ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

India to participate at World Economic Forum at Davos: 2026ರ ಜನವರಿ ಮೂರನೇ ವಾರ ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​​ನಲ್ಲಿ ಡಬ್ಲ್ಯುಇಎಫ್ ವಾರ್ಷಿಕ ಮಹಾಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ ಇರಲಿದೆ. ದೊಡ್ಡ ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿರುವ ನಿಯೋಗವು ತೆರಳಲಿದೆ. ಮುಕೇಶ್ ಅಂಬಾನಿ, ನಂದನ್ ನಿಲೇಕಣಿ, ಸಂಜೀವ್ ಬಜಾಜ್, ನಿಖಿಲ್ ಕಾಮತ್ ಮೊದಲಾದ ಉದ್ಯಮಿಗಳು ಈ ನಿಯೋಗದಲ್ಲಿರಲಿದ್ದಾರೆ.

ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ
ವರ್ಲ್ಡ್ ಎಕನಾಮಿಕ್ ಫೋರಂ

Updated on: Dec 19, 2025 | 5:34 PM

ನವದೆಹಲಿ, ಡಿಸೆಂಬರ್ 19: ಮುಂದಿನ ತಿಂಗಳು ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆಯಲಿರುವ ವರ್ಲ್ಡ್ ಎಕನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಭಾರತದ ಪ್ರಬಲ ಉಪಸ್ಥಿತಿ ಇರಲಿದೆ. ಪ್ರಬಲವಾದ ಒಂದು ದೊಡ್ಡ ನಿಯೋಗವೇ ಡಾವೋಸ್​ಗೆ ತೆರಳಲಿದೆ. 2026ರ ಜನವರಿ 18ರಿಂದ 24ರವರೆಗೆ ನಡೆಯಲಿರುವ ಡಬ್ಲ್ಯುಇಎಫ್ ಸಭೆಯಲ್ಲಿ ಬ್ಯುಸಿನೆಸ್ ಮತ್ತು ರಾಜಕೀಯ ಕ್ಷೇತ್ರದ ನಾಯಕರು ಭಾರತದ ನಿಯೋಗದಲ್ಲಿದ್ದಾರೆ.

ವರದಿ ಪ್ರಕಾರ, ಭಾರತದ ನಿಯೋಗದಲ್ಲಿ ನೂರಕ್ಕೂ ಹೆಚ್ಚು ಸಿಇಒಗಳು, ಮೂವರು ಹಿರಿಯ ಕೇಂದ್ರ ಸಚವರು, ಐದು ರಾಜ್ಯಗಳ ಮುಖ್ಯಮಂತ್ರಿಗಳು ಇರಲಿದ್ದಾರೆ. ಇವರ ಜೊತೆ ಹಿರಿಯ ಸರ್ಕಾರಿ ಅಧಿಕಾರಿಗಳು, ಎನ್​ಜಿಒ ಪ್ರತಿನಿಧಿಗಳು ಮೊದಲಾದವರು ಸ್ವಿಟ್ಜರ್​ಲ್ಯಾಂಡ್​ಗೆ ಹೋಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಈ ವರ್ಷ ಸರ್ಕಾರಕ್ಕೆ ಸಿಕ್ಕಿದ ನಿವ್ವಳ ನೇರ ತೆರಿಗೆ ಸಂಗ್ರಹ 17 ಲಕ್ಷ ಕೋಟಿ ರೂ

ಉದ್ಯಮಿಗಳು ಮತ್ತು ಸಿಇಒಗಳ ಪೈಕಿ ರಿಲಾಯನ್ಸ್ ಛೇರ್ಮನ್ ಮುಕೇಶ್ ಅಂಬಾನಿ, ಟಾಟಾ ಗ್ರೂಪ್ ಛೇರ್ಮನ್ ಎನ್ ಚಂದ್ರಶೇಖರನ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ, ಝೀರೋಧ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮೊದಲಾದವರು ಇದ್ದಾರೆ.

ಇವರಷ್ಟೇ ಅಲ್ಲ, ಬಜಾಜ್ ಗ್ರೂಪ್​ನ ಸಂಜೀವ್ ಬಜಾಜ್, ಜುಬಿಲೆಂಟ್ ಭಾರ್ತಿಯಾ ಗ್ರೂಪ್​ನ ಹರಿ ಎಸ್ ಭಾರ್ತಿಯಾ, ಏರ್ಟೆಲ್​ನ ಸುನೀಲ್ ಭಾರ್ತಿ ಮಿಟ್ಟಲ್, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್, ವಿಪ್ರೋದ ರಿಷದ್ ಪ್ರೇಮ್​ಜಿ, ಎಸ್ಸಾರ್​ನ ಪ್ರಶಾಂತ್ ರುಯಾ, ಪೇಟಿಂನ ವಿಜಯ್ ಶೇಖರ್ ಶರ್ಮಾ, ರಿನ್ಯೂನ ಸುಮಂತ್ ಸಿನ್ಹಾ ಮೊದಲಾದವರೂ ಕೂಡ ಭಾರತದ ನಿಯೋಗದೊಂದಿಗೆ ಹೋಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸರ್ಕಾರ ನೋಟ್ ಪ್ರಿಂಟ್ ಮಾಡಿ ಸಾಲ ತೀರಿಸಬಹುದಲ್ಲ? ಹೆಚ್ಚು ನೋಟ್ ಪ್ರಿಂಟ್ ಮಾಡಿದರೆ ಏನು ಅಪಾಯ?

ಕೇಂದ್ರ ಸಚಿವರ ಪೈಕಿ ಪ್ರಲ್ಹಾದ್ ಜೋಷಿ, ಅಶ್ವಿನಿ ವೈಷ್ಣವ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ಡಾವೋಸ್ ಸಭೆಯಲ್ಲಿ ಇರಲಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಮತ್ತು ಮಧ್ಯಪ್ರದೇಶ ಮುಖ್ಯಂತ್ರಿ ಮೋಹನ್ ಯಾದವ್ ಅವರೂ ಭಾರತೀಯ ನಿಯೋಗದಲ್ಲಿದ್ದಾರೆ. ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಂದಲೂ ಪ್ರಾತಿನಿಧಿತ್ವ ಇರಲಿದೆ. ಬೇರೆ ರಾಜ್ಯಗಳೂ ಕೂಡ ಮುಖ್ಯಮಂತ್ರಿಯನ್ನೋ ಅಥವಾ ಹಣಕಾಸು ಸಚಿವರನ್ನೋ ಅಥವಾ ಇನ್ನಾರನ್ನಾದರೂ ಪ್ರತಿನಿಧಿಯನ್ನು ಕಳುಹಿಸಲು ಸ್ವತಂತ್ರವಾಗಿರುತ್ತವೆ. ಕರ್ನಾಟಕದಿಂದ ಇನ್ನೂ ನಿರ್ಧಾರ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ