ನವದೆಹಲಿ, ಡಿಸೆಂಬರ್ 6: ಸಣ್ಣ ಹಣಕಾಸು ಬ್ಯಾಂಕುಗಳಾದ ಎಸ್ಎಫ್ಬಿಗಳು ತಮ್ಮ ಗ್ರಾಹಕರಿಗೆ ಯುಪಿಐನಲ್ಲಿ ಕ್ರೆಡಿಟ್ ಲೈನ್ ಕೊಡುವ ಅವಕಾಶ ಪಡೆದಿವೆ. ಅಂದರೆ, ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಖಾತೆಗಳನ್ನು ಯುಪಿಐಗೆ ಜೋಡಿಸಿಕೊಂಡಿರುವ ಗ್ರಾಹಕರು, ಪೂರ್ವನಿಗದಿತ ಮೊತ್ತದ ಕ್ರೆಡಿಟ್ ಲೈನ್ ಪಡೆಯಬಹುದು. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ಬಳಸಿಕೊಳ್ಳಬಹುದು. ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರ್ಬಿಐನ ಈ ನಿರ್ಧಾರವು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ ಬಹಳ ಅನುಕೂಲವಾಗಲಿದೆ. ಬ್ಯಾಂಕುಗಳು ಮಾತ್ರವಲ್ಲ, ಅವುಗಳ ಗ್ರಾಹಕರಿಗೂ ಇದು ಅನುಕೂಲ ತರಲಿದೆ. ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಗ್ರಾಹಕರಾಗಿರುವವರು ಸಾಮಾನ್ಯವಾಗಿ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ಹಾಗೂ ಪಟ್ಟಣ ಮತ್ತು ಗ್ರಾಮೀಣ ಭಾಗದ ವ್ಯಕ್ತಿಗಳು ಹೆಚ್ಚಿದ್ದಾರೆ. ಇವರಿಗೆ ಯುಪಿಐನಲ್ಲಿ ಹೆಚ್ಚು ಕ್ರೆಡಿಟ್ ಲೈನ್ ಸಿಗಲಿದೆ. ಎಸ್ಎಫ್ಬಿಗಳಿಗೂ ಕೂಡ ಹೊಸ ಆದಾಯ ಮಾರ್ಗ ಸಿಕ್ಕಂತಾಗುತ್ತದೆ.
ಕಮರ್ಷಿಯಲ್ ಬ್ಯಾಂಕುಗಳು ಯುಪಿಐನಲ್ಲಿ ಪೂರ್ಣನಿಗದಿತ ಕ್ರೆಡಿಟ್ ಲೈನ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ. ಈಗ ಇದನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ ವಿಸ್ತರಿಸಲಾಗಿದೆ. ಕೆಲ ಎಸ್ಎಫ್ಬಿಗಳು ಕ್ರೆಡಿಟ್ ಕಾರ್ಡ್ಗಳನ್ನೂ ನೀಡುತ್ತಿವೆ. ಯುಪಿಐನಲ್ಲಿ ಕ್ರೆಡಿಟ್ ಲೈನ್ ಕೊಡುವುದು ಈಗ ಈ ಎಸ್ಎಫ್ಬಿಗಳಿಗೆ ಮತ್ತಷ್ಟು ಹುರಿದುಂಬಿಸಿದಂತಾಗಬಹುದು.
ಇದನ್ನೂ ಓದಿ: ಸಿಆರ್ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ
ಆರ್ಬಿಐ ನಿನ್ನೆ ತೆಗೆದುಕೊಂಡ ಮಹತ್ವದ ನಿರ್ಧಾರವೊಂದರಲ್ಲಿ ಯುಪಿಐ ಲೈಟ್ ವಹಿವಾಟು ಮಿತಿಯನ್ನು ಹೆಚ್ಚಿಸಿದೆ. ಪಿನ್ ಇಲ್ಲದೇ ಹಣ ಪಾವತಿಸಲು ಯುಪಿಐ ಲೈಟ್ ಅವಕಾಶ ಕೊಡುತ್ತದೆ. 500 ರೂವರೆಗಿನ ಹಣವನ್ನು ಒಂದು ವಹಿವಾಟಿನಲ್ಲಿ ಪಾವತಿಸಬಹುದು. ಈಗ ಈ ಮಿತಿಯನ್ನು 1,000 ರೂಗೆ ಏರಿಸಲಾಗಿದೆ. ಹಾಗೆಯೇ, ಯುಪಿಐ ಲೈಟ್ ಅಕೌಂಟ್ನಲ್ಲಿ ಇಡಬಹುದಾದ ಗರಿಷ್ಠ ಹಣದ ಮಿತಿಯನ್ನು 2,000 ರೂನಿಂದ 5,000 ರೂಗೆ ಏರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ