
ನವದೆಹಲಿ, ನವೆಂಬರ್ 15: ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸುಲಭವಾಗಿ ಸ್ವೀಕರಿಸಲು ಅನುಕೂಲವಾಗುವಂತೆ ಎನ್‌ಪಿಸಿಐ (NPCI) ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದೆ. ಇದು ಯುಪಿಐ ವ್ಯಾಪಾರ ಸಕ್ಷಮ ಯೋಜನೆ. ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಮತ್ತು ಯುಪಿಐ ಸೌಂಡ್‌ಬಾಕ್ಸ್ ಅಲರ್ಟ್ ಸಿಸ್ಟಂ ಅನ್ನು ಹಾಕಿಸುವ ಬ್ಯಾಂಕುಗಳಿಗೆ ಪ್ರೋತ್ಸಾಹ ಧನ ಒದಗಿಸುವ ಯೋಜನೆ ಇದು.
ವಾರ್ಷಿಕ 40 ಲಕ್ಷ ರೂವರೆಗೆ ವಹಿವಾಟು ನಡೆಸುವ ವ್ಯಾಪಾರಿಗಳು ಈ ಯೋಜನೆಯಡಿ ಅರ್ಹರಾಗಿದ್ದು, ವಿಶೇಷವಾಗಿ ಟೈರ್-3 ರಿಂದ ಟೈರ್-6 ನಗರಗಳ ವ್ಯಾಪಾರಿಗಳಿಗೆ (ಪಿಎಂ ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಯಡಿ ಬರುವವರೂ ಸೇರಿದಂತೆ) ಇದು ಹೆಚ್ಚಿನ ನೆರವಾಗಲಿದೆ.
ಹೊಸ ವ್ಯಾಪಾರಿಗಳನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ತರುವ ಬ್ಯಾಂಕ್‌ಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಪ್ರತಿ ಹೊಸ ಭೌತಿಕ ಕ್ಯೂಆರ್ ಕೋಡ್ (QR code) ಅಳವಡಿಕೆಗೆ 300 ರೂ ಹಾಗೂ ಸೌಂಡ್‌ಬಾಕ್ಸ್ (Soundbox) ವಿತರಣೆಗೆ 750 ರೂವರೆಗೆ ಪ್ರೋತ್ಸಾಹಧನ ಸಿಗಲಿದೆ.
ಇದನ್ನೂ ಓದಿ: ಅಕ್ಟೋಬರ್ನಲ್ಲಿ ಭಾರತದ ಒಟ್ಟು ರಫ್ತು 90 ಬಿಲಿಯನ್ ಡಾಲರ್ಗೆ ಏರಿಕೆ; 20 ಬಿಲಿಯನ್ ಡಾಲರ್ಗೆ ತಗ್ಗಿದ ಟ್ರೇಡ್ ಡೆಫಿಸಿಟ್
ಯುಪಿಐ ಎಂಡಿಆರ್ ಶುಲ್ಕಗಳ ಮೂಲಕ ಪಡೆದ ಹಣದಲ್ಲಿ ಶೇ. 5ರಷ್ಟನ್ನು ಈ ಸ್ಕೀಮ್ಗೆ ಫಂಡಿಂಗ್ ಆಗಿ ನೀಡಲಾಗುತ್ತದೆ. ಈ ನಿಧಿಯನ್ನು ಮುಖ್ಯವಾಗಿ ಹೊಸ ವ್ಯಾಪಾರಿಗಳ ಸೇರ್ಪಡೆ, ಯುಪಿಐ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಬಳಸಲಾಗುತ್ತದೆ.
ಇಲ್ಲಿ ಬ್ಯಾಂಕುಗಳು ಹೊಸ ವ್ಯಾಪಾರಿಗಳನ್ನು ಗುರುತಿಸಿ ಅವರ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಕೊಟ್ಟು, ಸೌಂಡ್ ಬಾಕ್ಸ್ ಸ್ಥಾಪಿಸಬೇಕು. ಆ ವರ್ತಕ ಮೂರು ತಿಂಗಳಲ್ಲಿ ಎರಡು ತಿಂಗಳು 25 ಅರ್ಹ ವಹಿವಾಟು ಪೂರ್ಣಗೊಳಿಸಬೇಕು. ಆ ವಹಿವಾಟುಗಳ ಒಟ್ಟು ಮೌಲ್ಯ 5,000 ರೂ ಆಗಿರಬೇಕು. ಅಂದರೆ, ಒಂದು ತಿಂಗಳಲ್ಲಿ 25 ಟ್ರಾನ್ಸಾಕ್ಷನ್ಗಳು, ಹಾಗು ಒಟ್ಟಾರೆ ವಹಿವಾಟು ಮೌಲ್ಯ 5,000 ರೂ ಆಗಿರಬೇಕು. ಈ ರೀತಿ ಒಂದು ತ್ರೈಮಾಸಿಕ ಅವಧಿಯಲ್ಲಿ ಎರಡು ತಿಂಗಳಾದರೂ ಮಾಡಬೇಕು. ಹಾಗಿದ್ದಾಗ ಬ್ಯಾಂಕುಗಳಿಗೆ ಕ್ಯೂಆರ್ ಕೋಡ್ ಮತ್ತು ಸೌಂಡ್ ಬಾಕ್ಸ್ಗಳಿಗೆ ಇನ್ಸೆಂಟಿವ್ ದೊರಕುವುದು.
ಇನ್ಸೆಂಟಿವ್ಗಳನ್ನು ತ್ರೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ. ವ್ಯಾಪಾರಿಯ ಜಾಗ, ಯೂನಿಕ್ ಐಡೆಂಟಿಫಯರ್, ಅಳವಡಿತ ಸಾಧನಗಳ ವಿವರಗಳನ್ನು ಬ್ಯಾಂಕು ಸಲ್ಲಿಸಬೇಕು. ಕ್ಲೇಮ್ ಮಾಡಿ 30 ದಿನದೊಳಗೆ ಅದನ್ನು ಸೆಟಲ್ ಮಾಡಲಾಗುತ್ತದೆ.
ಇದನ್ನೂ ಓದಿ: ಆಗಸದಿಂದ ವೇಗವಾಗಿ ಬಂದ ಸ್ಟಾರ್ಶಿಪ್ ರಾಕೆಟ್ ಅನ್ನು ಹಿಡಿದು ಹೊಸ ಇತಿಹಾಸ ಸೃಷ್ಟಿಸಿದ ಸ್ಪೇಸ್ಎಕ್ಸ್
ಬ್ಯಾಂಕುಗಳಿಗೆ ಇನ್ಸೆಂಟಿವ್ ಎಷ್ಟು ಸಿಗುತ್ತದೆ ಎನ್ನುವುದಕ್ಕೆ ಒಂದು ನಿದರ್ಶನ ನೀಡುವುದಾದರೆ: ಒಂದು ಬ್ಯಾಂಕು 1,000 ವ್ಯಾಪಾರಿಗಳಿಗೆ 1,000 ಕ್ಯೂಆರ್ ಕೋಡ್ಗಳನ್ನು, ಮತ್ತು 200 ಸೌಂಡ್ ಬಾಕ್ಸ್ಗಳನ್ನು ಒದಗಿಸುತ್ತದೆ ಎಂದಿಟ್ಟುಕೊಳ್ಳೋಣ. ಆಗ ಆ ಎಲ್ಲಾ ವ್ಯಾಪಾರಿಗಳು ಅರ್ಹ ಟ್ರಾನ್ಸಾಕ್ಷನ್ ಮಟ್ಟ ಸಾಧಿಸುತ್ತಾರೆ ಎಂದಾದಲ್ಲಿ, ಬ್ಯಾಂಕಿಗೆ 4.5 ಲಕ್ಷ ರೂ ಪ್ರೋತ್ಸಾಹ ಧನ ಸಿಗುತ್ತದೆ.
ಪ್ರತಿವರ್ಷ ಸುಮಾರು 60 ಲಕ್ಷದಿಂದ 1 ಕೋಟಿ ಹೊಸ ಕ್ಯೂಆರ್ ಕೋಡ್‌ಗಳು ಹಾಗೂ 5 ರಿಂದ 10 ಲಕ್ಷ ಹೊಸ ಸೌಂಡ್‌ಬಾಕ್ಸ್‌ಗಳನ್ನು ತಳಮಟ್ಟದಲ್ಲಿ ತಲುಪಿಸುವ ಗುರಿಯನ್ನು ಎನ್‌ಪಿಸಿಐ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Sun, 15 November 26