10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ

UPI and IMPS payment of over Rs 10,000 may have 1 hr cooling off period: ಯುಪಿಐ, ಐಎಂಪಿಎಸ್​ನಂತಹ ರಿಯಲ್ ಟೈಮ್ ಪೇಮೆಂಟ್​ಗಳಿಗೆ ಇರುವ ನಿಯಮವನ್ನು ಆರ್​ಬಿಐ ಬಿಗಿಗೊಳಿಸಲು ಯೋಜಿಸುತ್ತಿದೆ. 10,000 ರೂಗೂ ಅಧಿಕ ಮೊತ್ತದ ಟ್ರಾನ್ಸಾಕ್ಷನ್​ಗಳಿಗೆ 1 ಗಂಟೆ ಕೂಲಿಂಗ್ ಆಫ್ ಅವಧಿ ಸೇರಿಸುವ ಪ್ರಸ್ತಾಪ ಆರ್​ಬಿಐ ಮುಂದಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಪೇಮೆಂಟ್​ಗೆ ಅನ್ವಯ ಆಗುತ್ತದೆ. ವರ್ತಕರಿಗೆ ಮಾಮೂಲಿಯಂತೆ ಪೇಮೆಂಟ್ ಮಾಡಬಹುದು.

10,000 ರೂಗಿಂತ ಹೆಚ್ಚಿನ ಮೊತ್ತದ ಯುಪಿಐ, ಐಎಂಪಿಎಸ್ ಪೇಮೆಂಟ್ 1 ಗಂಟೆ ವಿಳಂಬ? ಆರ್​ಬಿಐ ಹೊಸ ಕ್ರಮಕ್ಕೆ ಯೋಜನೆ
ಯುಪಿಐ
Image Credit source: Shutterstock

Updated on: Apr 10, 2026 | 8:05 PM

ನವದೆಹಲಿ, ಏಪ್ರಿಲ್ 10: ಆನ್ಲೈನ್ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಡಿಜಿಟಲ್ ಪೇಮೆಂಟ್ ಸಿಸ್ಟಂನಲ್ಲಿ (Digital payment system) ಸರ್ಕಾರ ಒಂದಷ್ಟು ಮಾರ್ಪಾಡು ಮಾಡಲು ಹೊರಟಿದೆ. ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಅಧಿಕ ಮೌಲ್ಯದ ವಹಿವಾಟುಗಳಿಗೆ ಒಂದು ಗಂಟೆ ವಿಳಂಬ ಪಾವತಿ ವ್ಯವಸ್ಥೆ ತರುವ ಪ್ರಸ್ತಾಪವ ಆರ್​ಬಿಐ ಮುಂದಿದೆ ಎಂದು ವರದಿಗಳು ಹೇಳುತ್ತಿವೆ. ಈ ಪ್ರಸ್ತಾಪದ ಪ್ರಕಾರ ಯುಪಿಐ ಮತ್ತು ಐಎಂಪಿಎಸ್ ಇತ್ಯಾದಿ ಮೂಲಕ ಮಾಡಲಾಗುವ 10,000 ರೂಗೂ ಅಧಿಕ ಮೊತ್ತದ ಪೇಮೆಂಟ್​ಗಳು ರಿಯಲ್ ಟೈಮ್​ನಲ್ಲಿ ಸಂದಾಯವಾಗುವುದಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ ಈ ನಿರ್ಬಂಧವು ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಪೇಮೆಂಟ್​ಗೆ ಅನ್ವಯ ಆಗುತ್ತದೆ. ವರ್ತಕರಿಗೆ ಮಾಡಲಾಗುವ ಪೇಮೆಂಟ್​ಗಳು ಮಾಮೂಲಿ ರೀತಿಯಲ್ಲಿ ರಿಯಲ್​ಟೈಮ್​ನಲ್ಲೇ ಆಗುತ್ತವೆ.

ಇದನ್ನೂ ಓದಿ: ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

10,000 ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ಒಂದು ಗಂಟೆಯ ಕೂಲಿಂಗ್ ಪೀರಿಯಡ್ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಆ ಹಣವು ತತ್​ಕ್ಷಣವೇ ವ್ಯಕ್ತಿಯ ಖಾತೆಗೆ ರವಾನೆಯಾಗುವುದಿಲ್ಲ. ಆನ್​ಲೈನ್​ನಲ್ಲಿ ಕೆಲವರು ಲಿಂಕ್​ಗಳನ್ನು ಕಳುಹಿಸಿ ಅಕ್ರಮವಾಗಿ ಪೇಮೆಂಟ್ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹಲವು ಬೆಳಕಿಗೆ ಬರುತ್ತಿವೆ. ಹಾಗೆಯೇ, ಯುಪಿಐ ಗ್ರಾಹಕರು ತಪ್ಪಾಗಿ ಹಣ ಕಳುಹಿಸುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಆರ್​ಬಿಐ ಈ ರೀತಿಯ ಕ್ರಮ ತೆಗೆದುಕೊಂಡಿದೆ.

ಪರಿಚಿತ ವ್ಯಕ್ತಿಗಳ ವೈಟ್​ಲಿಸ್ಟ್

ಆರ್​ಬಿಐ ಬಳಿ ಇನ್ನೊಂದು ಪ್ರಸ್ತಾಪ ಇದೆ. ಹಣ ಕಳುಹಿಸಲಾಗುವ ವ್ಯಕ್ತಿಗಳು ಅಪರಿಚಿತರಾಗಿದ್ದರೆ ರಿಯಲ್​ಟೈಮ್​ನಲ್ಲಿ ಪೇಮೆಂಟ್ ಮಾಡುವುದು ಅಪಾಯ ಆಗಬಹುದು. ಆದರೆ, ಪರಿಚಿತರಾಗಿದ್ದರೆ? ಆರ್​ಬಿಐ ಇದಕ್ಕೊಂದು ಪರಿಹಾರ ಹುಡುಕಿದೆ. ನೆಟ್​ಬ್ಯಾಂಕಿಂಗ್​ನಲ್ಲಿ ಇರಲಾಗುವಂತೆ ಪರಿಚಿತ ಅಥವಾ ಖಾತ್ರಿ ಇರುವ ವ್ಯಕ್ತಿಗಳಿಗೆ ಪೂರ್ವಾನುಮತಿ ಕೊಡಲು ವೈಟ್​ಲಿಸ್ಟಿಂಗ್​ನಂತಹ ವ್ಯವಸ್ಥೆ ಮಾಡುವುದು ಆರ್​ಬಿಐನ ಉದ್ದೇಶವಾಗಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

10,000ಕ್ಕೂ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್​ಗಳ ಮೇಲೆ ಆರ್​ಬಿಐ ನಿರ್ಬಂಧ ಹಾಕಲು ಕಾರಣವಿದೆ. ಹೆಚ್ಚಿನ ಫ್ರಾಡ್ ಕೇಸ್​ಗಳು ಈ ಮೊತ್ತದ ಟ್ರಾನ್ಸಾಕ್ಷನ್​ಗಳಿಗೆ ಸಂಬಂಧಿಸಿದ್ದೇ ಆಗಿವೆ. ಈ ಫ್ರಾಡ್​ಗಳಿಗೆ ಜನರು ಕಳೆದುಕೊಂಡಿರುವ ಒಟ್ಟೂ ಹಣದ ಶೇ. 98.5ರಷ್ಟು ಮೊತ್ತವು ಈ ಕೆಟಗರಿಯದ್ದಾಗಿದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಯುಪಿಐ, ಐಎಂಪಿಎಸ್ ಪೇಮೆಂಟ್ ನಿಯಮವನ್ನು ಆರ್​ಬಿಐ ಬಿಗಿಗೊಳಿಸಲು ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us