
ವಾಷಿಂಗ್ಟನ್, ಜನವರಿ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತದ ಮೇಲೆ ಬೆದರಿಕೆ ಹಾಕುವುದನ್ನು ಇನ್ನೂ ನಿಲ್ಲಿಸಿಲ್ಲ. ರಷ್ಯನ್ ತೈಲ ಆಮದನ್ನು ಭಾರತ ಮುಂದುವರಿಸುತ್ತಿರುವುದು ಅಮೆರಿಕ ಅಧ್ಯಕ್ಷರಿಗೆ ಕಿರಿಕಿರಿ ತಂದಂತಿದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಬೈಟ್ನಲ್ಲಿ ಅವರು ರಷ್ಯನ್ ತೈಲ ಖರೀದಿ ಸಂಬಂಧ ಭಾರತದ ಮೇಲೆ ಟ್ಯಾರಿಫ್ (US Tariffs) ಅನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.
ಭಾರತದ ಮೇಲೆ ಅಮೆರಿಕ ಈಗಾಗಲೇ ಶೇ. 50ರಷ್ಟು ಆಮದು ಸುಂಕ ಹಾಕುತ್ತಿದೆ. ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ. ತನ್ನನ್ನು ಖುಷಿ ಪಡಿಸದಿದ್ದರೆ ಟ್ಯಾರಿಫ್ ಬರೆ ಹಾಕಬೇಕಾದೀತು ಎಂದು ಎಚ್ಚರಿಕೆ ಕೊಡುತ್ತಿದ್ದಾರೆ.
ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?
‘ಅವರು ನನ್ನನ್ನು ಖುಷಿಪಡಿಸಲು ಬಯಸುತ್ತಾರೆ. ಪಿಎಂ ಮೋದಿ ಬಹಳ ಒಳ್ಳೆಯ ಮನುಷ್ಯ, ಒಳ್ಳೆಯ ವ್ಯಕ್ತಿ. ನಾನು ಖುಷಿಯಾಗಿಲ್ಲ ಅಂತ ಅವರಿಗೆ ಗೊತ್ತು. ನನ್ನನ್ನು ಸಂತೋಷವಾಗಿ ಇಡುವುದು ಮುಖ್ಯ. ಅವರು ವ್ಯಾಪಾರ ಮಾಡುತ್ತಾರೆ. ನಾವು ಅವರ ಮೇಲೆ ಬಹಳ ಬೇಗ ಟ್ಯಾರಿಫ ಹೆಚ್ಚಿಸಬಲ್ಲೆವು..’ ಎಂದು ಟ್ರಂಪ್ ಹೇಳಿರುವ ಆಡಿಯೋ ತುಣಕನ್ನು ಎಎನ್ಐ ಸುದ್ದಿ ಸಂಸ್ಥೆ ತನ್ನ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಟ್ರಂಪ್ ಮಾತನಾಡಿರುವ ಆಡಿಯೋ
#WATCH | On India’s Russian oil imports, US President Donald J Trump says, “… They wanted to make me happy, basically… PM Modi’s a very good man. He’s a good guy. He knew I was not happy. It was important to make me happy. They do trade, and we can raise tariffs on them very… pic.twitter.com/ANNdO36CZI
— ANI (@ANI) January 5, 2026
ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕೆ ಅಮೆರಿಕವು ರಷ್ಯಾ ಮೇಲೆ ನಿಷೇಧ ಕ್ರಮ ತೆಗೆದುಕೊಂಡಿದೆ. ರಷ್ಯದ ಆರ್ಥಿಕತೆ ಉಳಿಯಲು ಅದರ ತೈಲವೂ ಪ್ರಮುಖ ಆಧಾರವಾಗಿದೆ. ರಷ್ಯನ್ ತೈಲವನ್ನು ಯಾರೂ ಖರೀದಿ ಮಾಡಬಾರದೆಂದು ಅಂತಾರಾಷ್ಟ್ರೀಯ ಸಮುದಾಯವನ್ನು ಅಮೆರಿಕ ಒತ್ತಾಯಿಸುತ್ತಾ ಬಂದಿದೆ. ಆದರೆ, ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಸಿಗುವುದರಿಂದ ಭಾರತ ಆ ಅವಕಾಶ ಬಳಸಿಕೊಳ್ಳುತ್ತಿದೆ. ಚೀನಾ ಮತ್ತು ಭಾರತವು ರಷ್ಯಾದಿಂದ ಅತಿಹೆಚ್ಚು ತೈಲ ಖರೀದಿಸುತ್ತಿರುವ ಎರಡು ರಾಷ್ಟ್ರಗಳು.
ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ
ಕಳೆದ ವರ್ಷ ಟ್ರಂಪ್ ಅಧಿಕಾರಕ್ಕೆ ಬಂದಾಗ ಎಲ್ಲಾ ದೇಶಗಳ ಮೇಲೂ ಪ್ರತಿಸುಂಕ ಹಾಕಿದರು. ಭಾರತದ ಮೇಲೆ ಶೇ. 25ರಷ್ಟು ಪ್ರತಿಸುಂಕ ಹಾಕಿದರು. ನಂತರ, ರಷ್ಯನ್ ತೈಲ ಖರೀದಿಸುತ್ತಿರುವ ಕಾರಣವೊಡ್ಡಿ ಹೆಚ್ಚುವರಿ ಶೇ. 25ರಷ್ಟು ಟ್ಯಾರಿಫ್ ಹಾಕಿದ್ದಾರೆ. ಅಲ್ಲಿಗೆ ಭಾರತದ ಸರುಕುಗಳ ಮೇಲೆ ಅಮೆರಿಕ ಹಾಕುತ್ತಿರುವ ಟ್ಯಾರಿಫ್ ಶೇ. 50ರಷ್ಟಾಗಿದೆ. ಇದನ್ನೂ ಮೀರಿಸಿ ಇನ್ನೂ ಹೆಚ್ಚಿನ ಟ್ಯಾರಿಫ್ ಹಾಕುವುದಾಗಿ ಟ್ರಂಪ್ ಈಗ ಬೆದರಿಕೆ ಹಾಕುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Mon, 5 January 26