
ನವದೆಹಲಿ, ಆಗಸ್ಟ್ 3: ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುವ ಡಿಜಿಟಲ್ ಪೇಮೆಂಟ್ ಸಿಸ್ಟಂ ಯುಪಿಐ (UPI). ಸುರಕ್ಷಿತ ಹಾಗೂ ಸುಲಭ ಪಾವತಿಯಲ್ಲಿ ಜನರ ವಿಶ್ವಾಸ ಹೊಂದಿರುವ ಯುಪಿಐನಲ್ಲಿ ಈಗ ಹೆಚ್ಚುವರಿ ಸುರಕ್ಷತಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಆನ್‌ಲೈನ್ ವಂಚನೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಯುಪಿಐನಲ್ಲಿ ಹೆಚ್ಚುವರಿ ಸೆಕ್ಯೂರಿಟಿ ಲೇಯರ್ ತರಬೇಕೆಂದು ಬ್ಯಾಂಕುಗಳು ಪ್ರಸ್ತಾಪಿಸಿವೆ. ಇದು ಜಾರಿಯಾದಲ್ಲಿ, ಹಣ ವರ್ಗಾವಣೆ ಆಗುವ ಮೊದಲು ಹೆಚ್ಚುವರಿ ದೃಢೀಕರಣ ಕೇಳಲಾಗುತ್ತದೆ. ಅಂದರೆ, ಹಣ ಕಳುಹಿಸಿದ ಬಳಿಕ ಅಂತಿಮವಾಗಿ ಪೇಮೆಂಟ್ಗೆ Yes ಅಥವಾ Cancel ಆಯ್ಕೆಗಳನ್ನು ಬಳಕೆದಾರರಿಗೆ ನೀಡಬಹುದು.
ಎಂದಿನಂತೆ ನೀವು ಯುಪಿಐ ಪಿನ್ (UPI PIN) ನಮೂದಿಸಿದ ಬಳಿಕವೂ, ಹಣ ಕಡಿತಗೊಳ್ಳುವ ಅಂತಿಮ ಹಂತದಲ್ಲಿ ಒಂದು ಹೆಚ್ಚುವರಿ ಪಾಪ್-ಅಪ್ ಅಥವಾ ದೃಢೀಕರಣ ಸಂದೇಶ ಬರಬಹುದು. ಅಲ್ಲಿ ಮತ್ತೊಮ್ಮೆ ವಹಿವಾಟಿನ ವಿವರಗಳನ್ನು ಪರಿಶೀಲಿಸಿ ಅನುಮೋದನೆ (Yes) ನೀಡಿದ ನಂತರವೇ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ.
ಎಲ್ಲಾ ಪೇಮೆಂಟ್ಗೂ ಈ ದೃಢೀಕರಣ ಕೇಳಲಾಗುವುದಿಲ್ಲ. ಬ್ಯಾಂಕುಗಳಿಗೆ ಅನುಮಾನಾಸ್ಪದವೆನಿಸುವ ಟ್ರಾನ್ಸಾಕ್ಷನ್ ಎಂದನಿಸಿದಾಗ ಇದನ್ನು ಕೇಳಲಾಗುತ್ತದೆ. ಇದರಿಂದ ತಪ್ಪಾಗಿ ಹಣ ಪಾವತಿ ಮಾಡುವ ಬಳಕೆದಾರರಿಗೆ ತಮ್ಮ ತಪ್ಪಿನ ಅರಿವು ಹೊಂದಲು ಸಮಯಾವಕಾಶ ಸಿಕ್ಕಂತಾಗುತ್ತದೆ. ಇದು ಈ ಹೊಸ ಸೆಕ್ಯೂರಿಟಿ ಲೇಯರ್ ಜೋಡಣೆಯ ಉದ್ದೇಶ ಎನ್ನಲಾಗಿದೆ.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್ನಲ್ಲಿ ಮಾಡಬಾರದ 5 ತಪ್ಪುಗಳಿವು
ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಗ್ರಾಹಕರ ಹಣಕ್ಕೆ ಹೆಚ್ಚಿನ ರಕ್ಷಣೆ ಒದಗಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹಾಗೂ ಸಂಬಂಧಿತ ನಿಯಂತ್ರಕ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಇಂತಹ ಸುರಕ್ಷತಾ ಕ್ರಮಗಳ ಕುರಿತು ಚಿಂತನೆ ನಡೆಸುತ್ತಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಬ್ಯಾಂಕುಗಳು ಇಂಥದ್ದೊಂದು ಪ್ರಸ್ತಾವವನ್ನು ಆರ್ಬಿಐಗೆ ಸಲ್ಲಿಸಿದೆ. ಈ ಕುರಿತು ಅಧಿಕೃತ ಮಾರ್ಗಸೂಚಿಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ