ಡಿಸೆಂಬರ್ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್ಡಿ ಇಡಲು ತ್ವರೆ ಮಾಡಿ
Investment in Fixed deposits: ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ನಲ್ಲಿ ಬಡ್ಡಿದರಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ. ಶೇ. 6.5 ಇರುವ ರಿಪೋ ದರ ಮುಂಬರುವ ದಿನಗಳಲ್ಲಿ ಕ್ರಮೇಣವಾಗಿ ಇಳಿಕೆಯಾಗಬಹುದು. ಸದ್ಯ ಅಧಿಕ ಮಟ್ಟದಲ್ಲಿರುವ ಎಫ್ಡಿ ದರಗಳು ಕಡಿಮೆಗೊಳ್ಳಬಹುದು. ಡಿಸೆಂಬರ್ನೊಳಗಾಗಿ ನಿಮ್ಮ ಹಣವನ್ನು ಫಿಕ್ಸೆಡ್ ಇಡುವುದು ಸಮಯೋಚಿತ ಕ್ರಮ ಆಗಬಹುದು.
ನವದೆಹಲಿ, ಅಕ್ಟೋಬರ್ 9: ಆರ್ಬಿಐನ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಲಾಗಿರುವುದು ಬಡ್ಡಿದರ ಇಳಿಕೆಯ ಸುಳಿವು ನೀಡುತ್ತಿದೆ. ಡಿಸೆಂಬರ್ನಲ್ಲಿ ಆರ್ಬಿಐ ಬಡ್ಡಿದರಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಫಿಕ್ಸೆಡ್ ಡೆಪಾಸಿಟ್ ದರ ಅಧಿಕ ಮಟ್ಟದಲ್ಲಿದೆ. ಈ ಎರಡು ತಿಂಗಳ ಒಳಗೆ ಫಿಕ್ಸೆಡ್ ಇಡುವುದು ಜಾಣತನ ಎನ್ನುತ್ತಾರೆ ತಜ್ಞರು.
ಹೆಚ್ಚೂಕಡಿಮೆ ಎರಡು ವರ್ಷದಿಂದ ಆರ್ಬಿಐ ಬಡ್ಡಿದರ ಪರಿಷ್ಕರಣೆ ಮಾಡಿಲ್ಲ. ಶೇ. 6.5ರಷ್ಟು ರಿಪೋ ದರ ಇದೆ. ಹಣದುಬ್ಬರ ನಿಯಂತ್ರಣಕ್ಕೆ ತರಲು ಆರ್ಬಿಐ ಶೇ. 4ರಷ್ಟಿದ್ದ ಬಡ್ಡಿದರವನ್ನು ಕ್ರಮೇಣವಾಗಿ ಹೆಚ್ಚಿಸುತ್ತಾ ಹೋಗಿ ಶೇ. 6.5ಕ್ಕೆ ತಂದಿದೆ. ಭಾರತದಲ್ಲಿ ಮಾತ್ರವಲ್ಲ ಜಾಗತಿಕವಾಗಿಯೂ ಹಣದುಬ್ಬರದ ಕಾರಣಕ್ಕೆ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಿದ್ದವು. ಈಗ ಪ್ರಮುಖ ದೇಶಗಳಲ್ಲಿ ಬಡ್ಡಿಕಡಿತದ ಟ್ರೆಂಡ್ ಶುರುವಾಗಿದೆ.
ಇದನ್ನೂ ಓದಿ: ಆದಾಯ ತೆರಿಗೆ ಕಾಯ್ದೆಯಲ್ಲಿ ಅಮೂಲಾಗ್ರ ಪರಿಷ್ಕರಣೆಗೆ ಸರ್ಕಾರ ನಿರ್ಧಾರ; ಪೋರ್ಟಲ್ನಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೂ ಅವಕಾಶ
ಅಮೆರಿಕದ ಫೆಡರಲ್ ರಿಸರ್ವ್ ಸೆಪ್ಟೆಂಬರ್ನಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಕಡಿತಗೊಳಿಸುವುದಾಗಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಸುಳಿವು ನೀಡಿದೆ. ಭಾರತದ ಮೇಲೆ ದಟ್ಟವಾಗಿ ಪ್ರಭಾವ ಬೀರಬಲ್ಲ ಅಮೆರಿಕದಲ್ಲಿ ಬಡ್ಡಿದರ ವ್ಯತ್ಯಯವಾದರೆ ಭಾರತವೂ ಸ್ಪಂದಿಸುವುದು ಅನಿವಾರ್ಯ. ಈ ಕಾರಣಕ್ಕೆ ಆರ್ಬಿಐ ರಿಪೋ ದರ ಇಳಿಕೆಯನ್ನು ತಡೆದಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಡಿಸೆಂಬರ್ನಲ್ಲಿ ದರ ಕಡಿತ ಅನಿವಾರ್ಯವಾಗಬಹುದು. ಹೀಗಾಗಿ, ಅಕ್ಟೋಬರ್ ತಿಂಗಳ ಎಂಪಿಸಿ ಸಭೆಯಲ್ಲಿ ಆರ್ಬಿಐನ ಹಣಕಾಸು ನೀತಿಯನ್ನು ನ್ಯೂಟ್ರಲ್ಗೆ ಬದಲಾಯಿಸಲಾಗಿದೆ.
ಅಧಿಕ ಮಟ್ಟದಲ್ಲಿದೆ ಎಫ್ಡಿ ದರಗಳು…
ಸದ್ಯ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಠೇವಣಿ ದರಗಳು ಶೇ. 8ರವರೆಗೂ ಇದೆ. ಸಹಕಾರಿ ಬ್ಯಾಂಕುಗಳಲ್ಲಿ ಇದು ಶೇ. 9.5ರವರೆಗೂ ಇದೆ. ಎಸ್ಬಿಐ, ಎಚ್ಡಿಎಫ್ಸಿ, ಎಕ್ಸಿಸ್ ಇತ್ಯಾದಿ ಬ್ಯಾಂಕುಗಳು ಶೇ. 7.5ರ ಆಸುಪಾಸಿನ ದರದಲ್ಲಿ ಬಡ್ಡಿಯನ್ನು ನೀಡುತ್ತವೆ.
ಇದನ್ನೂ ಓದಿ: ಬಳಕೆಯಲ್ಲಿ ಇಲ್ಲದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ
ಡಿಸೆಂಬರ್ನಲ್ಲಿ ಒಮ್ಮೆ ಮಾತ್ರವೇ ದರ ಕಡಿತ ಆಗಬಹುದು ಎಂದಿಲ್ಲ. ಅಲ್ಲಿಂದ ಬಡ್ಡಿ ಇಳಿಕೆಯ ಪರ್ವ ಶುರುವಾಗಬಹುದು. ಹೀಗಾಗಿ, ಸದ್ಯ ಅಧಿಕ ಬಡ್ಡಿ ನೀಡುತ್ತಿರುವ ಫಿಕ್ಸೆಡ್ ಡೆಪಾಸಿಟ್ಗೆ ನಿಮ್ಮ ಹಣ ಲಾಕ್ ಮಾಡುವುದು ಉತ್ತಮ ಕ್ರಮ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ