AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ

Nation-wide strike on Jan 27th by Bank employees: ಅನೇಕ ಸರ್ಕಾರಿ ಕಚೇರಿಗಳಲ್ಲಿ ಇರುವಂತೆ ವಾರಕ್ಕೆ ಎರಡು ದಿನ ವೀಕಾಫ್ ವ್ಯವಸ್ಥೆ ತರುವಂತೆ ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಲಿದ್ದಾರೆ. ಜನವರಿ 27ರಂದು ದೇಶವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ಬ್ಯಾಂಕ್ ಯೂನಿಯನ್​ಗಳ ಮಹಾಒಕ್ಕೂಟವು ಸುತ್ತೋಲೆಯಲ್ಲಿ ತಿಳಿಸಿದೆ. ಸದ್ಯ ಬ್ಯಾಂಕುಗಳಲ್ಲಿ ಪ್ರತೀ ಭಾನುವಾರ, ಹಾಗು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ರಜೆ ಇದೆ.

ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ
ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2026 | 11:40 AM

Share

ನವದೆಹಲಿ, ಜನವರಿ 5: ವಾರದ ಕಾರ್ಯದಿನಗಳನ್ನು ಐದಕ್ಕೆ ಮಿತಿಗೊಳಿಸಬೇಕೆಂದು (5 day work wek) ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳ ವೇದಿಕೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್​ಬಿಯು) ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವುದಾಗಿ ಘೋಷಿಸಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ (ಎಐಬಿಒಸಿ) ಈ ನಿರ್ಧಾರವನ್ನು ತಿಳಿಸಿ ಜನವರಿ 4ರಂದು ಸುತ್ತೋಲೆ ಹೊರಡಿಸಿದೆ.

ಬ್ಯಾಂಕುಗಳಲ್ಲಿ ಈಗ ಭಾನುವಾರದ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆಗಳಿವೆ. ಆದರೆ, ವಾರದ ಅಷ್ಟೂ ಶನಿವಾರ ಮತ್ತು ಭಾನುವಾರಗಳು ವಾರದ ರಜೆಯಾಗಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಮಾಡುತ್ತಿರುವ ಆಗ್ರಹವಾಗಿದೆ.

ಬಹಳ ದಿನಗಳಿಂದಲೂ ಈ ಬೇಡಿಕೆ ಇದೆ. 2024ರ ಮಾರ್ಚ್​ನಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧ ಬ್ಯಾಂಕ್ ಉದ್ಯೋಗಿಗಳ ಯೂನಿಯನ್​ಗಳು ಹಾಗೂ ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ನಡುವೆ ನಡೆದ ರಾಜಿಯ ವೇಳೆ ವಾರದ ರಜೆ ವಿಚಾರದ ಬಗ್ಗೆ ಸಮ್ಮತಿ ಕೊಡಲಾಗಿತ್ತು. ಆದರೆ, ಸರ್ಕಾರದಿಂದ ಇನ್ನೂ ಕೂಡ ತೀರ್ಮಾನ ಬಂದಿಲ್ಲ ಎನ್ನುವುದು ಬ್ಯಾಂಕ್ ಉದ್ಯೋಗಿಗಳ ಆಕ್ರೋಶವಾಗಿದೆ.

ಇದನ್ನೂ ಓದಿ: 2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್​ನಲ್ಲಿ 2,160 ಕೋಟಿ ವಹಿವಾಟು

‘ಬ್ಯಾಂಕ್ ಯೂನಿಯನ್​ಗಳ ಮನವಿಗೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ 2026ರ ಜನವರಿ 27ರಂದು ಎಲ್ಲಾ ಬ್ಯಾಂಕುಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಡಲು ನಿರ್ಧರಿಸಲಾಗಿದೆ. ಈ ಮುಷ್ಕರವನ್ನು ಯಶಸ್ವಿಗೊಳಿಸಿ’ ಎಂದು ಸುತ್ತೋಲೆಯಲ್ಲಿ ಮನವಿ ಮಾಡಲಾಗಿದೆ.

ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡಲು ಸಿದ್ಧ

ಈ ಹಿಂದೆ ನಡೆದ ಸಂಧಾನದ ವೇಳೆ ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡುವುದಕ್ಕೆ ಬದಲಾಗಿ, ಉದ್ಯೋಗಿಗಳು ದಿನದಲ್ಲಿ 40 ನಿಮಿಷಗಳಷ್ಟು ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಅದಕ್ಕೆ ಯೂನಿಯನ್​ಗಳೂ ಒಪ್ಪಿದ್ದವು. ಬ್ಯಾಂಕ್ ಉದ್ಯೋಗಿಗಳ ವಾರದ ಕೆಲಸದಲ್ಲಿ ಕಡಿಮೆ ಆಗದ ರೀತಿಯಲ್ಲಿ ರಜೆ ಸಂಖ್ಯೆ ಹೆಚ್ಚಿಸುವ ಸೂತ್ರ ಅದಾಗಿತ್ತು.

ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು

ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ಇದೆ. ಆರ್​ಬಿಐ, ಎಲ್​​ಐಸಿ, ಷೇರು ವಿನಿಮಯ ಕೇಂದ್ರ ಹೀಗೆ ಅನೇಕ ಕಡೆ ವಾರಕ್ಕೆ ಎರಡು ವೀಕಾಫ್​ಗಳಿವೆ. ಅದರಂತೆ ತಮಗೂ ಎರಡು ದಿನ ರಜೆ ಕೊಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ