ನವದೆಹಲಿ, ಸೆಪ್ಟೆಂಬರ್ 21: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ (Federal Reserve) ನಿರೀಕ್ಷಿಸಿದಂತೆ ಈ ಬಾರಿ ಬಡ್ಡಿದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಶೇ. 5.25ರಿಂದ ಶೇ. 5.50ರ ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸಲು ಅದು ನಿರ್ಧರಿಸಿದೆ. ಆದರೆ, ಹಣದುಬ್ಬರ (Inflation) ತಗ್ಗಿಸಲು ಈ ವರ್ಷದಲ್ಲಿ ಒಮ್ಮೆಯಾದರೂ ಬಡ್ಡಿದರ ಹೆಚ್ಚಿಸುವ ಸುಳಿವನ್ನು ಫೆಡರಲ್ ರಿಸರ್ವ್ ನೀಡಿದೆ. ಈಗಿರುವ ಬಡ್ಡಿದರ ಕಳೆದ 2 ದಶಕದಲ್ಲೇ ಗರಿಷ್ಠ ಮಟ್ಟದ್ದಾಗಿದೆ. 2001ರಲ್ಲಿ ಈ ಮಟ್ಟದ ಬಡ್ಡಿದರ ಇತ್ತು.
ಜುಲೈನಲ್ಲಿ ಫೆಡರಲ್ ರಿಸರ್ವ್ 25 ಬೇಸಿಸ್ ಅಂಕಗಳಷ್ಟು ಬಡ್ಡಿದರ ಹೆಚ್ಚಿಸಿತ್ತು. ಸತತ 11ನೇ ಬಾರಿ ಬಡ್ಡಿದರ ಏರಿಕೆಯಾಗಿ ಈಗಿರುವ 5.25ರಿಂದ 5.50 ಪ್ರತಿಶತ ತಲುಪಿತ್ತು. ಅಮೆರಿಕ್ಕೆ ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಜುಲೈನಲ್ಲಿ ಶೇ. 3.2ರಷ್ಟಿದ್ದು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 3.7 ತಲುಪಿದೆ. ಈ ವರ್ಷದೊಳಗೆ ಇನ್ನೊಮ್ಮೆ ಬಡ್ಡಿದರ ಹೆಚ್ಚಿಸುವುದು ಸೆಂಟ್ರಲ್ ಬ್ಯಾಂಕ್ಗೆ ಅನಿವಾರ್ಯವಾಗಬಹುದು.
ಇದನ್ನೂ ಓದಿ: 2023 ಜುಲೈಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ; ಇಪಿಎಫ್ಒಗೆ ಸೇರ್ಪಡೆಯಾದ 18.75 ಲಕ್ಷ ವೇತನದಾರರು
ಆದರೆ, ಅಮೆರಿಕದ ಆರ್ಥಿಕತೆ ಗರಿಗೆದರಿದೆ. ಉದ್ಯೋಗಸೃಷ್ಟಿ ಮಂದಗೊಂಡಿದೆಯಾದರೂ ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಈ ಸಂದರ್ಭದಲ್ಲಿ ಬ್ಯಾಂಕ್ ಬಡ್ಡಿದರ ಹೆಚ್ಚಳವಾದರೆ ಆರ್ಥಿಕತೆ ಚಟುವಟಿಕೆ ಮಂದಗೊಳ್ಳುವ ಭಯ ಇದೆ. ಹೀಗಾಗಿ, ಬಡ್ಡಿದರ ಹೆಚ್ಚಿಸದೇ ಇರಬಹುದು.
ಅಮೆರಿಕದ ಬಡ್ಡಿದರ ಯಥಾಸ್ಥಿತಿ ನಿರ್ಧಾರ ನಿರೀಕ್ಷಿತವೇ ಆಗಿದೆ. ಮುಂದಿನ ಒಂದು ವರ್ಷದವರೆಗೂ ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿನ ಮಟ್ಟದಲ್ಲೇ ಇರುತ್ತದೆ ಎಂಬುದು ಬಹಿರಂಗವಾಗಿ ಗೊತ್ತಿರುವ ರಹಸ್ಯ. ಆದರೆ, ಅಮೆರಿಕದ ಆರ್ಥಿಕ ಬೆಳವಣಿಗೆ ಎತ್ತ ಸಾಗುತ್ತದೆ ಎಂಬುದು ಜಾಗತಿಕ ಮಾರುಕಟ್ಟೆಗಳಿಗೆ ಇದ್ದ ಕುತೂಹಲ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ವರ್ಷದ ಆರ್ಥಿಕತೆ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇದು ಭಾರತದ ಷೇರುಮಾರುಕಟ್ಟೆ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಹೊಸ ವಾಟ್ಸಾಪ್ ಚಾನಲ್; ಒಂದೇ ದಿನದಲ್ಲಿ 10 ಲಕ್ಷ ಫಾಲೋಯರ್ಸ್
ಚಿನ್ನದ ಮೇಲಿನ ಬೇಡಿಕೆ ಮೊದಲಿನ ರೀತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಇರುವುದಿಲ್ಲ. ಚಿನ್ನದ ಬೆಲೆ ಏರಿಕೆಯಾದರೂ ತೀರಾ ಎತ್ತರಕ್ಕೆ ಹೋಗುವುದು ಅನುಮಾನ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ