ಗಾಂಧಿನಗರದ ಬಳಿಕ ದೇವನಹಳ್ಳಿಯಲ್ಲೂ ಅಕ್ಕ ಕೆಫೆ; ಇಡೀ ದೇಶಕ್ಕೆ ಮಾದರಿಯಾಗುತ್ತಾ ಕರ್ನಾಟಕದ ಮಹಿಳೆಯರ ಈ ಸಾಹಸ?
Akka Cafe at Devanahalli: ಮಾರ್ಚ್ 8ರಂದು ಗಾಂಧಿನಗರದಲ್ಲಿ ಪದಾರ್ಪಣೆಗೊಂಡಿದ್ದ ಅಕ್ಕ ಕೆಫೆ ಈಗ ದೇವನಹಳ್ಳಿಯಲ್ಲೂ ಶುರುವಾಗಿದೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ ರಾಜ್ಯಾದ್ಯಂತ 250 ಅಕ್ಕ ಕೆಫೆಗಳನ್ನು ಶುರು ಮಾಡುವ ಗುರಿ ಇದೆ. ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶ.
ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಿನ ಗಾಂಧಿನಗರದಲ್ಲಿ ಕೆಲ ತಿಂಗಳ ಹಿಂದೆ ಆರಂಭವಾಗಿದ್ದ ಅಕ್ಕ ಕೆಫೆ ಈಗ ದೇವನಹಳ್ಳಿಯಲ್ಲೂ ಆರಂಭವಾಗಿದೆ. ನಿನ್ನೆ ಮಂಗಳವಾರ ದೇವನಹಳ್ಳಿ ತಾಲೂಕು ಪಂಚಾಯತ್ ಎದುರು ಅಕ್ಕ ಕೆಫೆ ಮತ್ತು ಅಕ್ಕ ಬೇಕರಿಯ ಉದ್ಘಾಟನೆ ನಡೆಯಿತು. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದ ಅಡಿಯಲ್ಲಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಈ ಕೆಫೆ ತೆರೆಯಲಾಗಿದೆ. ದೇವನಹಳ್ಳಿಯಲ್ಲಿರುವ ಈ ಕೆಫೆಯಲ್ಲಿ ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡ ನಿರ್ವಹಣೆ ಮಾಡುತ್ತಿದೆ. ವಾರದಲ್ಲಿ ಏಳೂ ದಿನವೂ ಇದು ತೆರೆಯಲಿದ್ದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೂ ಸೇವೆ ಒದಗಿಸಲಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ ಪಾಟೀಲ್, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಕೌಶಲ್ಯಾಭಿವೃದ್ಧಿ ಇಲಾಖೆ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಪಿ. ಶ್ರೀವಿದ್ಯಾ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಲೋನ್ ಪ್ರೀಪೇಮೆಂಟ್, ಎನ್ಇಎಫ್ಟಿ ಪಾವತಿ ಮಾರ್ಗಸೂಚಿಯಲ್ಲಿ ಬದಲಾವಣೆ, ಗಮನಿಸಿ
ಕೌಶಲ್ಯಾಭಿವೃದ್ಧಿ ಇಲಾಖೆ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಈ ಕೆಫೆ ಉದ್ಘಾಟನೆಯಾಗಿರುವ ವಿಚಾರವನ್ನು ತಮ್ಮ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಂದಲೇ ನಿರ್ವಹಿಸಲಾಗುತ್ತಿರುವ ಅಕ್ಕ ಕೆಫೆಯನ್ನು ರಾಜ್ಯಾದ್ಯಂತ ತೆರೆಯುವ ಗುರಿ ಇದೆ. ಇನ್ನೂ 48 ಅಕ್ಕ ಕೆಫೆಗಳು ಮತ್ತು 2,500 ಅಕ್ಕ ಕಾಫಿ ಕಿಯೋಸ್ಕ್ಗಳನ್ನು ಶೀಘ್ರದಲ್ಲಿ ರಾಜ್ಯಾದ್ಯಂತ ತೆರೆಯಲಾಗುತ್ತದೆ ಎಂದು ಉಮಾ ಮಹದೇವನ್ ತಿಳಿಸಿದ್ದಾರೆ.
Delighted to be present at the launch of Akka Cafe & Akka Bakery in Devanahalli today. Run entirely by self-help group women. Do visit! Shortly, 48 more such Akka Cafes & 2500 Akka Coffee Kiosks will be started across Karnataka. #womenslivelihoods #womensempowerment pic.twitter.com/0RxEf2FBrK
— Uma Mahadevan Dasgupta (@readingkafka) October 8, 2024
ರಾಜ್ಯದಲ್ಲಿ ಇದು ಎರಡನೇ ಅಕ್ಕ ಕೆಫೆಯಾಗಿದೆ. ಮಾರ್ಚ್ ತಿಂಗಳಲ್ಲಿ ಮಹಿಳಾ ದಿನದ ಅಂಗವಾಗಿ 8ನೇ ತಾರೀಖೀನಂದು ಬೆಂಗಳೂರಿನ ಗಾಂಧಿನಗರದಲ್ಲಿ ಮೊದಲ ಅಕ್ಕ ಕೆಫೆ ತೆರೆಯಲಾಗಿತ್ತು. ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರ ತೆಗೆದುಕೊಂಡಿರುವ ವಿವಿಧ ಕ್ರಮಗಳಲ್ಲಿ ಅಕ್ಕ ಕೆಫೆಯೂ ಒಂದು. ಸದ್ಯ 2,500 ಕಾಫಿ ಕಿಯೋಸ್ಕ್ ಹಾಗೂ 50 ಅಕ್ಕ ಕೆಫೆಯನ್ನು ತೆರೆಯುವ ಗುರಿ ಇದೆ. ಇದರಲ್ಲಿ ಎರಡು ಕೆಫೆ ತೆರೆಯಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಇಂಥ ಕೆಫೆ ತೆರೆಯುವ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಕ್ಕ ಕೆಫೆಗಳ ಸಂಖ್ಯೆಯನ್ನು 250 ದಾಟಿಸುವ ದೊಡ್ಡ ಗುರಿ ಇಡಲಾಗಿದೆ.
ಇದನ್ನೂ ಓದಿ: Akka cafe Bengaluru: ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ʼಅಕ್ಕ ಕೆಫೆʼ, ಈ ಐಡಿಯಾ ಸರ್ಕಾರಕ್ಕೆ ಹೇಗೆ ಬಂತು?
ನೆರೆಯ ಕೇರಳ ರಾಜ್ಯದಲ್ಲೂ ಇದೇ ರೀತಿಯ ಮಹಿಳಾ ಉದ್ದಿಮೆದಾರಿಕೆಯನ್ನು ಪ್ರೋತ್ಸಾಹಿಸುವ ಯೋಜನೆ ಇದೆ. ಬಹಳ ವರ್ಷಗಳಿಂದ ಕೇರಳದ ವಿವಿಧೆಡೆ ಕೆಫೆ ಕುಡುಂಬಶ್ರೀ ಹೋಟೆಲ್ಗಳು ಚಾಲನೆಯಲ್ಲಿವೆ. ಕುಟುಂಬಶ್ರೀ ಮಿಷನ್ ಅಡಿಯಲ್ಲಿ ಅಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ