ನವದೆಹಲಿ, ಮಾರ್ಚ್ 8: ಪಿಎಂ ಉಜ್ವಲ ಯೋಜನೆಯ ಗ್ರಾಹಕರಿಗೆ ಇನ್ನೂ ಒಂದು ವರ್ಷ ಎಲ್ಪಿಜಿ ಗ್ಯಾಸ್ಗೆ 300 ರೂ ಸಬ್ಸಿಡಿ ಸಿಗಲಿದೆ. 2025ರ ಮಾರ್ಚ್ ತಿಂಗಳವರೆಗೆ ಫಲಾನುಭವಿಗಳಿಗೆ ಸಬ್ಸಿಡಿ ಮುಂದುವರಿಯಲಿದೆ. ಕೇಂದ್ರ ಸಂಪುಟ ಗುರುವಾರ ಉಜ್ವಲ ಯೋಜನೆ (PM Ujjwala Yojana) ಸಬ್ಸಿಡಿ ಮುಂದುವರಿಕೆಗೆ ಅನುಮೋದನೆ ನೀಡಿದೆ. ಈ ಯೋಜನೆ ಅಡಿಯಲ್ಲಿ ಪಿಎಂ ಉಜ್ವಲ ಯೋಜನೆಯ 10.27 ಕೋಟಿ ಫಲಾನುಭವಿಗಳಿಗೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 300 ರೂ ಸಬ್ಸಿಡಿ ಸಿಗುತ್ತದೆ. ಒಂದು ವರ್ಷದಲ್ಲಿ 12 ಎಲ್ಪಿಜಿ ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. 2024-25ರ ಹಣಕಾಸು ವರ್ಷದಲ್ಲಿ ಈ ಸಬ್ಸಿಡಿಗೆ ಸರ್ಕಾರ 12,000 ಕೋಟಿ ರೂ ವ್ಯಯಿಸಲಿದೆ.
ಬಡಮಹಿಳೆಯರಿಗೆ ಸಹಾಯವಾಗಲೆಂದು 2016ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಬಡವರು, ಪರಿಶಿಷ್ಟ ಜಾತಿ, ಪಂಗಡ, ಅತಿ ಹಿಂದುಳಿದವರು ಹೀಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಹಿಂದುಳಿದ ಸಮುದಾಯದ ಮಹಿಳೆಯರು ಪಿಎಂ ಉಜ್ವಲ ಯೋಜನೆಯ ಫಲಾನುಭವಿಗಳಾಗಬಹುದು. ಈವರೆಗೆ 10 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಗಿಫ್ಟ್
ಕೇಂದ್ರ ಸಂಪುಟ ನಿನ್ನೆ (ಮಾ. 7) ಪಿಎಂ ಉಜ್ವಲ ಯೋಜನೆಯ ಸಬ್ಸಿಸಿ ಮುಂದುವರಿಕೆ ಅಷ್ಟೇ ಅಲ್ಲದೇ, ತುಟ್ಟಿಭತ್ಯೆ ಶೇ. 4ಕ್ಕೆ ಹೆಚ್ಚಳ ಹಾಗೂ ಇಂಡಿಯಾ ಎಐ ಮಿಷನ್ ಯೋಜನೆಗಳಿಗೂ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳವಾಗಿದೆ. ಇದರೊಂದಿಗೆ ಒಟ್ಟು ತುಟ್ಟಿಭತ್ಯೆ ಶೇ. 50ಕ್ಕೆ ಏರಿಕೆ ಆಗಿದೆ. ಇದರ ಜೊತೆಗೆ ಸರ್ಕಾರಿ ಉದ್ಯೋಗಿಗಳಿಗೆ ಎಚ್ಆರ್ಎ ಕೂಡ ಹೆಚ್ಚಳವಾಗಿದೆ.
ಇದನ್ನೂ ಓದಿ: ಮೋದಿ ತಂತ್ರಜ್ಞಾನದ ಅಳವಡಿಕೆಗೆ ಜೈ, ಕೃತಕ ಬುದ್ಧಿಮತ್ತೆ ಉತ್ತೇಜನಕ್ಕೂ ಸೈ: ಅಶ್ವಿನಿ ವೈಷ್ಣವ್
ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆಗೆ ಉತ್ತೇಜಿಸಲು ಸರ್ಕಾರ ಇಂಡಿಯಾ ಎಐ ಮಿಷನ್ ಆರಂಭಿಸಿದೆ. ಮುಂದಿನ ಐದು ವರ್ಷಕ್ಕೆ 10,371.92 ಕೋಟಿ ರೂ ನಿಯೋಜಿಸಿದೆ. ಭಾರತದಲ್ಲಿ ಎಐ ಕಂಪ್ಯೂಟಿಂಗ್ ಕೆಪಾಸಿಟಿ ಸ್ಥಾಪಿಸುವ ಖಾಸಗಿ ಕಂಪನಿಗಳಿಗೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಎಐ ಸ್ಟಾರ್ಟಪ್ಗಳಿಗೂ ಈ ಯೋಜನೆಯಿಂದ ಸಹಾಯ ಸಿಗುತ್ತದೆ. ಒಟ್ಟಾರೆ ಬೃಹತ್ ಕಂಪ್ಯೂಟಿಂಗ್ ಸೌಕರ್ಯ ನಿರ್ಮಿಸಲು ಈ ನಿಧಿಯನ್ನು ಬಳಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ