ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲಿದೆ ಭಾರತ; 2030ರೊಳಗೆ 10 ಟ್ರಿಲಿಯನ್ ಡಾಲರ್ ಜಿಡಿಪಿ ಆಗಲಿದೆ: ವರದಿ
IDBI Capital report on Indian economy: ಐಡಿಬಿಐ ಕ್ಯಾಪಿಟಲ್ ಸಂಸ್ಥೆ ವರದಿ ಪ್ರಕಾರ ಭಾರತದ ಆರ್ಥಿಕತೆ 2030ರೊಳಗೆ 10 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರಲಿದೆ. ಆರು ವರ್ಷದಲ್ಲಿ ಪ್ರತೀ ಒಂದೂರೆ ವರ್ಷಕ್ಕೆ 1 ಟ್ರಿಲಿಯನ್ ಡಾಲರ್ನಷ್ಟು ಜಿಡಿಪಿ ಹೆಚ್ಚಲಿದೆ. ಕೆಲವೇ ವರ್ಷದಲ್ಲಿ ಜರ್ಮನಿ, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಭಾರತ.
ನವದೆಹಲಿ, ಸೆಪ್ಟೆಂಬರ್ 22: ಭಾರತದ ಆರ್ಥಿಕತೆ ಬಹಳ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ಮುಂದಿನ ಏಳೆಂಟು ವರ್ಷದೊಳಗೆ ಭಾರತದ ಜಿಡಿಪಿ 10 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ. 2030ರೊಳಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ವರದಿಯೊಂದು ಹೇಳಿದೆ. ಐಡಿಬಿಐ ಕ್ಯಾಪಿಟಲ್ ಸಂಸ್ಥೆಯ ವರದಿ ಪ್ರಕಾರ, ಮುಂದಿನ ಆರು ವರ್ಷದಲ್ಲಿ ಪ್ರತೀ ಒಂದೂವರೆ ವರ್ಷಕ್ಕೆ ದೇಶದ ಜಿಡಿಪಿಗೆ 1 ಟ್ರಿಲಿಯನ್ ಡಾಲರ್ ಸೇರ್ಪಡೆಯಾಗುತ್ತಾ ಹೋಗುತ್ತದಂತೆ. ಈ ಮೂಲಕ ಮುಂದಿನ ಕೆಲ ವರ್ಷಗಳಲ್ಲಿ ಅತಿದೊಡ್ಡ ಆರ್ಥಿಕತೆಯಲ್ಲಿ ಅಮೆರಿಕ, ಚೀನಾ ನಂತರದ ಸ್ಥಾನವನ್ನು ಭಾರತ ಪಡೆಯಲಿದೆ. ಜಪಾನ್, ಜರ್ಮನಿಯನ್ನು ಹಿಂದಿಕ್ಕಲಿದೆ.
ಮ್ಯಾನುಫ್ಯಾಕ್ಚರಿಂಗ್ ವಲಯದಿಂದ ಜಿಡಿಪಿ ಬೆಳವಣಿಗೆ ಅಗಾಧ
ಸರ್ಕಾರ ಉತ್ಪಾದನಾ ವಲಯ ಅಥವಾ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗೆ ಸಕಲ ರೀತಿಯಲ್ಲಿ ಬಲವರ್ಧನೆಗೊಳಿಸಲು ಮಾಡುತ್ತಿರುವ ಪ್ರಯತ್ನಗಳು ಜಿಡಿಪಿಯ ಅಗಾಧ ಬೆಳವಣಿಗೆಗೆ ಎಡೆ ಮಾಡಿಕೊಡಲಿವೆ. ಐಡಿಬಿಐ ಕ್ಯಾಪಿಟಲ್ ವರದಿಯಲ್ಲಿ ಈ ಸೆಕ್ಟರ್ ವಹಿಸಲಿರುವ ಮಹತ್ವದ ಪಾತ್ರದ ಕುರಿತು ಬೆಳಕು ಚೆಲ್ಲಿದೆ. ಭಾರತದ ಆರ್ಥಿಕತೆಗೆ ಸಿಗುವ ಹೆಚ್ಚುವರಿ ಕೊಡುಗೆಯಲ್ಲಿ (ಜಿವಿಎ- ಗ್ರಾಸ್ ವ್ಯಾಲ್ಯೂ ಆ್ಯಡೆಡ್) ಮ್ಯಾನುಫ್ಯಾಕ್ಚರಿಂಗ್ ವಲಯದ ಕೊಡುಗೆ 32 ಪ್ರತಿಶತದಷ್ಟು ಇರಲಿದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ; ಮೂಲವೇತನದ ಜೊತೆ ವಿಲೀನವಾಗುತ್ತಾ ತುಟ್ಟಿಭತ್ಯೆ?
ಮೇಕ್ ಇನ್ ಇಂಡಿಯಾದಂಥ ಪ್ರಮುಖ ಯೋಜನೆಗಳು ಉತ್ಪಾದನಾ ವಲಯಕ್ಕೆ ಸಾಕಷ್ಟು ಪುಷ್ಟಿ ನೀಡಲಿವೆ. ಈ ಮೂಲಕ ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ತಯಾರಾಗಲಿದೆ.
1947ರಿಂದ 2010ರವರೆಗೆ ಜಿಡಿಪಿ 1 ಟ್ರಿಲಿಯನ್ ಡಾಲರ್… ಆದರೆ….
ಭಾರತದ ಜಿಡಿಪಿ 1 ಟ್ರಿಲಿಯನ್ ಡಾಲರ್ ಗಡಿ ಮುಟ್ಟಲು 1947ರಿಂದ 2010ರವರೆಗೆ 63 ವರ್ಷ ಬೇಕಾಯಿತು. 2017ಕ್ಕೆ 2 ಟ್ರಿಲಿಯನ್ ಡಾಲರ್, 2020ಕ್ಕೆ 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. 2010ರ ಬಳಿಕ ಜಿಡಿಪಿ ಬೆಳವಣಿಗೆ ವೇಗ ಹೆಚ್ಚುತ್ತಲೇ ಹೋಗಿದೆ. ಇದೇ ವೇಗದಲ್ಲಿ ಹೋದರೆ 2030ಕ್ಕೆ ಭಾರತದ ಜಿಡಿಪಿ 10 ಟ್ರಿಲಿಯನ್ ದಾಟಬಹುದು ಎಂಬುದು ಈ ವರದಿಯ ಅಂದಾಜು. ಕೋವಿಡ್ ಸಾಂಕ್ರಾಮಿಕ ವಕ್ಕರಿಸದೇ ಹೋಗಿದ್ದರೆ ಈ ವರ್ಷವೇ ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿರುತ್ತಿತ್ತು ಎಂಬುದನ್ನು ಈ ವರದಿ ಗುರುತಿಸಿದೆ.
ಇದನ್ನೂ ಓದಿ: ಯಾರಿಂದ ಯಾರಿಗೆ ಹೋಗುತ್ತೆ ಗೊತ್ತಾಗಲ್ಲ; ಆಭರಣ ಉದ್ಯಮ ದುರ್ಬಳಕೆ ಆಗಬಹುದು: ಭಾರತವನ್ನು ಎಚ್ಚರಿಸಿದ ಎಫ್ಎಟಿಎಫ್
ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯ ಹೆಚ್ಚಳ
ಇದೇ ವೇಳೆ ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಅಗ್ರಗಣ್ಯ ದೇಶಗಳನ್ನು ಹಿಂದಿಕ್ಕಲಿದೆ. ಔದ್ಯಮಿಕ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಜಾಗತಿಕ ಮ್ಯಾನುಫ್ಯಾಕ್ಚರಿಂಗ್ನ ಪವರ್ಹೌಸ್ ಎನಿಸಿರುವ ಅಮೆರಿಕ, ಚೀನಾ, ಜರ್ಮನಿ, ಸೌತ್ ಕೊರಿಯಾ ಮತ್ತು ಜಪಾನ್ನಂತಹ ದೇಶಗಳನ್ನು ಭಾರತ ಮೀರಿಸಲಿದೆ. ಪಿಎಲ್ಐ ಸ್ಕೀಮ್ಗಳಂತಹ ಪೂರಕ ನೀತಿಗಳಿಂದ ಭಾರತದ ತಯಾರಿಕಾ ಕ್ಷೇತ್ರ ಅದ್ವಿತೀಯವಾಗಿ ಬೆಳೆಯಲಿರುವುದನ್ನು ಐಡಿಬಿಐ ಕ್ಯಾಪಿಟಲ್ನ ಈ ವರದಿ ಎತ್ತಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ