ನವದೆಹಲಿ, ಅಕ್ಟೋಬರ್ 9: ಯುಪಿಐ ಬಳಕೆದಾರರಿಗೆ ಖುಷಿ ಸುದ್ದಿ. ಪಿನ್ ಕೋಡ್ ಇಲ್ಲದೇ ಹಣ ಪಾವತಿಸಬಲ್ಲಂತಹ ಯುಪಿಐ ಲೈಟ್ ವ್ಯಾಲಟ್ನ ಹಣದ ಮಿತಿಯನ್ನು ಎರಡು ಸಾವಿರ ರೂನಿಂದ ಐದು ಸಾವಿರ ರೂಗೆ ಹೆಚ್ಚಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಸಂಗತಿಯನ್ನು ಪ್ರಕಟಿಸಿದ್ದಾರೆ. ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೀಚರ್ ಫೋನ್ ಬಳಕೆದಾರರಿಗೂ ಖುಷಿ ಸುದ್ದಿ ಕೊಟ್ಟಿದ್ದಾರೆ. ಫೀಚರ್ ಫೋನ್ನಲ್ಲಿ ಬಳಸಲಾಗುವ ಯುಪಿಐ123ಪೇನಲ್ಲಿ ವಹಿವಾಟು ಮಿತಿಯನ್ನು ಐದು ಸಾವಿರ ರೂನಿಂದ ಹತ್ತು ಸಾವಿರ ರೂಗೆ ಹೆಚ್ಚಿಸಲಾಗಿರುವುದನ್ನು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.
ಯುಪಿಐ ಲೈಟ್ನ ವ್ಯಾಲಟ್ನಲ್ಲಿ ನೀವು ಗರಿಷ್ಠ 2,000 ರೂವರೆಗೆ ಹಣ ತುಂಬಿಸಬಹುದಿತ್ತು. ಇದನ್ನು 5,000 ರೂವರೆಗೂ ಹೆಚ್ಚಿಸಲಾಗಿದೆ. ಅಂದರೆ, ನಿಮ್ಮ ಯುಪಿಐ ಲೈಟ್ ವ್ಯಾಲಟ್ಗೆ ಗರಿಷ್ಠ 5,000 ರೂವರೆಗೂ ಹಣ ತುಂಬಿಸಬಹುದು. ಇನ್ನು, 500 ರೂ ಒಳಗಿನ ವಹಿವಾಟನ್ನು ಯುಪಿಐ ಲೈಟ್ ಬಳಸಿ ಮಾಡಬಹುದಿತ್ತು. ಈಗ ಈ ಮಿತಿಯನ್ನು 1,000 ರೂಗೆ ಹೆಚ್ಚಿಸಲಾಗಿದೆ. ಇದು ಸಾಕಷ್ಟು ಯುಪಿಐ ಬಳಕೆದಾರರಿಗೆ ಅನುಕೂಲವಾಗುತ್ತದೆ.
ಭಾರತದಲ್ಲಿ ಈಗಲೂ ಬಹಳ ಸಂಖ್ಯೆಯಲ್ಲಿ ಫೀಚರ್ ಫೋನ್ ಬಳಕೆದಾರರಿದ್ದಾರೆ. ಎನ್ಪಿಸಿಐ ಸಂಸ್ಥೆ ಈ ಫೀಚರ್ ಫೋನ್ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಯುಪಿಐ123ಪೆ ಸೌಲಭ್ಯವನ್ನು ರೂಪಿಸಿದೆ. ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಹಣದ ವಹಿವಾಟು ನಡೆಸಬಹುದು. ಈವರೆಗೂ ನೀವು ಈ ಫೀಚರ್ ಬಳಸಿ ಒಂದು ವಹಿವಾಟಿನಲ್ಲಿ 5,000 ರೂವರೆಗೆ ಹಣ ಕಳುಹಿಸಬಹುದಿತ್ತು. ಈಗ ಅದನ್ನು 10,000 ರೂಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಆರ್ಬಿಐ ಹಣಕಾಸು ನೀತಿ ನ್ಯೂಟ್ರಲ್ಗೆ ಬದಲಾವಣೆ; ಅಕಾಮೊಡೇಶನ್ ನೀತಿ ಹಿಂತೆಗೆದದ್ದು ಯಾಕೆ? ಡಿಸೆಂಬರ್ನಲ್ಲಿ ಬಡ್ಡಿ ಇಳಿಯುತ್ತಾ?
ಯುಪಿಐ123ಪೇ ಫೀಚರ್ನಲ್ಲಿ ಡುಯಲ್ ಟೋನ್ ಮಲ್ಟಿ ಫ್ರೀಕ್ವೆನ್ಸಿ (ಡಿಟಿಎಂಎಫ್) ತಂತ್ರಜ್ಞಾನ ಅಳವಡಿಸಲಾಗಿದೆ. ಹಣದ ವಹಿವಾಟಿಗೆ ಇದು ಅಕೌಂಟ್ ನಂಬರ್ ಮತ್ತು ಫೋನ್ ನಂಬರ್ ಅನ್ನು ಬಳಸುತ್ತದೆ. ಐವಿಆರ್ ನಂಬರ್ ಕರೆ ಮಾಡುವುದು, ಮಿಸ್ಡ್ ಕಾಲ್ ಕೊಡುವುದು ಇತ್ಯಾದಿ ಮೂಲಕ ಹಣದ ಪಾವತಿ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ