಯುರೋಪ್ ಪರವಾದ ಆಲೋಚನೆ ಇರುವಂಥವರು. ಆಗ ಅಲ್ಲಿ ಶಾಂತಿ ಸ್ಥಾಪಿಸಲು ರಷ್ಯಾದ ಬಜೆಟ್​ನಲ್ಲಿ ದೊಡ್ಡ ಮೊತ್ತವನ್ನು ಎತ್ತಿಡಬೇಕಾಗುತ್ತದೆ. ​ಈಗ ಈ ಯುದ್ಧದಲ್ಲಿ ಏನೆಲ್ಲ ಒಳಗೊಂಡಿದೆ ಅಂತ ನೋಡಬೇಕಾದರೆ ಈ ಹಿಂದೆ ಏನಾಗಿತ್ತು ಅಂತ ತಿಳಿದುಕೊಳ್ಳಬೇಕು. ಗ್ರೋಝ್ನಿ, ಚೆಚೆನ್ಯಾ ಯುದ್ಧ ಮತ್ತು ಸರ್ವನಾಶದ ನಂತರ, 1999-2000ನೇ ಇಸವಿಯಲ್ಲಿ ರಷ್ಯಾ ತನ್ನ ಆಳ್ವಿಕೆ ನಡೆಸಲು ವರ್ಷಕ್ಕೆ 380 ಕೋಟಿ ಅಮೆರಿಕನ್ ಡಾಲರ್ ಖರ್ಚು ಮಾಡಿತು. ಈ ಮೊತ್ತದ ವರ್ಗಾವಣೆಯಲ್ಲಿ ಯಾವುದೇ ಇಳಿಕೆ ಇನ್ನಷ್ಟು ಸಮಸ್ಯೆಗೆ ಈಡು ಮಾಡುತ್ತಿತ್ತು. ಮತ್ತು ಕ್ರಿಮಿಯಾ ಕೂಡ ರಷ್ಯಾಗೆ ಇಂಥದ್ದೇ ಖರ್ಚು ತಂದಿತ್ತು.

ಎರಡು ದಿನದಲ್ಲಿ ರಷ್ಯಾಗೆ 500 ಕೋಟಿ ಅಮೆರಿಕನ್ ಡಾಲರ್ ನಷ್ಟ
ಈಗ ಉಕ್ರೇನ್​ನ ಜನ ಸಂಖ್ಯೆ 4 ಕೋಟಿ ಇದೆ. ಚೆಚೆನ್ಯಾಗಿಂತ 40 ಪಟ್ಟು ದೊಡ್ಡದು. ಇನ್ನು ಕ್ರಿಮಿಯನ್ ಭಾಗಕ್ಕಿಂತ 20 ಪಟ್ಟು ದೊಡ್ಡದು. ಯುರೋಪ್​ನಲ್ಲೇ ಭೌಗೋಳಿಕ ವ್ಯಾಪ್ತಿಯಲ್ಲೇ ಎರಡನೇ ಅತಿ ದೊಡ್ಡ ದೇಶ (ರಷ್ಯಾದ ನಂತರ). ಉದ್ಯೋಗ ನಡೆಸುವುದಕ್ಕೆ ಇಲ್ಲಿ ಜೀವನ ನಡೆಸುವುದು ಪರಮ ದುಬಾರಿ. ಇನ್ನು ಈ ತನಕ ಯುದ್ಧದಲ್ಲಿ ರಷ್ಯಾಗೆ ಎಷ್ಟು ನಷ್ಟವಾಗಿದೆ ಅನ್ನೋದು ಸೇನಾ ರಹಸ್ಯ. ಆದರೆ ಉಕ್ರೇನಿಯನ್ನರು ಅಂದಾಜಿಸುವಂತೆ, ಟ್ಯಾಂಕ್​ಗಳು, ವಿಮಾನಗಳು ಹಾಗೂ ಶಸ್ತ್ರಾಸ್ತ್ರಗಳ ನಾಶಗಳಿಂದ ಪುಟಿನ್​ಗೆ 500 ಕೋಟಿ ಅಮೆರಿಕನ್ ಡಾಲರ್​ ಯುದ್ಧದ ಆರಂಭದ ಎರಡು ದಿನದಲ್ಲಿ ಕೈ ಬಿಟ್ಟುಹೋಗಿದೆ.

ಇನ್ನು ಈ ಮೇಲಿನದು ಕೇವಲ ಸೇನೆಗೆ ಸಂಬಂಧಿಸಿದ ವಸ್ತುಗಳ ನಷ್ಟದ ಲೆಕ್ಕಾಚಾರ ಅಷ್ಟೇ. ಆದರೆ ಯುದ್ಧದಲ್ಲಿ ಸಾವನ್ನಪ್ಪಿದ ಪ್ರತಿ ವ್ಯಕ್ತಿಯ ಜೀವಕ್ಕೆ ಬೆಲೆ ಕಟ್ಟಲಾಗದು. ಇಲ್ಲಿ ತನಕ ಉಕ್ರೇನ್​ನಲ್ಲಿ ಒಂದು ಅಂದಾಜಿನ ಪ್ರಕಾರ, 12,000 ರಷ್ಯನ್ ಸೈನಿಕರು ಸಾವನ್ನಪ್ಪಿದ್ದಾರೆ. ಒಂದು ಹೋಲಿಕೆ ಅಂತ ನೋಡುವುದಾದರೆ, ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ 15 ಸಾವಿರದಷ್ಟು ಮತ್ತು ಮೊದಲ ಚೆಚೆನ್ ಯುದ್ಧದಲ್ಲಿ 8 ಸಾವಿರ ಸೈನಿಕರು ಮೃತಪಟ್ಟಿದ್ದರು. ಎರಡನೆಯದರಲ್ಲಿ ಸ್ವಲ್ಪ ಹೆಚ್ಚಿತ್ತು. ಆದರೆ ನಿಖರವಾದ ಲೆಕ್ಕ ತಿಳಿದಿಲ್ಲ. ಒಂದು ಅಂದಾಜಿನ ಲೆಕ್ಕವನ್ನು ಆಯುಷ್ಯದ ನಿರೀಕ್ಷೆ ಮತ್ತು ಜಿಡಿಪಿ ತಲಾದಾಯದ ಮೇಲೆ ಮಾಡುವುದಾದರೆ, 10,000 ರಷ್ಯನ್ ಸೈನಿಕರು ಸಾವನ್ನಪ್ಪಿದರೆ ಅದರ ವೆಚ್ಚ 400 ಕೋಟಿ ಅಮೆರಿಕನ್ ಡಾಲರ್​ಗೂ ಹೆಚ್ಚಾಗುತ್ತದೆ. ಇದರ ಜತೆಗೆ ಅವರ ಕುಟುಂಬದವರ ಮಾನಸಿಕ ಆರೋಗ್ಯ ಮತ್ತು ಯುದ್ಧದಲ್ಲಿ ಸಕ್ರಿಯವಾಗಿ ಭಾಗಿ ಆಗುವ ಎಲ್ಲ ಸೈನಿಕರ ಮಾನಸಿಕ ಆರೋಗ್ಯವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು.

ರಷ್ಯಾದ ಕರೆನ್ಸಿ ಈಗಾಗಲೇ ಶೂನ್ಯ ಮೌಲ್ಯದತ್ತ ಸಾಗಿದೆ
ಈ ಎಲ್ಲ ಲೆಕ್ಕಾಚಾರಗಳು ತಕ್ಷಣದಲ್ಲಿ ಸರ್ಕಾರದ ಬಜೆಟ್​ ಲೆಕ್ಕಾಚಾರದ ಮೇಲೆ ಪ್ರಭಾವ ಆಗದಿರಬಹುದು. ಯುದ್ಧದಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗೆ ಪುಟಿನ್ ಪರಿಹಾರವನ್ನು ಘೋಷಿಸಬೇಕಾಗುತ್ತದೆ. ಅದನ್ನು ಸ್ಥಳೀಯ ಕರೆನ್ಸಿಯಲ್ಲಿ ಪಾವತಿಸಲಿದ್ದು, ವಿದೇಶೀ ವಿನಿಮಯ ಅಂತ ನೋಡಿದರೆ, ಅದರ ಬೆಲೆ ಶೂನ್ಯವಾಗಿದೆ. ಹಲವು ವಸ್ತುಗಳು ಹಾಗೂ ಮಾನವ ನಷ್ಟವನ್ನು ಈಗಾಗಲೇ ಹೊಂದಿದ ಆಸ್ತಿಯ ಅಡಿಯಲ್ಲಿ ಪಟ್ಟಿ ಮಾಎಬೇಕಾಗುತ್ತದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡುವುದರ ವೆಚ್ಚವನ್ನು ಭವಿಷ್ಯದಲ್ಲಿಯಷ್ಟೇ ಭರಿಸಬಹುದು. ಮುಂಬರುವ ದಿನಗಳಲ್ಲಿ ಪುಟಿನ್​ ಪಾಲಿನ್ ಈ ಯುದ್ಧ ಎಷ್ಟು ದುಬಾರಿ ಆಗಲಿದೆ ಎಂಬುದು ಎರಡು ಸಂಗತಿ ಮೇಲೆ ನಿರ್ಧಾರ ಆಗುತ್ತದೆ.

ಪಾಶ್ಚಾತ್ಯ ದೇಶಗಳ ತಾಂತ್ರಿಕ ಆಮದುಗಳಾದ ಎಲೆಕ್ಟ್ರಾನಿಕ್ಸ್ ಮತ್ತು ಇಂಡಸ್ಟ್ರಿಯಲ್ ರೋಬೋಟ್​ಗಳಂಥದ್ದು ಇಲ್ಲದೆ ರಷ್ಯನ್ ಮಿಲಿಟರಿ ಹಾಗೂ ರಕ್ಷಣಾ ಕೈಗಾರಿಕೆಯ ಸ್ಥಿತಿ ಏನು? ರಷ್ಯಾ ಮೇಲೆ ನಿರ್ಬಂಧ ಹೇರಿರುವುದು ಮತ್ತು ಸಾವು- ನೋವುಗಳು ರಷ್ಯಾದಲ್ಲಿ ಸಾರ್ವಜನಿಕ ಅಭಿಪ್ರಾಯ ರೂಪಿಸುವುದಕ್ಕೆ ಯಶಸ್ಸು ಕಾಣಬಹುದಾ? ಯಾರು ತನ್ನ ನಾಗರಿಕರ ಭವಿತವ್ಯದ ಮೇಲೆ ಆಗುವ ದೀರ್ಘಾವಧಿ ಪರಿಣಾಮದ ಬಗ್ಗೆ ಆಲೋಚನೆ ಮಾಡುತ್ತಾರೋ ಅಂಥ ನಾಯಕರಿಗೆ ಮಾತ್ರ ಆರ್ಥಿಕ ಎಚ್ಚರಿಕೆ ಎಂಬುದು ಗಂಭೀರ ಸಂಗತಿ ಆಗುತ್ತದೆ.

(ಲೇಖನ ಮೂಲ: ಎಕನಾಮಿಕ್ ಟೈಮ್ಸ್, ಲೇಖಕರು- ರೆನೌಡ್ ಫೌಕಾರ್ಟ್, ಸಂವಾದದ ಆಯ್ದ ಭಾಗ ಪಿಟಿಐ ಸುದ್ದಿಸಂಸ್ಥೆಯಿಂದ)

ಇದನ್ನೂ ಓದಿ: Russia- Ukraine War: ಉಕ್ರೇನ್ ಸೇನೆಯಿಂದ ರಷ್ಯಾದ 12,000 ಸೈನಿಕರು, 81 ಹೆಲಿಕಾಪ್ಟರ್, 49 ವಿಮಾನ, 335 ಟ್ಯಾಂಕ್​ಗಳು ಧ್ವಂಸ