ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ; ಮೂಲವೇತನದ ಜೊತೆ ವಿಲೀನವಾಗುತ್ತಾ ತುಟ್ಟಿಭತ್ಯೆ?
DA and DR hike soon: ಜುಲೈನಿಂದ ಡಿಸೆಂಬರ್ವರೆಗಿನ ತುಟ್ಟಿಭತ್ಯೆ ದರವನ್ನು ಸರ್ಕಾರ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಶೇ. 3-4ರಷ್ಟು ಡಿಎ ಹೆಚ್ಚಳ ಆಗಬಹುದು ಎನ್ನಲಾಗುತ್ತಿದೆ. ಇದೇ ವೇಳೆ ಈ ಬಾರಿ ಡಿಎ ಹೆಚ್ಚಳವಾದರೆ ಅದನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ.
ನವದೆಹಲಿ, ಸೆಪ್ಟೆಂಬರ್ 22: ಕೇಂದ್ರ ಸರ್ಕಾರೀ ಉದ್ಯೋಗಿಗಳಿಗೆ ಖುಷಿ ಸುದ್ದಿ. ವರ್ಷದ ಎರಡನೇ ಅವಧಿಗೆ ನೀಡಲಾಗುವ ತುಟ್ಟಿಭತ್ಯೆ ಶೀಘ್ರದಲ್ಲೇ ಉದ್ಯೋಗಿಗಳ ಕೈ ಸೇರಲಿದೆ. ವರದಿಗಳ ಪ್ರಕಾರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಹೆಚ್ಚಳವಾಗಬಹುದು. ಜುಲೈ 1ರಿಂದ ಅನ್ವಯ ಆಗುವಂತೆ ತುಟ್ಟಿಭತ್ಯೆಯು ಉದ್ಯೋಗಿಗಳಿಗೆ ಸಿಗಲಿದೆ. ಮೂರು ತಿಂಗಳ ಅರಿಯರ್ಸ್ ಸಮೇತ ಡಿಎ ಸಿಗಲಿದೆ.
ಜನವರಿಯಿಂದ ಜೂನ್ವರೆಗಿನ ಡಿಎ ಅನ್ನು ಶೇ. 4ರಷ್ಟು ಹೆಚ್ಚಳ ಮಾಡಲಾಗಿತ್ತು. ಮೂಲ ವೇತನದ ಮೊತ್ತಕ್ಕೆ ಹೆಚ್ಚುವರಿಯಾಗಿ ನೀಡಲಾಗುವ ಡಿಎ ಸದ್ಯ ಶೇ. 50ಕ್ಕೆ ಏರಿದೆ. ಈ ಬಾರಿ, ಅಂದರೆ ಜುಲೈನಿಂದ ಡಿಸೆಂಬರ್ವರೆಗಿನ ಅವಧಿಗೆ ಡಿಎ ಶೇ. 4ಕ್ಕಿಂತ ತುಸು ಕಡಿಮೆ ಇರುವ ನಿರೀಕ್ಷೆ ಇದೆ. ಶೇ. 3.50ರಷ್ಟು ಡಿಎ ಏರಿಕೆ ಮಾಡಬಹುದು ಎನ್ನಲಾಗುತ್ತಿದೆ.
ಡಿಎ ಮತ್ತು ಡಿಆರ್ ಎಂದರೆ ಏನು?
ಹಣದುಬ್ಬರದ ಪರಿಣಾಮವಾಗಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾದರೂ ಹೆಚ್ಚು ಉಪಯೋಗವಾಗದಂತಾಗುತ್ತದೆ. ಉದಾಹರಣೆಗೆ, ಉದ್ಯೋಗಿಯ ಸಂಬಳ ಶೇ. 10ರಷ್ಟು ಹೆಚ್ಚಳವಾಯಿತೆಂದಿಟ್ಟುಕೊಳ್ಳಿ. ಅದೇ ಸಂದರ್ಭದಲ್ಲಿ ಹಣದುಬ್ಬರ ಶೇ. 6ರಷ್ಟು ಇತ್ತು ಎಂದಾದರೆ ಉದ್ಯೋಗಿಗೆ ಸಿಗುವ ನೈಜ ಸಂಬಳ ಹೆಚ್ಚಳ ಶೇ. 4 ಮಾತ್ರವೇ ಆಗಿರುತ್ತದೆ. ಹೀಗಾಗಿ, ವೇತನ ಆಯೋಗವು ಉದ್ಯೋಗಿಗೆ ಡಿಯರ್ನೆಸ್ ಅಲೋಯನ್ಸ್ ಅನ್ನು ನೀಡುವ ಪರಿಪಾಠ ಮಾಡಿಕೊಂಡು ಬಂದಿದೆ. ಇದು ಹಣದುಬ್ಬರ ಪರಿಣಾಮವನ್ನು ಕಡಿಮೆ ಮಾಡಲು ಇರುವ ವಿಧಾನ.
ಇದನ್ನೂ ಓದಿ: ಕೆಲಸ ಮಾಡದಿದ್ರೆ ಇಲ್ಲ ಸಂಬಳ; ಸ್ಟ್ರೈಕ್ನಿರತ ಉದ್ಯೋಗಿಗಳಿಗೆ ಸ್ಯಾಮ್ಸುಂಗ್ ಮ್ಯಾನೇಜ್ಮೆಂಟ್ ಎಚ್ಚರಿಕೆ
ಡಿಎ ಅನ್ನು ಮೂಲ ವೇತನಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇಲ್ಲಿಯವರೆಗೆ ಶೇ. 50ರಷ್ಟು ಡಿಎ ಹೆಚ್ಚಳ ಮಾಡಲಾಗಿದೆ. ಡಿಎ ಎಂಬುದು ಹಾಲಿ ಕೆಲಸದಲ್ಲಿರುವ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಡಿಆರ್ ಎಂಬುದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ನೀಡಲಾಗುವ ಭತ್ಯೆಯಾಗಿದೆ.
ಮೂಲ ವೇತನದೊಂದಿಗೆ ವಿಲೀನಗೊಳ್ಳುತ್ತಾ ಡಿಎ?
ಡಿಎ ಶೇ. 50ಕ್ಕಿಂತ ಹೆಚ್ಚು ಏರಿಕೆ ಆದರೆ ಮೂಲ ವೇತನದೊಂದಿಗೆ ಅದನ್ನು ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿತ್ತು. ಇದರಿಂದ ಮೂಲ ವೇತನ ಪ್ರಮಾಣ ಹೆಚ್ಚಾಗಿ, ಮುಂದಿನ ಡಿಎ ಏರಿಕೆಯಲ್ಲಿ ಸಂಬಳವೂ ಗಣನೀಯವಾಗಿ ಏರಿಕೆ ಆಗುತ್ತದೆ. ಈ ಬಾರಿ ಡಿಎ ಹೆಚ್ಚಳ ಮಾಡಿದರೆ ಶೇ. 50ರ ಗಡಿ ದಾಟುವುದರಿಂದ ಮೂಲ ವೇತನದೊಂದಿಗೆ ಅದನ್ನು ವಿಲೀನಗೊಳಿಸಲಾಗುತ್ತದೆ ಎಂಬ ಮಾತುಗಳಿದ್ದವು. ಆದರೆ, ತಜ್ಞರ ಪ್ರಕಾರ ಡಿಎ ಅನ್ನು ವಿಲೀನ ಆಗುವುದಿಲ್ಲ.
ಇದನ್ನೂ ಓದಿ: ಬೆಂಗಳೂರಿನ ಗೆಲಾಕ್ಸ್ಐ ಕಂಪನಿಯಲ್ಲಿ ಇನ್ಫೋಸಿಸ್ ಹೂಡಿಕೆ; ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟ ಐಟಿ ದಿಗ್ಗಜ
ಎಂಟನೇ ವೇತನ ಆಯೋಗ ರಚನೆ ಆಗುವವರೆಗೂ ಡಿಎ ಹೆಚ್ಚಳ ಯಥಾಪ್ರಕಾರ ಆಗುತ್ತಿರುತ್ತದೆ. 2014ರಲ್ಲಿ 7ನೇ ವೇತನ ಆಯೋಗ ರಚನೆಯಾಗಿದ್ದು. ಪ್ರತೀ 10 ವರ್ಷಕ್ಕೆ ಹೊಸ ವೇತನ ಆಯೋಗವನ್ನು ರಚನೆ ಮಾಡಲಾಗುತ್ತದೆ. ಹೀಗಾಗಿ, 2024ರಲ್ಲಿ ಎಂಟನೇ ವೇತನ ಆಯೋಗ ಬರಬಹುದು ಎಂಬ ನಿರೀಕ್ಷೆ ಇತ್ತು. ಸದ್ಯಕ್ಕೆ ಸರ್ಕಾರದ ಮುಂದೆ ಅಂತಹ ಪ್ರಸ್ತಾಪ ಇದ್ದಂತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ