WeWork: ದಿವಾಳಿ ಸ್ಥಿತಿಯಲ್ಲಿ ವೀವರ್ಕ್; ಬ್ಯಾಂಕ್ರಪ್ಸಿಗೆ ಅರ್ಜಿ ಸಲ್ಲಿಸಿದ ಕೋವರ್ಕಿಂಗ್ ಸ್ಪೇಸ್ ಕಂಪನಿ

| Updated By: Digi Tech Desk

Updated on: Nov 07, 2023 | 12:27 PM

WeWork Files For Bankruptcy: ವೀವರ್ಕ್ ಸಂಸ್ಥೆ ತನ್ನ ದಿವಾಳಿ ತಡೆಗೆ ಮನವಿ ಅರ್ಜಿ ಸಲ್ಲಿಸಿದೆ. ವರದಿ ಪ್ರಕಾರ, ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ. ಆಗಸ್ಟ್ ತಿಂಗಳಲ್ಲಿ ವೀವರ್ಕ್ ತನ್ನ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಇದರ ಸುಳಿವು ನೀಡಿತ್ತು. ಮುಂದಿನ ವರ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇಕಷ್ಟು ಹಣ ಇಲ್ಲ ಎಂದು ತಿಳಿಸಿತ್ತು. ಆ ಭಯ ಈಗ ನಿಜವಾಗಿದೆ.

WeWork: ದಿವಾಳಿ ಸ್ಥಿತಿಯಲ್ಲಿ ವೀವರ್ಕ್; ಬ್ಯಾಂಕ್ರಪ್ಸಿಗೆ ಅರ್ಜಿ ಸಲ್ಲಿಸಿದ ಕೋವರ್ಕಿಂಗ್ ಸ್ಪೇಸ್ ಕಂಪನಿ
ಕೋವರ್ಕಿಂಗ್ ಸ್ಪೇಸ್
Follow us on

ನ್ಯೂಯಾರ್ಕ್, ನವೆಂಬರ್ 7: ಒಂದು ಸಮಯದಲ್ಲಿ ಅಮೆರಿಕದ ಅತ್ಯಂತ ಭರವಸೆಯ ಸ್ಟಾರ್ಟಪ್​ಗಳಲ್ಲಿ ಒಂದಾಗಿದ್ದ ವೀವರ್ಕ್ ಕಂಪನಿ (WeWork) ಇವತ್ತು ದಿವಾಳಿ ಅಂಚಿನಲ್ಲಿದೆ. ಕೋವರ್ಕಿಂಗ್ ಸ್ಪೇಸ್ ಒದಗಿಸುವ, ಅಂದರೆ ಬೇರೆ ಬೇರೆ ಕಂಪನಿಗಳ ಉದ್ಯೋಗಿಗಳಿಗೆ ಕೆಲಸ ಮಾಡಲು ಸ್ಥಳಗಳನ್ನು ಒದಗಿಸುವ ವೀವರ್ಕ್ ಸಂಸ್ಥೆ ತನ್ನ ದಿವಾಳಿ ತಡೆಗೆ ಮನವಿ ಅರ್ಜಿ (Bankruptcy Application) ಸಲ್ಲಿಸಿದೆ. ವರದಿ ಪ್ರಕಾರ, ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ. ಆಗಸ್ಟ್ ತಿಂಗಳಲ್ಲಿ ವೀವರ್ಕ್ ತನ್ನ ತ್ರೈಮಾಸಿಕ ವರದಿ (Quarter report) ಬಿಡುಗಡೆ ಮಾಡಿದ ಸಂದರ್ಭದಲ್ಲಿ ಇದರ ಸುಳಿವು ನೀಡಿತ್ತು. ಮುಂದಿನ ವರ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇಕಷ್ಟು ಹಣ ಇಲ್ಲ ಎಂದು ತಿಳಿಸಿತ್ತು. ಆ ಭಯ ಈಗ ನಿಜವಾಗಿದೆ. ಕಳೆದ ವಾರ ವೀವರ್ಕ್ ಕಂಪನಿಯ ಷೇರುಗಳು ಕೂಡ ಶೇ. 50ರಷ್ಟು ಕುಸಿದಿದ್ದವು.

ವೀವರ್ಕ್​ಗೆ ಯಾಕೆ ಈ ದುಸ್ಥಿತಿ?

ವೀವರ್ಕ್ ಸಂಸ್ಥೆ ಯಾವುದೇ ಕಂಪನಿಯ ಯಾವುದೇ ಉದ್ಯೋಗಿಗೆ ಕೆಲಸ ಮಾಡಲು ಸ್ಥಳದ ಅವಕಾಶ ಕೊಡುತ್ತದೆ. ಯಾರು ಬೇಕಾದರೂ ಹೋಗಿ ಈ ಸ್ಥಳದಲ್ಲಿ ಕೆಲಸ ಮಾಡಬಹುದು. ಬಹಳಷ್ಟು ಕಂಪನಿಗಳು ವೀವರ್ಕ್​ನ ಸ್ಥಳಗಳನ್ನು ಬುಕ್ ಮಾಡಿ, ತಮ್ಮ ಉದ್ಯೋಗಿಗಳಿಗೆ ಅಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತವೆ. ಕಚೇರಿಗೆ ಬಂದು ಕೆಲಸ ಮಾಡಲು ಕಷ್ಟವಾದವರಿಗೆ ಮತ್ತು ಮನೆಯಲ್ಲೂ ಕೆಲಸ ಮಾಡಲು ಕಷ್ಟವಾದವರಿಗೆ ತಮಗೆ ಅನುಕೂಲವಿರುವ ಜಾಗದಲ್ಲಿರುವ ವೀವರ್ಕ್ ಸ್ಥಳದಲ್ಲಿ ಕೆಲಸ ಮಾಡುವ ಒಂದು ಆಯ್ಕೆ ಇತ್ತು. ಆದರೆ, ಈಗ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಆಫೀಸ್ ಕಡ್ಡಾಯ ಮಾಡಿವೆ. ವೀವರ್ಕ್ ಜೊತೆಗಿನ ಸಬ್​ಸ್ಕ್ರಿಪ್ಷನ್​ಗಳನ್ನು ಕಡಿತಗೊಳಿಸುತ್ತಿವೆ. ಇದು ವೀವರ್ಕ್ ಆದಾಯ ಸಂಕುಚಿತಗೊಳ್ಳಲು ಕಾರಣವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಆರ್ಥಿಕ ಅಸಮಾನತೆಯಲ್ಲಿ ಹೆಚ್ಚಳ; ಬಡತನದಲ್ಲಿ ಇಳಿಮುಖ: ವಿಶ್ವಸಂಸ್ಥೆ ಯುಎನ್​ಡಿಪಿ ವರದಿಯಲ್ಲಿ ಇನ್ನೂ ಕೆಲ ಕುತೂಹಲಕಾರಿ ಸಂಗತಿ

ಸ್ಥಳದ ಬಾಡಿಗೆ, ಇನ್​ಫ್ರಾಸ್ಟ್ರಕ್ಚರ್ ಇತ್ಯಾದಿ ಸಾಕಷ್ಟು ವೆಚ್ಚಗಳನ್ನು ಭರಿಸುವಷ್ಟು ಆದಾಯ ವೀವರ್ಕ್​ಗೆ ಬರುತ್ತಿಲ್ಲ. ಕಮರ್ಷಿಯಲ್ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಈಗ ಆಫೀಸ್ ಸ್ಪೇಸ್ ಹೆಚ್ಚಾಗಿದೆ. ವರ್ಕ್ ಸ್ಪೇಸ್ ಕ್ಷೇತ್ರದಲ್ಲಿ ಹೆಚ್ಚು ಕಂಪನಿಗಳು ಬಂದಿವೆ. ಪೈಪೋಟಿ ಹೆಚ್ಚಿದೆ. ಇದೂ ಕೂಡ ವೀವರ್ಕ್​ಗೆ ಹಿನ್ನಡೆ ತಂದಿದೆ.

ಆಗಸ್ಟ್​ನಲ್ಲಿ ಬಂದ ಕ್ವಾರ್ಟರ್ ರಿಪೋರ್ಟ್ ಪ್ರಕಾರ, ವೀವರ್ಕ್ ಸಂಸ್ಥೆಯ 844 ಮಿಲಿಯನ್ ಡಾಲರ್​ನಷ್ಟು ಆದಾಯ ಮಾಡಿತಾದರೂ ಬರೋಬ್ಬರಿ 397 ಮಿಲಿಯನ್ ಡಾಲರ್​ನಷ್ಟು ನಿವ್ವಳ ನಷ್ಟ ಕಂಡಿರುವುದು ತಿಳಿದುಬಂದಿದೆ.

ಜಪಾನ್​ನ ಸಾಫ್ಟ್​ಬ್ಯಾಂಕ್ ಸಂಸ್ಥೆ ಶೇ. 60ರಷ್ಟು ಮಾಲೀಕತ್ವವನ್ನು ವೀವರ್ಕ್​ನಲ್ಲಿ ಹೊಂದಿದೆ. 2010ರಲ್ಲೇ ಇದು ಆರಂಭವಾಗಿತ್ತು.ಇಸ್ರೇಲ್​ನ ಅಡಮ್ ನ್ಯೂಮನ್ ಮತ್ತು ಅಮೆರಿಕದ ಮಿಗುವೆಲ್ ಮೆಕೆಲ್ವೀ ಅವರಿಬ್ಬರು ಸೇರಿ ವೀವರ್ಕ್ ಕಂಪನಿ ಸ್ಥಾಪಿಸಿದರು. ಕೋವಿಡ್ ಬಂದ ಬಳಿಕ ಕೋವರ್ಕಿಂಗ್ ಸ್ಪೇಸ್ ಬಳಕೆ ಹೆಚ್ಚಾಯಿತು. ವಿಪರ್ಯಾಸ ಎಂದರೆ ವೀವರ್ಕ್​ನ ದುರ್ಗತಿ 2019ರಲ್ಲಿ ಶುರುವಾಗಿ ಈಗ ದಿವಾಳಿಯಾಗುವ ಮಟ್ಟಕ್ಕೆ ಬಂದಿದೆ. ಅದರ ಬಿಸಿನೆಸ್ ಹೆಚ್ಚು ಪ್ರಸ್ತುತವಾಗಿರುವ ಕಾಲಘಟ್ಟದಲ್ಲೇ ಅದು ಅಂತಿಮ ಹಂತಕ್ಕೆ ಬಂದಿರುವುದು ನಿಜಕ್ಕೂ ಅಚ್ಚರಿ.

ಇದನ್ನೂ ಓದಿ: ವಿಶ್ವದಲ್ಲಿ ಅತಿಹೆಚ್ಚು ಹೊತ್ತು ಕೆಲಸ ಮಾಡುವವರಲ್ಲಿ ಭಾರತೀಯರು; ಸಿರಿವಂತ ದೇಶಗಳಲ್ಲಿ ಕೆಲಸ ಅವಧಿ ಕಡಿಮೆ

ವೀವರ್ಕ್​ನ ಸಹ-ಸಂಸ್ಥಾಪಕ ಅಡಮ್ ನ್ಯೂಮನ್ ಈ ಬಗ್ಗೆ ವಿಷಾದಿಸಿದ್ದಾರೆ. ಸರಿಯಾದ ತಂತ್ರ ಮತ್ತು ತಂಡದಿಂದ ವೀವರ್ಕ್ ಅನ್ನು ಮರುಸಂಘಟಿಸಿ ಮತ್ತೊಮ್ಮೆ ಯಶಸ್ಸಿನ ಹಳಿಗೆ ತರಲು ಸಾಧ್ಯ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Tue, 7 November 23