ಅಸ್ತಿತ್ವಕ್ಕೆ ವೊಡಾಫೋನ್ ಸೆಣಸಾಟ; ನೊಕಿಯಾ, ಎರಿಕ್ಸನ್, ಸ್ಯಾಮ್ಸುಂಗ್ ಜೊತೆ ವಿಐ ಒಪ್ಪಂದ

Vodafone Idea signs deals with Nokia, Ericsson and Samsung: ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಇಂದು ಸೆಪ್ಟೆಂಬರ್ 22ರಂದು, ನೆಟ್ವರ್ಕ್ ಎಕ್ವಿಪ್ಮೆಂಟ್ ಸರಬರಾಜಿಗಾಗಿ ನೊಕಿಯ, ಎರಿಕ್ಸನ್, ಸ್ಯಾಮ್ಸುಂಗ್ ಜೊತೆ ವಿಐ ಒಪ್ಪಂದಕ್ಕೆ ಸಹಿ ಹಾಕಿದೆ. ಮೂರು ವರ್ಷದಲ್ಲಿ ಒಟ್ಟಾರೆ ವಿಐ ಮಾಡಲಿರುವ 5.5 ಬಿಲಿಯನ್ ಡಾಲರ್ ಹೂಡಿಕೆಯ ಭಾಗವಾಗಿ ಈ ಒಪ್ಪಂದ ಇದೆ.

ಅಸ್ತಿತ್ವಕ್ಕೆ ವೊಡಾಫೋನ್ ಸೆಣಸಾಟ; ನೊಕಿಯಾ, ಎರಿಕ್ಸನ್, ಸ್ಯಾಮ್ಸುಂಗ್ ಜೊತೆ ವಿಐ ಒಪ್ಪಂದ
ವೊಡಾಫೋನ್ ಐಡಿಯಾ

Updated on: Sep 22, 2024 | 6:06 PM

ನವದೆಹಲಿ, ಸೆಪ್ಟೆಂಬರ್ 22: ಸಾಲದ ಹೊರೆ, ಅದರ ಮೇಲೆ ಎಜಿಆರ್ ಹೊರೆ, ಗ್ರಾಹಕ ಸಂಖ್ಯೆ ಇಳಿಮುಖ, 5ಜಿಗೆ ನೆಟ್ವರ್ಕ್ ಅಪ್​ಗ್ರೇಡ್ ಮಾಡಲು ಬಂಡವಾಳ ಕೊರತೆ ಹೀಗೆ ಸಮಸ್ಯೆ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿರುವ ವೊಡಾಫೋನ್ ಐಡಿಯಾ ಸಂಸ್ಥೆ ಅಸ್ತಿತ್ವಕ್ಕಾಗಿ ಹೆಣಗುತ್ತಿದೆ. ಈ ಮಧ್ಯೆ ನೊಕಿಯಾ, ಎರಿಕ್ಸನ್ ಮತ್ತು ಸ್ಯಾಮ್ಸುಂಗ್ ಸಂಸ್ಥೆಗಳಿಂದ ನೆಟ್ವರ್ಕ್ ಉಪಕರಣಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದೆ. ಮೂರು ವರ್ಷ ಕಾಲದ ಈ ಸರಬರಾಜಿಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಮೌಲ್ಯ 3.6 ಬಿಲಿಯನ್ ಡಾಲರ್ (ಸುಮಾರು 30,000 ಕೋಟಿ ರೂ) ಆಗಿದೆ.

ಈ ಮೂರು ವರ್ಷದಲ್ಲಿ ವೊಡಾಫೋನ್ ಐಡಿಯಾ ಸಂಸ್ಥೆ 4ಜಿ ನೆಟ್ವರ್ಕ್ ಕವರೇಜ್ ಹೆಚ್ಚಿಸಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ 5ಜಿ ಅಳವಡಿಕೆ ಮಾಡಲಿದೆ. ಇದಕ್ಕಾಗಿ ಒಟ್ಟು 6.6 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಅಂದರೆ ಸುಮಾರು 55,000 ಕೋಟಿ ರೂನಷ್ಟು ಹೂಡಿಕೆ ಮಾಡಲಿದೆ. ಈ ನಿಟ್ಟಿನಲ್ಲಿ ಒಂದು ಭಾಗವಾಗಿ ನೆಟ್ವರ್ಕ್ ಎಕ್ವಿಪ್ಮೆಂಟ್ ಪೂರೈಕೆಗೆ 3.6 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಂದು ಭಾನುವಾರ (ಸೆ. 22) ಈ ಒಪ್ಪಂದ ಆಗಿರುವ ಸಂಗತಿಯನ್ನು ವೊಡಾಫೋನ್ ಐಡಿಯಾ ಹಂಚಿಕೊಂಡಿದೆ.

ಇದನ್ನೂ ಓದಿ: ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲಿದೆ ಭಾರತ; 2030ರೊಳಗೆ 10 ಟ್ರಿಲಿಯನ್ ಡಾಲರ್ ಜಿಡಿಪಿ ಆಗಲಿದೆ: ವರದಿ

ಈ ಒಪ್ಪಂದದ ಮಹತ್ವ ಏನೆಂದರೆ ನೊಕಿಯಾ, ಎರಿಕ್ಸನ್ ಮತ್ತು ಸ್ಯಾಮ್ಸುಂಗ್​ನಿಂದ ಸರಬರಾಜಾಗುವ ನೆಟ್ವರ್ಕ್ ಉಪಕರಣವು ಮಿತ ಶಕ್ತಿ ಬಳಕೆಗೆ ಸಹಾಯ ಮಾಡುತ್ತದೆ. ಇದರಿಂದ ಕಾರ್ಯಾಚರಣೆ ವೆಚ್ಚ ಅಥವಾ ಆಪರೇಟಿಂಗ್ ಕಾಸ್ಟ್ ಕಡಿಮೆ ಆಗುತ್ತದೆ. ದೂರಗಾಮಿಯಾಗಿ ಇದು ವೊಡಾಫೋನ್ ಐಡಿಯಾಗೆ ಸಕಾರಾತ್ಮಕವಾಗಿ ಪರಿಣಮಿಸಲಿದೆ.

ಎಜಿಆರ್ ಹೊರೆಯಿಂದ ವೊಡಾಫೋನ್ ಜರ್ಝರಿತ

ಸ್ಪೆಕ್ಟ್ರಂನಿಂದ ಪಡೆದ ಲಾಭದಲ್ಲಿ ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಪಾಲು ಕೊಡಬೇಕು. ಅದುವೇ ಎಜಿಆರ್. ಅಥವಾ ಅಡ್ಜಸ್ಟೆಡ್ ಗ್ರಾಸ್ ರೆವಿನ್ಯೂ. ದೂರಸಂಪರ್ಕ ಇಲಾಖೆ ಸೂಚಿಸಿದ ಎಜಿಆರ್ ಸಮರ್ಪಕವಾಗಿಲ್ಲ ಎಂಬುದು ಏರ್ಟೆಲ್, ವೊಡಾಫೋನ್ ಐಡಿಯಾದ ಅಳಲಾಗಿದ್ದು, ಕೋರ್ಟ್ ಮೊರೆ ಹೋಗಿದ್ದವು. ಸುಪ್ರೀಂ ಕೋರ್ಟ್ ಈ ಟೆಲಿಕಾಂ ಕಂಪನಿಗಳ ವಾದವನ್ನು ತಿರಸ್ಕರಿಸಿದೆ.

ಈಗ ವೊಡಾಫೋನ್ ಐಡಿಯಾ ಸಂಸ್ಥೆ ಟೆಲಿಕಾಂ ಇಲಾಖೆಗೆ 70,320 ಕೋಟಿ ರೂನಷ್ಟು ಎಜಿಆರ್ ಬಾಕಿ ಕೊಡಬೇಕಾಗಿದೆ. ಸ್ಪೆಕ್ಟ್ರಂ ಖರೀದಿಯ ಹಣವನ್ನೂ ಸೇರಿಸಿದರೆ ಎರಡು ಲಕ್ಷ ಕೋಟಿ ರೂಗೂ ಹೆಚ್ಚು ಹಣವನ್ನು ಸರ್ಕಾರಕ್ಕೆ ಅದು ಕೊಡುವುದು ಬಾಕಿ ಇದೆ.

ಇದನ್ನೂ ಓದಿ: 2025ರ ಬಜೆಟ್: ಮುಂದಿನ ತಿಂಗಳಿಂದಲೇ ತಯಾರಿ; ಅಕ್ಟೋಬರ್ ಎರಡನೇ ವಾರದಿಂದ ಪೂರ್ವಭಾವಿ ಸಭೆಗಳು

ಎಜಿಆರ್ ಬಾಕಿ ಪಾವತಿ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ವೊಡಾಫೋನ್ ಐಡಿಯಾದ ಷೇರುಮೌಲ್ಯ ಮತ್ತೆ ಕುಸಿಯುತ್ತಿದೆ. ಸಂಸ್ಥೆಗೆ ಈಗ ಸಾಲದ ಹೊರೆ ತಗ್ಗಿಸಿಕೊಂಡು 5ಜಿ ಸ್ಪರ್ಧೆಯಲ್ಲಿ ಉಳಿಯುವ ಬಹುದೊಡ್ಡ ಸವಾಲು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ