AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

Impact of Venezuela crisis on India: ವಿಶ್ವದ ಶೇ. 18ರಷ್ಟು ತೈಲ ಸಂಗ್ರಹ ಹೊಂದಿರುವ ವೆನಿಜುವೆಲಾ ಈಗ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ವೆನಿಜುವೆಲಾ ಮೇಲೆ ಅಮೆರಿಕ ಆಕ್ರಮಣ ಮಾಡಿದೆ. ವೆನಿಜುವೆಲಾ ಬಿಕ್ಕಟ್ಟಿನಿಂದ ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು? ಜಿಟಿಆರ್​ಐ ವರದಿ ಪ್ರಕಾರ, ವೆನಿಜುವೆಲಾ ಜೊತೆ ಭಾರತದ ವ್ಯಾಪಾರ ವಹಿವಾಟು ಬಹಳ ಕಡಿಮೆ.

ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?
ವೆನಿಜುವೆಲಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 04, 2026 | 4:43 PM

Share

ನವದೆಹಲಿ, ಜನವರಿ 4: ಅಪಾರ ತೈಲ ಸಂಪತ್ತಿರುವ ವೆನಿಜುವೆಲಾ (Venezuela) ಮೇಲೆ ಅಮೆರಿಕ ದಾಳಿ ಮಾಡಿ ಅಲ್ಲಿನ ಅಧ್ಯಕ್ಷರು ಹಾಗೂ ಪತ್ನಿಯನ್ನು ಬಂಧಿಸಲಾಗಿದೆ. ಆ ದೇಶದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಹೇಗೆ ಇರುತ್ತೋ, ಯಾರ ನಾಯಕತ್ವ ಇರಲಿದೆ ಎಂಬುದು ಗೊತ್ತಿಲ್ಲ. ಇದೇ ವೇಳೆ ಹಲವು ದಶಕಗಳಿಂದ ಆ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಇದೆ. ಹೀಗಾಗಿ, ವೆನಿಜುವೆಲಾ ಬಿಕ್ಕಟ್ಟು ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆ ಸಹಜ.

ಜಾಗತಿಕ ಚಿಂತನಾ ವೇದಿಕೆಯಾದ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್​ಐ) ಪ್ರಕಾರ, ವೆನಿಜುವೆಲಾ ಬಿಕ್ಕಟ್ಟಿನಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವಾಗದು. ಹಾಗೇಕೆಂದು ಅದು ವಿಶ್ಲೇಷಣೆ ಕೂಡ ಮಾಡಿದೆ. ಹಿಂದಿನ ಎರಡು ದಶಕಗಳಲ್ಲಿ (2000ರ ನಂತರ) ವೆನಿಜುವೆಲಾದ ಕಚ್ಚಾ ತೈಲವನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಆದರೆ, 2019ರಲ್ಲಿ ಆ ದೇಶದ ಮೇಲೆ ಅಮೆರಿಕ ನಿಷೇಧ ಹಾಕಿದ ಬಳಿಕ ಭಾರತವು ಅಲ್ಲಿಂದ ತೈಲ ಖರೀದಿ ನಿಲ್ಲಿಸಿದು. ಇತರ ವಾಣಿಜ್ಯ ವಹಿವಾಟಿಗೂ ಸ್ವಲ್ಪ ಕತ್ತರಿ ಹಾಕಿತು.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

2024-25ರಲ್ಲಿ ವೆನಿಜುವೆಲಾದಿಂದ ಭಾರತ ಎಲ್ಲಾ ಸರಕುಗಳನ್ನು ಸೇರಿ ಮಾಡಿಕೊಂಡ ಆಮದು ಒಟ್ಟು 364.5 ಮಿಲಿಯನ್ ಡಾಲರ್. ಇದರಲ್ಲಿ ಕಚ್ಛಾ ತೈಲವೇ 255.3 ಮಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದಲ್ಲಿ (2023-24) 1.4 ಬಿಲಿಯನ್ ಡಾಲರ್​ನಷ್ಟು ಕಚ್ಚಾ ತೈಲವನ್ನು ವೆನಿಜುವೆಲಾದಿಂದ ಭಾರತ ಆಮದು ಮಾಡಿಕೊಂಡಿತ್ತು. ಅದಕ್ಕೆ ಮರುವರ್ಷ ಭಾರತದ ಆಮದು ಗಣನೀಯವಾಗಿ ತಗ್ಗಿದೆ.

ಇನ್ನು, ವೆನಿಜುವೆಲಾಗೆ ಭಾರತದ ರಫ್ತು ಕೂಡ ಹೆಚ್ಚೇನಿಲ್ಲ. 95.3 ಮಿಲಿಯನ್ ಡಾಲರ್​ನಷ್ಟು ಮಾತ್ರವೇ ಭಾರತ ರಫ್ತು ಮಾಡಿರುವುದು. ಇದರಲ್ಲಿ 41.4 ಮಿಲಿಯನ್ ಡಾಲರ್​ನಷ್ಟು ರಫ್ತು ಫಾರ್ಮಾ ಉತ್ಪನ್ನಗಳದ್ದೇ ಇದೆ ಎಂದು ಜಿಟಿಆರ್​ಐನ ವರದಿ ಹೇಳುತ್ತದೆ.

ಇದನ್ನೂ ಓದಿ: UPI transactions: 2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್​ನಲ್ಲಿ 2,160 ಕೋಟಿ ವಹಿವಾಟು

ವೆನಿಜುವೆಲಾ ಜೊತೆ ರಫ್ತಾಗಲೀ ಆಮದಾಗಲೀ ಭಾರತ ವ್ಯಾಪಾರ ಪ್ರಮಾಣ ಕಡಿಮೆಯೇ. ಹೀಗಾಗಿ, ವೆನಿಜುವೆಲಾದಲ್ಲಿ ಮುಂದಿನ ಪರಿಸ್ಥಿತಿ ಏನೇ ಆದರೂ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ.

ವೆನಿಜುವೆಲಾದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ವಿಶ್ವದ ತೈಲ ಸಂಗ್ರಹದಲ್ಲಿ ಶೇ. 18ರಷ್ಟು ತೈಲವು ವೆನಿಜುವೆಲಾದಲ್ಲೇ ಇದೆ. ಸೌದಿ ಅರೇಬಿಯಾದಲ್ಲಿರುವುದಕ್ಕಿಂತಲೂ ಹೆಚ್ಚಿನ ತೈಲವು ವೆನಿಜುವೆಲಾದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ