AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PPF: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು

5 mistakes people should avoid while investing in Public Provident Fund: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಪಿಪಿಎಫ್​ನಲ್ಲಿ ಮಾಡುವ ಹೂಡಿಕೆಯು 15 ವರ್ಷದ ಲಾಕ್ ಇನ್ ಅವಧಿ ಹೊಂದಿರುತ್ತದೆ. ಇದು ತೀರಾ ಹೆಚ್ಚಿನ ಬಡ್ಡಿ ಆದಾಯ ತರುವುದಿಲ್ಲವಾದರೂ ಉತ್ತಮ ತೆರಿಗೆ ಲಾಭ ನೀಡುತ್ತದೆ. ಈ ಪಿಪಿಎಫ್​ನಲ್ಲಿ ಹೂಡಿಕೆ ಮಾಡುವ ಮುನ್ನ ಒಂದಷ್ಟು ಮಾಹಿತಿ ತಿಳಿದಿರುವುದು ಉತ್ತಮ. ಈ ಐದು ತಪ್ಪುಗಳನ್ನು ಮಾಡದಂತೆ ಎಚ್ಚರ ವಹಿಸಬೇಕು.

PPF: ದೀರ್ಘಾವಧಿ ಹೂಡಿಕೆ ಸ್ಕೀಮ್ ಪಿಪಿಎಫ್​ನಲ್ಲಿ ಮಾಡಬಾರದ 5 ತಪ್ಪುಗಳಿವು
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2026 | 4:31 PM

Share

ಆದಾಯ ತೆರಿಗೆ ಪಾವತಿದಾರರ ಪಾಲಿಗೆ ನೆಚ್ಚಿನ ಹೂಡಿಕೆ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ಒಂದು. ಇದು ದೀರ್ಘಕಾಲೀನ ಉಳಿತಾಯ ನೀಡುವ ಮತ್ತು ತೆರಿಗೆ ಲಾಭವನ್ನೂ ತಂದುಕೊಡುವ ಸ್ಕೀಮ್. 15 ವರ್ಷಗಳ ಲಾಕ್-ಇನ್ ಅವಧಿ ಇರುವ ಪಿಪಿಎಫ್ ಯೋಜನೆ ವಾರ್ಷಿಕ ಶೇ. 7.1 ಬಡ್ಡಿ ನೀಡುತ್ತದೆ. ಇದರ ಮೇಲಿನ ಹೂಡಿಕೆ, ಬಡ್ಡಿ ಹಾಗೂ ಮೆಚ್ಯೂರಿಟಿ ಹಣ ಇವೆಲ್ಲವೂ ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿರುತ್ತವೆ. ಈ ಯೋಜನೆಯಲ್ಲಿ ಹೂಡಿಕೆದಾರರು ಬೇರೆ ಬೇರೆ ಕಾರಣಕ್ಕೆ ಕೆಲ ತಪ್ಪುಗಳನ್ನು ಮಾಡುವ ಸಾಧ್ಯತೆ ಇದೆ. ಈ ತಪ್ಪುಗಳ ವಿಚಾರದಲ್ಲಿ ಎಚ್ಚರ ವಹಿಸಬೇಕು.

1. ವಾರ್ಷಿಕ ಕನಿಷ್ಠ ₹500 ಹೂಡಿಕೆ ಮಾಡದಿರುವುದು

PPF ಖಾತೆ ಚಾಲ್ತಿಯಲ್ಲಿರಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ₹500 ಜಮಾ ಮಾಡುವುದು ಕಡ್ಡಾಯ. ಹಣಕಾಸು ವರ್ಷದಲ್ಲಿ ಈ ಕನಿಷ್ಠ ಮೊತ್ತವನ್ನು ಜಮಾ ಮಾಡದಿದ್ದರೆ ಖಾತೆಯು ಇನ್ಆಕ್ಟಿವ್ (Inactive/Lapsed) ಆಗುತ್ತದೆ. ಇದರಿಂದ ಹಣ ಹಿಂಪಡೆಯುವಿಕೆ ಅಥವಾ ಸಾಲ ಸೌಲಭ್ಯ ಸ್ಥಗಿತಗೊಳ್ಳುತ್ತದೆ.

ಪರಿಹಾರ: ಸಂಬಂಧಪಟ್ಟ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ, ಬಾಕಿ ಮೊತ್ತ ಹಾಗೂ ದಂಡದ ಶುಲ್ಕ ಪಾವತಿಸಿ ಖಾತೆಯನ್ನು ಮರುಸಕ್ರಿಯಗೊಳಿಸಬಹುದು.

ಇದನ್ನೂ ಓದಿ: ಇಪಿಎಫ್​ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು

2. ತಿಂಗಳ 5ನೇ ತಾರೀಖಿನ ನಂತರ ಹೂಡಿಕೆ ಮಾಡುವುದು

ಪಿಪಿಎಫ್​ನಲ್ಲಿ ವರ್ಷಕ್ಕೆ 1.5 ಲಕ್ಷ ರೂ ಹಣವನ್ನು ಒಮ್ಮೆಗೇ ಜಮೆ ಮಾಡಬಹುದು. ಅಥವಾ ಪ್ರತೀ ತಿಂಗಳು ಇಂತಿಷ್ಟು ಹಣವೆಂದು ಸೇರಿಸುತ್ತಾ ಹೋಗಬಹುದು. PPF ನಲ್ಲಿ ಬಡ್ಡಿಯನ್ನು ತಿಂಗಳ 5ನೇ ತಾರೀಖಿನಿಂದ ಕೊನೆಯ ದಿನದವರೆಗಿನ ಕನಿಷ್ಠ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ನೀವು ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಹಣ ಜಮಾ ಮಾಡಿದರೆ ಮಾತ್ರ ಅದೇ ತಿಂಗಳ ಬಡ್ಡಿ ಲೆಕ್ಕಾಚಾರಕ್ಕೆ ಸೇರ್ಪಡೆಯಾಗುತ್ತದೆ.

ಆಗಸ್ಟ್ 5ರ ನಂತರ ಜಮಾ ಮಾಡಿದರೆ, ಆ ಹಣಕ್ಕೆ ಆಗಸ್ಟ್ ತಿಂಗಳ ಬಡ್ಡಿ ಸಿಗುವುದಿಲ್ಲ; ಅದರ ಲೆಕ್ಕಾಚಾರ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುತ್ತದೆ. ಅಂದರೆ, ಒಂದು ತಿಂಗಳ ಬಡ್ಡಿ ಆದಾಯ ಕೈತಪ್ಪುತ್ತದೆ.

3. ವಾರ್ಷಿಕ ₹1.5 ಲಕ್ಷದ ಮಿತಿಗಿಂತ ಹೆಚ್ಚು ಜಮಾ ಮಾಡುವುದು

ಒಂದು ಹಣಕಾಸು ವರ್ಷದಲ್ಲಿ PPF ಗೆ ಗರಿಷ್ಠ ₹1.5 ಲಕ್ಷ ಹೂಡಿಕೆ ಮಾಡಲು ಮಾತ್ರ ಅವಕಾಶವಿದೆ. ₹1.5 ಲಕ್ಷಕ್ಕಿಂತ ಹೆಚ್ಚುವರಿಯಾಗಿ ಜಮಾ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ ಮತ್ತು Section 80C ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಸಿಗುವುದಿಲ್ಲ. ನಿಮ್ಮ ಸ್ವಂತ ಖಾತೆ ಮತ್ತು ನಿಮ್ಮ ಅಪ್ರಾಪ್ತ (ಮೈನರ್) ಮಕ್ಕಳ ಖಾತೆ ಎರಡನ್ನೂ ಸೇರಿಸಿ ಒಟ್ಟು ಮಿತಿ ₹1.5 ಲಕ್ಷ ಮಾತ್ರವಾಗಿರಬೇಕು.

4. ಒಂದಕ್ಕಿಂತ ಹೆಚ್ಚು ಸ್ವಂತ PPF ಖಾತೆಗಳನ್ನು ತೆರೆಯುವುದು

ಕೇಂದ್ರ ಹಣಕಾಸು ಸಚಿವಾಲಯದ ನಿಯಮಾವಳಿಗಳ ಪ್ರಕಾರ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಒಂದೇ ಒಂದು PPF ಖಾತೆಯನ್ನು ಮಾತ್ರ ಹೊಂದಿರಬಹುದು (ಜಂಟಿ/Joint Accounts ಗೆ ಅವಕಾಶವಿಲ್ಲ). ಬೇರೆ ಬೇರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿ PAN ಕಾರ್ಡ್ ಬಳಸಿ ಎರಡನೇ ಖಾತೆ ತೆರೆದರೆ, ಅದನ್ನು ಅಕ್ರಮ (Irregular) ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿ ಖಾತೆಗೆ ಯಾವುದೇ ಬಡ್ಡಿ ದೊರೆಯುವುದಿಲ್ಲ.

ಇದನ್ನೂ ಓದಿ: EPFO rules: 2-3 ವರ್ಷ ಕೆಲಸ ಇಲ್ಲದಿದ್ದಾಗ ಹಳೆಯ ಇಪಿಎಫ್ ಖಾತೆ ಏನಾಗುತ್ತದೆ?

5. ನಿಯಮಗಳು ತಿಳಿಯದೆ ಅವಧಿಗೂ ಮುನ್ನ ಖಾತೆ ಮುಚ್ಚುವುದು

PPF 15 ವರ್ಷಗಳ ಯೋಜನೆ. ಆದರೆ, ಖಾತೆ ತೆರೆದು 5 ಹಣಕಾಸು ವರ್ಷಗಳು ಪೂರ್ಣಗೊಂಡ ನಂತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವಧಿಗೆ ಮುನ್ನ ಖಾತೆ ಮುಚ್ಚಲು (Premature Closure) ಅವಕಾಶವಿದೆ.

ಖಾತೆದಾರರು/ಕುಟುಂಬಸ್ಥರ ಗಂಭೀರ ಕಾಯಿಲೆಯ ಚಿಕಿತ್ಸೆ, ಉನ್ನತ ಶಿಕ್ಷಣ, ಅಥವಾ ವಿದೇಶಿ ಪೌರತ್ವ ಪಡೆಯುವ ಸಂದರ್ಭದಲ್ಲಿ ಮಾತ್ರ ಪ್ರೀಮೆಚ್ಯೂರ್ ಆಗಿ ಪಿಪಿಎಫ್ ವಿತ್​ಡ್ರಾ ಮಾಡಬಹುದು.

ಅವಧಿಗೆ ಮುನ್ನ ಮುಚ್ಚಿದರೆ, ನೀವು ಇಲ್ಲಿಯವರೆಗೆ ಗಳಿಸಿದ ಬಡ್ಡಿ ದರದಲ್ಲಿ ಶೇ. 1 ರಷ್ಟು ಕಡಿತ (Penalty) ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us