ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ

Laddering strategy in bonds: ಸರ್ಕಾರಿ ಸಾಲಪತ್ರಗಳಾದ ಬಾಂಡ್​ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹೆಜ್ಜೆ ಎನಿಸುತ್ತದೆ. ಆದರೆ, ಬಾಂಡ್​ಗಳಿಂದ ಬಹಳ ಹೆಚ್ಚಿನ ರಿಟರ್ನ್ಸ್ ಸಿಗುವುದಿಲ್ಲ. ಬಾಂಡ್ ಹೂಡಿಕೆಯಲ್ಲಿ ಲ್ಯಾಡರಿಂಗ್ ತಂತ್ರ ಉಪಯೋಗಿಸಿದರೆ ಹೆಚ್ಚಿನ ಯೀಲ್ಡ್ ಪಡೆಯಬಹುದು ಎಂದು ಪರಿಣಿತರು ಹೇಳುತ್ತಾರೆ. ಅವರ ಸಲಹೆಗಳು ಇಲ್ಲಿವೆ.

ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ
ಹಣ
Image Credit source: Getty Images

Updated on: Aug 03, 2026 | 4:46 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣಕಾಸು ವರ್ಷದ ದ್ವಿತೀಯಾರ್ಧದ ವೇಳೆಗೆ ಬಡ್ಡಿದರಗಳನ್ನು 50 ರಿಂದ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಇಂತಹ ಬದಲಾಗುತ್ತಿರುವ ಬಡ್ಡಿದರದ ವಾತಾವರಣದಲ್ಲಿ ಬಾಂಡ್ (Bond) ಹೂಡಿಕೆದಾರರು ಗರಿಷ್ಠ ಆದಾಯ ಗಳಿಸಲು ಹಾಗೂ ಅಪಾಯವನ್ನು ಕಡಿಮೆ ಮಾಡಲು ‘ಏಣಿ ತಂತ್ರ’ (Laddering Strategy) ಅತ್ಯಂತ ಸೂಕ್ತವಾಗಿದೆ ಎಂದು ಸ್ಟ್ಯಾಂಡರ್ಡ್ ಚಾರ್ಟರ್ಡ್ ವೆಲ್ತ್ ಇಂಡಿಯಾದ ಹೂಡಿಕೆ ವಿಭಾಗದ ಮುಖ್ಯಸ್ಥ ವಿನಯ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ‘ಲ್ಯಾಡರಿಂಗ್ ತಂತ್ರ’?

ಏಣಿ ತಂತ್ರ ಅಥವಾ ಲ್ಯಾಡರಿಂಗ್ ಎಂದರೆ ನಿಮ್ಮ ಸಂಪೂರ್ಣ ಹಣವನ್ನು ಒಂದೇ ಬಾಂಡ್‌ನಲ್ಲಿ ಅಥವಾ ಒಂದೇ ಮುಕ್ತಾಯದ ಅವಧಿಯ (Maturity Period) ಯೋಜನೆಗಳಲ್ಲಿ ಹೂಡಿಕೆ ಮಾಡದೆ, ವಿವಿಧ ಕಾಲಾವಧಿಯ ಬಾಂಡ್‌ಗಳಲ್ಲಿ ವಿಂಗಡಿಸಿ ಹೂಡಿಕೆ ಮಾಡುವುದು. ಉದಾಹರಣೆಗೆ, 1 ವರ್ಷ, 2 ವರ್ಷ, 3 ವರ್ಷ, 5 ವರ್ಷ ಮೆಚ್ಯೂರಿಟಿಯ ಬಾಂಡ್​ಗಳಲ್ಲಿ ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

ಇದರಿಂದ ಕಾಲಕಾಲಕ್ಕೆ ಬಾಂಡ್‌ಗಳು ಮೆಚ್ಯೂರಿಟಿಯಾದಾಗ (Maturity), ಆ ಹಣವನ್ನು ಆ ಸಮಯದಲ್ಲಿ ಲಭ್ಯವಿರುವ ಹೆಚ್ಚಿನ ಬಡ್ಡಿದರದಲ್ಲಿ ಮರುಹೂಡಿಕೆ (Reinvest) ಮಾಡಲು ಅವಕಾಶ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಬಾಂಡ್​ಗಳಲ್ಲಿ ಹೇಗೆ ಹೂಡಿಕೆ ಮಾಡಬಹುದು ಎಂಬುದಕ್ಕೆ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದು:

ಅಲ್ಪಾವಧಿಯ ಬಾಂಡ್‌ಗಳಿಗೆ ಆದ್ಯತೆ

ಮಾರುಕಟ್ಟೆಯಲ್ಲಿ ಬಡ್ಡಿದರಗಳು ಏರಿಕೆಯಾಗುತ್ತಿರುವಾಗ ಅಲ್ಪಾವಧಿಯ (1 ರಿಂದ 3 ವರ್ಷದ Short-Maturity Bonds) ಬಾಂಡ್‌ಗಳು ಉತ್ತಮ ಆದಾಯ ನೀಡುತ್ತವೆ. ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯ ಬಡ್ಡಿದರದ ಏರಿಳಿತಗಳ ಅಪಾಯ (Duration Risk) ಕಡಿಮೆಯಿರುತ್ತದೆ.

ಉತ್ತಮ ಗುಣಮಟ್ಟದ ಕಾರ್ಪೊರೇಟ್ ಬಾಂಡ್‌ಗಳು

ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರಿ ಸೆಕ್ಯುರಿಟಿಗಳಿಗೆ (G-Secs) ಹೋಲಿಸಿದರೆ ಉತ್ತಮ ರೇಟಿಂಗ್ ಹೊಂದಿರುವ ಕಾರ್ಪೊರೇಟ್ ಬಾಂಡ್‌ಗಳು (Corporate Bonds) ಹೆಚ್ಚಿನ ಮತ್ತು ಆಕರ್ಷಕ ಆದಾಯವನ್ನು ನೀಡುತ್ತಿವೆ. ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೋದಲ್ಲಿ ಇವುಗಳನ್ನು ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

ಮಲ್ಟಿ-ಅಸ್ಸೆಟ್ ತಂತ್ರ

ಸಂಪೂರ್ಣ ಹಣವನ್ನು ಬಾಂಡ್‌ಗಳಲ್ಲೇ ಇಡದೆ, ಹೆಚ್ಚಿನ ಲಾಭಾಂಶ (Dividend) ನೀಡುವ ಷೇರುಗಳು, ದೀರ್ಘಾವಧಿಯ ಬಾಂಡ್‌ಗಳು ಹಾಗೂ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (REITs) ನಂತಹ ವಿವಿಧ ಆಸ್ತಿ ವಿಭಾಗಗಳಲ್ಲಿ ಹೂಡಿಕೆ ಹಂಚಿಕೆ ಮಾಡುವುದರಿಂದ (Multi-Asset Strategies) ಮಾರುಕಟ್ಟೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಪರಿಣಿತರ ಸಲಹೆ.

ಆರ್‌ಬಿಐ ಬಡ್ಡಿದರ ಹೆಚ್ಚಳ ಮಾಡುವ ಸೂಚನೆಗಳು ಇರುವುದರಿಂದ, ಒಂದೇ ಕಡೆ ದೀರ್ಘಾವಧಿಗೆ ಹಣ ತೊಡಗಿಸುವ ಬದಲು ಬಾಂಡ್ ಲ್ಯಾಡರಿಂಗ್ ತಂತ್ರಗಾರಿಕೆ ಅನುಸರಿಸುವುದು ಮತ್ತು ಪೋರ್ಟ್‌ಫೋಲಿಯೋವನ್ನು ವೈವಿಧ್ಯಗೊಳಿಸುವುದು (Diversification) ಹೂಡಿಕೆಯನ್ನು ಸುರಕ್ಷಿತವಾಗಿರಿಸಲು ಹಾಗೂ ಉತ್ತಮ ಆದಾಯ ಪಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us