ವಿಶ್ವದಲ್ಲಿ ಅತಿಹೆಚ್ಚು ಹೊತ್ತು ಕೆಲಸ ಮಾಡುವವರಲ್ಲಿ ಭಾರತೀಯರು; ಸಿರಿವಂತ ದೇಶಗಳಲ್ಲಿ ಕೆಲಸ ಅವಧಿ ಕಡಿಮೆ
Indians Working Hours: ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ನ ರಿಪೋರ್ಟ್ವೊಂದು ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಸರಾಸರಿ ಕೆಲಸದ ಅವಧಿಯ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಗೆಡವಿದೆ. ಈ ವರದಿ ಪ್ರಕಾರ ವಿಶ್ವದಲ್ಲಿ ಅತಿಹೆಚ್ಚು ಕೆಲಸದ ಅವಧಿ ಇರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಇಲ್ಲಿ ವಾರಕ್ಕೆ ಸರಾಸರಿ 47.7 ಗಂಟೆ ಕೆಲಸದ ಅವಧಿ ಇದೆಯಂತೆ. ಈ ಪಟ್ಟಿಯಲ್ಲಿರುವ ದೇಶಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ.
ನವದೆಹಲಿ, ನವೆಂಬರ್ 6: ಭಾರತೀಯ ಯುವ ಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಕೆಲ ದಿನಗಳ ಹಿಂದೆ ನೀಡಿದ ಹೇಳಿಕೆಗೆ ಸಿಗುತ್ತಿರುವ ಸ್ಪಂದನೆ ಮುಂದುವರಿಯುತ್ತಲೇ ಇದೆ. ಭಾರತದಲ್ಲಿ ಅಧಿಕೃತವಾಗಿ ದಿನಕ್ಕೆ 8 ಗಂಟೆ ಕೆಲಸವಾದರೂ ವಾಸ್ತವದಲ್ಲಿ ಕೆಲಸ ಅವಧಿ ಹೆಚ್ಚೇ ಇದೆ. ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿಯೊಂದು 2018ರ ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ನ (ILO) ರಿಪೋರ್ಟ್ ಅನ್ನು ಉಲ್ಲೇಖಿಸಿ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಸರಾಸರಿ ಕೆಲಸದ ಅವಧಿಯ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರಗೆಡವಿದೆ. ಈ ವರದಿ ಪ್ರಕಾರ ವಿಶ್ವದಲ್ಲಿ ಅತಿಹೆಚ್ಚು ಕೆಲಸದ ಅವಧಿ ಇರುವ ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಇಲ್ಲಿ ವಾರಕ್ಕೆ ಸರಾಸರಿ 47.7 ಗಂಟೆ ಕೆಲಸದ ಅವಧಿ ಇದೆಯಂತೆ. ಈ ಪಟ್ಟಿಯಲ್ಲಿರುವ ದೇಶಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ.
ಐಎಲ್ಒ ಪ್ರಕಾರ ಅತಿಹೆಚ್ಚು ಕೆಲಸ ಮಾಡುವ ದೇಶಗಳು
- ಕತಾರ್
- ಕಾಂಗೋ
- ಲೆಸೋತೋ
- ಭೂತಾನ್
- ಗಾಂಬಿಯಾ
- ಯುಎಇ
- ಭಾರತ
ಕುತೂಹಲ ಎಂದರೆ, ವಿಶ್ವದ 10 ಅತಿದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತದಲ್ಲೇ ಅತಿಹೆಚ್ಚು ಕೆಲಸದ ಅವಧಿ ಇರುವುದು. ಇನ್ನೊಂದು ಕುತೂಹಲದ ಅಂಶ ಎಂದರೆ ಕೆಲಸದ ಅವಧಿಗೂ ದೇಶದ ಸಿರಿತನಕ್ಕೂ ವಿರುದ್ಧ ಸಂಬಂಧ ಇದೆ. ಉದಾಹರಣೆಗೆ, ಟಾಪ್ 10 ಆರ್ಥಿಕತೆಯಲ್ಲಿರುವ ಭಾರತದಲ್ಲಿ ಕೆಲಸದ ಅವಧಿ ಗರಿಷ್ಠ ಇದೆ. ಆದರೆ, ಅದರ ಜಿಡಿಪಿ ತಲಾದಾಯ ಅತ್ಯಂತ ಕಡಿಮೆ ಇದೆ.
ಅದೇ ನೀವು ಫ್ರಾನ್ಸ್ ತೆಗೆದುಕೊಂಡರೆ ಅದರ ತಲಾದಾಯ ಬರೋಬ್ಬರಿ 46 ಲಕ್ಷ ರೂ ಇದೆ. ಇಲ್ಲಿ ಕೆಲಸದ ಅವಧಿ ಇರುವುದು ಮಾತ್ರ ವಾರಕ್ಕೆ ಸರಾಸರಿ 30.1 ಗಂಟೆ ಮಾತ್ರ.
ಇನ್ನೂ ಒಂದು ವರದಿ ಪ್ರಕಾರ, ಜಪಾನ್ ದೇಶದಲ್ಲಿ ಜನರು ಹೆಚ್ಚು ಹೊತ್ತು ಕೆಲಸ ಮಾಡುತ್ತಾರಾದರೂ ಉತ್ಪನ್ನಶೀಲತೆ ಬಹಳ ಕಡಿಮೆ ಆಗಿದೆಯಂತೆ. ಅಲ್ಲಿ ಕಚೇರಿಯಿಂದ ಉದ್ಯೋಗಿಗಳನ್ನು ಬೇಗ ಮನೆಗೆ ಕಳುಹಿಸಲು ಕಂಪನಿಗಳು ಪ್ರೋತ್ಸಾಹಿಸುತ್ತವಂತೆ. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜಪಾನೀ ಜನರು ಹೆಚ್ಚು ಹೊತ್ತು ಕೆಲಸ ಮಾಡುವ ಶಿಸ್ತನ್ನು ರೂಢಿಸಿಕೊಂಡಿದ್ದಾರೆ. ಅದು ತಲೆಮಾರುಗಳಿಗೂ ವರ್ಗಾವಣೆ ಆಗಿಹೋಗಿದೆ. ಈ ಸ್ವಭಾವ ಬದಲಿಸಲು ಅಲ್ಲಿ ಪ್ರೋತ್ಸಾಹಿಸಲಾಗುತ್ತಿದೆಯಂತೆ.
ಇನ್ನು, ಇನ್ಫೋಸಿಸ್ನ ಮಾಜಿ ಛೇರ್ಮನ್ ಎನ್ ಆರ್ ನಾರಾಯಣಮೂರ್ತಿ ಅವರ ವಾರಕ್ಕೆ 70 ಗಂಟೆ ಕೆಲಸದ ಸಲಹೆಗೆ ಉದ್ಯಮ ವಲಯದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರ್ತಿಗಳು ಹೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ, ಮತ್ತಿನ್ನೂ ಕೆಲವರು ಆ ಹೇಳಿಕೆಗೆ ತಮ್ಮದೇ ವ್ಯಾಖ್ಯಾನ ಕೊಟ್ಟಿರುವುದೂ ಉಂಟು.
ಕೆಲ ಸ್ಟಾರ್ಟಪ್ಗಳ ಸ್ಥಾಪಕರು ಮೂರ್ತಿಯವರ ಸಲಹೆಗಳನ್ನು ವಿರೋಧಿಸಿರುವುದಿದೆ. ವೈಯಕ್ತಿಕ ಜೀವನಕ್ಕೆ ಸಮಯ ಇಲ್ಲದಿದ್ದರೆ ಜೀವನ ಸಮತೋಲನ ಹೊಂದಿರುವುದಿಲ್ಲ ಎಂದು ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ