
ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ ಎನ್ನುವುದು. ಆದರೆ, ತೆರೆಯ ಮರೆಯಲ್ಲಿ ಇರಾನ್ ಮೇಲೆ ಅಮೆರಿಕ ಎರಗಿ ಹೋಗಲು ಬೇರೊಂದು ಕಾರಣ ಇದೆ.
ಅಮೆರಿಕದ ಸೇನೆ ಇತ್ತೀಚೆಗಷ್ಟೇ ವೆನಿಜುವೆಲಾದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷರನ್ನೇ ಬದಲಾಯಿಸಿಬಿಟ್ಟಿತು. ಜನಸಾಮಾನ್ಯರಿಗೆ ಹಾನಿಯಾಗದೆಯೇ ನಡೆದ ಆಪರೇಷನ್ ಅದು. ಅದೇ ಮಾದರಿಯಲ್ಲಿ ಕ್ಯೂಬಾ ಮತ್ತು ಇರಾನ್ನಲ್ಲೂ ಅಮೆರಿಕ ಮಾಡಹೊರಟಿದೆ. ಇರಾನ್ ಅಧ್ಯಕ್ಷ ಆಯತೊಲ್ಲ ಖಮೇನಿ ಅವರನ್ನು ಆರಂಭದಲ್ಲೇ ಕೊಂದು ಹಾಕಿತು. ಸರ್ವೋಚ್ಚ ನಾಯಕ ಸಾವನ್ನಪ್ಪಿದರೆ ಇರಾನ್ ಶರಣಾಗಬಹುದು ಎನ್ನುವ ಅಮೆರಿಕದ ಎಣಿಕೆ ತಪ್ಪಾಗಿದ್ದು ಹೌದು. ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದ ಮಾಜಿ ನಿರ್ದೇಶಕಿಯಾದ ತಾರಾ ಕರ್ತಾ ಅವರ ಪ್ರಕಾರ ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್ನಲ್ಲಿ ಒಂದು ಕಾಮನ್ ಫ್ಯಾಕ್ಟರ್ ಇದೆ. ಅದು ಚೀನಾದ ಲಿಂಕ್.
ಇದನ್ನೂ ಓದಿ: ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?
ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್ ದೇಶಗಳು ತಮ್ಮ ತೈಲ ಮತ್ತು ಸರಕುಗಳ ರಫ್ತನ್ನು ಅಮೆರಿಕದ ಡಾಲರ್ ಕರೆನ್ಸಿ ಬದಲು ಚೀನಾದ ಯುಆನ್ ಕರೆನ್ಸಿಯಲ್ಲಿ ಮಾಡುತ್ತಿದ್ದವು ಎಂದು ತಾರಾ ಕರ್ತಾ ಅವರು ಎನ್ಡಿಟಿವಿಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ವೆನಿಜುವೆಲಾ ಮತ್ತು ಇರಾನ್ ದೇಶಗಳು ಚೀನಾಗೆ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡುತ್ತಿದ್ದವು. ವೆನಿಜುವೆಲಾ ಅಧ್ಯಕ್ಷ ಮಡುರೊ ಅವರಂತೂ ಡಾಲರ್ ಕರೆನ್ಸಿ ವಹಿವಾಟು ತ್ಯಜಿಸಿ ತಮ್ಮ ದೇಶವನ್ನು ಅಮೆರಿಕದಿಂದ ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಹೇಳುತ್ತಿದ್ದರು. ಅಮೆರಿಕವು ನಿಷೇಧ ಹಾಕಿದಾಗ ಚೀನಾಗೆ ತೈಲವನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರುತ್ತಿತ್ತು ವೆನಿಜುವೆಲಾ.
ಇರಾನ್ ದೇಶ ಕೂಡ ಚೀನಾದೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಯುಆನ್ ಕರೆನ್ಸಿಯಲ್ಲೇ ವಹಿವಾಟು ನಡೆಸುತ್ತದೆ. ಅಮೆರಿಕದ ನಿಷೇಧ ಕ್ರಮವನ್ನು ಬೈಪಾಸ್ ಮಾಡಲು ಇರಾನ್ ದೇಶವು ಮಲೇಷ್ಯಾ ಮೂಲಕ ಚೀನಾಗೆ ತೈಲ ಸಾಗಿಸುತ್ತದೆ. ಅಲ್ಲಿ ಯುಆನ್ ಕರೆನ್ಸಿ ಬಳಕೆ ಆಗುತ್ತದೆ. ಅಮೆರಿಕ ಕಣ್ಣಿಟ್ಟಿರುವ ಕ್ಯೂಬಾ ದೇಶ ಕೂಡ ಚೀನೀ ಕರೆನ್ಸಿಯಲ್ಲಿ ವ್ಯವಹರಿಸುತ್ತದೆ.
ತಾರಾ ಕರ್ತಾ ಪ್ರಕಾರ ಅಮೆರಿಕವು ತೈಲ ಸಂಪನ್ಮೂಲದ ಲಭ್ಯತೆ ಖಾತ್ರಿಪಡಿಸಿಕೊಳ್ಳುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಚೀನಾಗೆ ತೈಲ ದಕ್ಕಬಾರದು ಎನ್ನುವ ಉದ್ದೇಶ ಇರಬಹುದು. ಇದರ ಜೊತೆಗೆ ಪ್ರಬಲ ಕಾರಣ ಯುಆನ್ ಕರೆನ್ಸಿ ಬಲಗೊಳ್ಳುತ್ತಿರುವುದು.
ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್ ಮಹತ್ವದ ಎಚ್ಚರಿಕೆ
ವಿಶ್ವದಲ್ಲಿ ಸದ್ಯ ಅಮೆರಿಕದ ಡಾಲರ್ ಕರೆನ್ಸಿ ಅತಿ ಪ್ರಬಲವಾದುದು. ಡೀಫಾಲ್ಟ್ ಅಂತಾರಾಷ್ಟ್ರೀಯ ಕರೆನ್ಸಿಯಾಗಿದೆ. ಎಲ್ಲಾ ದೇಶಗಳು ಡಾಲರ್ ಖರೀದಿ ಮಾಡುವುದು ಅನಿವಾರ್ಯವಾಗಿದ್ದು, ಅದನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೂ ಅನಿವಾರ್ಯವಾಗಿದೆ. ಹೀಗಾಗಿ, ಅಮೆರಿಕ ಜಗತ್ತಿನ ದೊಡ್ಡಣ್ಣನಾಗಲು ಡಾಲರ್ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಈಗ ಡಾಲರ್ಗೆ ಸೆಡ್ಡು ಹೊಡೆಯುವಂತೆ ಚೀನಾದ ಯುಆನ್ ಕರೆನ್ಸಿ ಬೆಳೆಯುತ್ತಿರುವುದು ಅಮೆರಿಕವನ್ನು ತಲ್ಲಣಗೊಳಿಸುತ್ತಿರಬಹುದು. ತಾರಾ ಅವರು ಶಂಕಿಸಿರುವುದು ಇದನ್ನೇ.
ಯುಆರ್ ಕರೆನ್ಸಿಯಲ್ಲಿ ವಹಿವಾಟು ನಡೆಸುತ್ತಿರುವ ದೇಶಗಳು ಅಮೆರಿಕದ ಹಿಟ್ಲಿಸ್ಟ್ನಲ್ಲಿ ಇರಬಹುದಾ? ಬ್ರೆಜಿಲ್, ಅರ್ಜೆಂಟೀನಾ ಇಂಡೋನೇಷ್ಯಾ, ಮಯನ್ಮಾರ್, ಪಾಕಿಸ್ತಾನ ಮೊದಲಾದ ಕೆಲ ದೇಶಗಳು ಚೀನಾದೊಂದಿಗಿನ ವ್ಯವಹಾರವನ್ನು ಯುಆನ್ನಲ್ಲಿ ಡೀಲ್ ಮಾಡುತ್ತವೆ. ಇವುಗಳಲ್ಲೊಂದು ದೇಶವು ಅಮೆರಿಕದ ಮುಂದಿನ ಟಾರ್ಗೆಟ್ ಆಗಬಹುದಾ?
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ