
ನವದೆಹಲಿ, ಫೆಬ್ರುವರಿ 18: ದೇಶದಲ್ಲಿ ನಿರುದ್ಯೋಗ ದರ ಅಲ್ಪ ಇಳಿಕೆ ಕಂಡಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಘಟನೆಯಾದ ಎನ್ಎಸ್ಎಸ್ಒ ಬಿಡುಗಡೆ ಮಾಡಿದ 25ನೇ ಪಿಎಲ್ಎಫ್ಎಸ್ ಸಮೀಕ್ಷಾ ವರದಿ ಪ್ರಕಾರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನಲ್ಲಿ ನಗರ ಭಾಗದಲ್ಲಿ ನಡೆದ 15 ವರ್ಷ ಮೇಲ್ಪಟ್ಟವರ ಸಮೀಕ್ಷೆಯಲ್ಲಿ ನಿರುದ್ಯೋಗ ಮಟ್ಟ ಶೇ. 6.4ರಷ್ಟಿರುವುದು ತಿಳಿದುಬಂದಿದೆ. ಹಿಂದಿನ ಕ್ವಾರ್ಟರ್ಗೆ (ಜುಲೈ-ಸೆಪ್ಟೆಂಬರ್) ಹೋಲಿಸಿದರೆ ಈ ದರದಲ್ಲಿ ವ್ಯತ್ಯಾಸವಾಗಿಲ್ಲ. ಆದರೆ, ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ 10 ಮೂಲಾಂಕಗಳಷ್ಟು ದರ ಕಡಿಮೆ ಆಗಿದೆ. 2023ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಿರುದ್ಯೋಗ ದರ ಶೇ. 6.5ರಷ್ಟಿತ್ತು.
ಕೆಲಸ ಮಾಡಲು ಲಭ್ಯ ಇರುವ ಮತ್ತು ಅರ್ಹತೆ ಇರುವ ಒಟ್ಟು ಕಾರ್ಮಿಕರ ಅಥವಾ ಉದ್ಯೋಗಿಗಳ ಸಮೂಹದಲ್ಲಿ ಕೆಲಸ ಇಲ್ಲದ ವ್ಯಕ್ತಿಗಳ ಪ್ರಮಾಣವನ್ನು ನಿರುದ್ಯೋಗ ಎಂದು ಗಣಿಸಲಾಗಿದೆ. ಒಂದು ವಾರದಲ್ಲಿ ಯಾವುದೇ ದಿನದಲ್ಲಿ ಕನಿಷ್ಠ ಒಂದು ಗಂಟೆಯೂ ಕೆಲಸ ಮಾಡದ ವ್ಯಕ್ತಿಯನ್ನು ನಿರುದ್ಯೋಗ ಎಂದು ಪರಿಗಣಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ನಗರ ಭಾಗವನ್ನು ಆಯ್ದುಕೊಳ್ಳಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್ 19ನೇ ಕಂತಿನ ಹಣ ಫೆ. 24ಕ್ಕೆ ಬಿಡುಗಡೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ…
2024ರ ಕೊನೆಯ ಕ್ವಾರ್ಟರ್ನಲ್ಲಿ ಪುರುಷರು ಮತ್ತು ಮಹಿಳೆಯರ ನಿರುದ್ಯೋಗ ದರ ಕ್ರಮವಾಗಿ ಶೇ. 5.8 ಮತ್ತು ಶೇ. 8.1ರಷ್ಟಿತ್ತು. ಹಿಂದಿನ ಕ್ವಾರ್ಟರ್ಗೆ ಹೋಲಿಸಿದರೆ ಪುರುಷರ ನಿರುದ್ಯೋಗ ದರ ಶೇ. 5.7ರಿಂದ ಶೇ. 5.8ಕ್ಕೆ ಏರಿದೆ. ಹಿಂದಿನ ವರ್ಷದ ಕ್ವಾರ್ಟರ್ಗೆ ಹೋಲಿಸಿದರೆ ಯಥಾಸ್ಥಿತಿ ಇದೆ.
ಆದರೆ, ಮಹಿಳೆಯರ ನಿರುದ್ಯೋಗ ದರ ಗಣನೀಯವಾಗಿ ತಗ್ಗಿದೆ. ಅಂದರೆ, ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಕುರುಹು ಇದೆ. ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ನಗರ ಭಾಗದಲ್ಲಿ 15 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯರಲ್ಲಿ ನಿರುದ್ಯೋಗ ದರ ಶೇ. 8.1ಕ್ಕೆ ಇಳಿದಿದೆ. ಹಿಂದಿನ ಕ್ವಾರ್ಟರ್ನಲ್ಲಿ ಇದು ಶೇ. 8.4ರಷ್ಟಿತ್ತು. ಹಿಂದಿನ ವರ್ಷದ ಕ್ವಾರ್ಟರ್ನಲ್ಲಿ ಇದು ಶೇ. 8.6ರಷ್ಟಿತ್ತು. ಹೀಗಾಗಿ, ಮಹಿಳೆಯರ ನಿರುದ್ಯೋಗ ದರ ಸ್ಪಷ್ಟವಾಗಿ ಇಳಿಮುಖವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ