ಆಕೆ ಹೆಸರು ವೀಣಾ ಆರ್. ರಾವ್. ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ವಾಸವಾಗಿದ್ದಾರೆ. ಅಲ್ಲೇ ಅವರ ಹೆಸರಲ್ಲಿ ನಿವೇಶನ ಇದ್ದು, ತಮ್ಮ ಹೆಸರಲ್ಲೇ ಬ್ಯಾಂಕ್ ಸಾಲ ಪಡೆದು, ಮನೆ ಕಟ್ಟಬೇಕು ಎಂಬ ಉದ್ದೇಶ ಇರಿಸಿಕೊಂಡಿದ್ದಾರೆ. ಎಲ್ಲ ಬ್ಯಾಂಕ್ಗಳಲ್ಲೂ ಕೇಳುವಂತೆ ನಿವೇಶನಕ್ಕೆ ಸಂಬಂಧಿಸಿದ ಕಾಗದ- ಪತ್ರಗಳು, ಆದಾಯ ದಾಖಲೆಗಳು ವೀಣಾ ಬಳಿ ಇವೆ. ಖಾಸಗಿ ಬ್ಯಾಂಕ್ವೊಂದರಲ್ಲಿ ಅತಿ ಕಡಿಮೆ ಬಡ್ಡಿ ದರ ಎಂಬ ಕಾರಣಕ್ಕೆ ಅದನ್ನು ವಿಚಾರಿಸುವುದಕ್ಕೆ ಹೋದಾಗ, ಕೋ ಅಪ್ಲಿಕೆಂಟ್ ಬೇಕಾಗುತ್ತಾರೆ ಅಥವಾ ಲೈಫ್ ಇನ್ಷೂರೆನ್ಸ್ ಖರೀದಿ ಮಾಡಬೇಕಾಗುತ್ತದೆ. ಅದಕ್ಕೆ 1 ಲಕ್ಷ ರೂಪಾಯಿ ತನಕ ಆಗುತ್ತದೆ ಎಂದಿದ್ದಾರೆ. ಸಹ ಅರ್ಜಿದಾರರಾಗಿ ತಮ್ಮ ಪತಿಯ ಹೆಸರನ್ನು ಸೇರಿಸಿದರೆ ಆಕೆಯ ಪತಿಯ ಸಾಲ ಪಡೆಯುವ ಅರ್ಹತೆ (ಎಲಿಜಿಬಲಿಟಿ) ಕಡಿಮೆ ಆಗುತ್ತದೆ ಅಥವಾ ಬೇರೆ ಯಾರನ್ನೂ ಕೇಳುವುದಕ್ಕೆ ವೀಣಾ ಅವರು ಸಿದ್ಧವಿಲ್ಲ ಹಾಗೂ ತಮಗೆ ಬರುತ್ತಿರುವ ಆದಾಯವೇ ಸಾಲ ಪಡೆದುಕೊಳ್ಳುವಷ್ಟು ಇರುವಾಗ ಏಕಾಗಿ ಪತಿಯ ಹೆಸರು ಸೇರಿಸಬೇಕು ಅಥವಾ ಇನ್ಷೂರೆನ್ಸ್ಗೆ ಏಕಿಷ್ಟು ಮೊತ್ತ ನೀಡಿ ಖರೀದಿಸಬೇಕು ಎಂಬುದು ವೀಣಾ ಅವರ ಪ್ರಶ್ನೆಯಾಗಿದೆ.
ಗೃಹಸಾಲ ಪಡೆಯಬೇಕು ಎಂದುಕೊಳ್ಳುವವರಲ್ಲಿ ಇಂಥ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ಟಿವಿ9ಕನ್ನಡ ಡಿಜಿಟಲ್ನಿಂದ ಪ್ರಮುಖ ಖಾಸಗಿ ಬ್ಯಾಂಕ್ವೊಂದರ ಅಧಿಕಾರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಬ್ಬ ಅಧಿಕಾರಿ ಮತ್ತು ಎಸ್ಬಿಐ ಹೌಸಿಂಗ್ ಲೋನ್ಗೆ ವಿಮೆ ಮಾಡಿಸುವ ಏಜೆಂಟರೊಬ್ಬರನ್ನು ಮಾತನಾಡಿಸಿ, ಈ ವರದಿಯನ್ನು ನಿಮ್ಮ ಮುಂದೆ ಇಡಲಾಗುತ್ತಿದೆ. ಆ ಮೂಲಕ ಹೌಸಿಂಗ್ ಲೋನ್ ಪಡೆಯುವಾಗ ಉದ್ಭವಿಸುವ ಗೊಂದಲ ನಿವಾರಣೆ ಆಗುತ್ತದೆ.
ಸಹ ಅರ್ಜಿದಾರರಿರಬೇಕು ಅಥವಾ ಇನ್ಷೂರೆನ್ಸ್ ಖರೀದಿ
ಖಾಸಗಿ ಬ್ಯಾಂಕ್ನ ಗೃಹಸಾಲ ವಿಭಾಗದ ಅಧಿಕಾರಿ ಮಾತನಾಡಿ, ನಮ್ಮಲ್ಲಿ ಯಾರೇ ಗೃಹ ಸಾಲ ಪಡೆಯುವವರಾದರೂ ಕೋ ಅಪ್ಲಿಕೆಂಟ್ (ಸಹ ಅರ್ಜಿದಾರರು) ಇರಲೇಬೇಕು. ಒಂದು ವೇಳೆ ಇಲ್ಲ ಎಂದಾದಲ್ಲಿ ಲೈಫ್ ಇನ್ಷೂರೆನ್ಸ್ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು ಬೇರೆ ಆಯ್ಕೆಗಳಿಲ್ಲ ಎಂದರು. ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ ಏನೆಂದರೆ, ಗೃಹ ಸಾಲ ಎಂಬುದು ದೀರ್ಘಾವಧಿಯ ಸಾಲವಾಗಿರುತ್ತದೆ. ಒಂದು ವೇಳೆ ಅರ್ಜಿದಾರರು ಸಾವನ್ನಪ್ಪಿದಲ್ಲಿ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಸಾಲ ಹಿಂತಿರುಗಿಸಲಾಗದಿದ್ದಲ್ಲಿ ಆಗ ಸಹ ಅರ್ಜಿದಾರರು ಹೊಣೆ ಆಗುತ್ತಾರೆ. ಇನ್ನು ಯಾರೂ ಕೋ ಅಪ್ಲಿಕೆಂಟ್ ಇಲ್ಲ ಎಂದಾದರೆ ಲೈಫ್ ಇನ್ಷೂರೆನ್ಸ್ (ಜೀವ ವಿಮೆ) ಕಡ್ಡಾಯ ಎಂದು ಮಾಡಿದ್ದೇವೆ ಎಂದಷ್ಟೇ ಹೇಳಿದರು.
ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಮಾತನಾಡಿ, ನಿವೇಶನದ ಮೌಲ್ಯವನ್ನು ಕಳೆದು ಮನೆಯ ಬೆಲೆ ಎಷ್ಟು ಎಂದು ಲೆಕ್ಕ ಹಾಕಿಕೊಂಡು, ಮನೆಗೆ (ಗೃಹ) ವಿಮೆ ಮಾಡಿಸುವುದು ಕಡ್ಡಾಯ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಮಾಡಲಾಗಿದೆ. ಆದರೆ ಗೃಹ ಸಾಲ ಪಡೆಯುವವರಿಗೆ ಜೀವವಿಮೆ ಕಡ್ಡಾಯ ಎಂದೇನೂ ಮಾಡಿಲ್ಲ. ಆದರೆ ಲೈಫ್ ಇನ್ಷೂರೆನ್ಸ್ ಮಾಡಿಸಿಕೊಳ್ಳುವುದು ಉತ್ತಮ. ಗೃಹ ಸಾಲ ಪಡೆದ ವ್ಯಕ್ತಿ ಜೀವ ವಿಮೆ ಮಾಡಿಸಿಕೊಂಡ ನಂತರ, ಸಾಲ ಮರುಪಾವತಿ ಅವಧಿಯ ಮಧ್ಯದಲ್ಲಿ ಮೃತಪಟ್ಟರೆ ಬ್ಯಾಂಕ್ಗೆ ಹಿಂತಿರುಗಿಸಬೇಕಾದ ಸಾಲದ ಮೊತ್ತವನ್ನು ಮುರಿದುಕೊಂಡು, ಬಾಕಿ ಹಣವನ್ನು ಕುಟಂಬದವರಿಗೆ ವಾಪಸ್ ಮಾಡಲಾಗುತ್ತದೆ. ಇನ್ನು ಮನೆಗೆ ಇನ್ಷೂರೆನ್ಸ್ ಮಾಡಿಸುವುದು ಕಡ್ಡಾಯ. ಯಾವುದಾದರೂ ಕಾರಣಕ್ಕೆ ಮನೆಗೆ ಹಾನಿಯಾದಲ್ಲಿ ಇನ್ಷೂರೆನ್ಸ್ ಕವರ್ ಆಗುತ್ತದೆ ಎಂದು ಹೇಳಿದರು.
ಒಂದು ಸಲದ ಇನ್ಷೂರೆನ್ಸ್ ಪ್ರೀಮಿಯಂ
ಎಸ್ಬಿಐನ ಮನೆ ಇನ್ಷೂರೆನ್ಸ್ ಮಾಡಿಸುವ ಏಜೆಂಟ್ ಮಾತನಾಡಿ, ಮನೆಯ ಮೌಲ್ಯ 40 ಲಕ್ಷ ರೂಪಾಯಿ ಇದ್ದಲ್ಲಿ, 20 ವರ್ಷದ ಅವಧಿಗೆ ಮರುಪಾವತಿ ಮಾಡುವುದಕ್ಕೆ ಆಯ್ಕೆ ಮಾಡಿಕೊಂಡಲ್ಲಿ ಒಂದು ಸಲದ ಪ್ರೀಮಿಯಂ 22,090 ರೂಪಾಯಿ ಬರುತ್ತದೆ. ಪ್ರಾಕೃತಿಕ ವಿಕೋಪಗಳಾದ ಭೂಕಂಪ, ನೆರೆ, ಅಗ್ನಿ ಅವಘಡ ಇಂಥದ್ದರಿಂದ ಮನೆಗೆ ಹಾನಿ ಆದಲ್ಲಿ ಇನ್ಷೂರೆನ್ಸ್ ಕವರ್ ಆಗುತ್ತದೆ. ಇಪ್ಪತ್ತು ವರ್ಷದ ಅವಧಿಗೆ ಪೂರ್ತಿಯಾಗಿ ಇನ್ಷೂರೆನ್ಸ್ ಕವರ್ ಆಗುತ್ತದೆ. ಒಂದು ವೇಳೆ ಆ ಅವಧಿಯೊಳಗೆ ಸಾಲವನ್ನು ಪೂರ್ತಿಯಾಗಿ ಮರುಪಾವತಿ ಮಾಡಿದಲ್ಲಿ ಪ್ರೋರೇಟಾ ಆಧಾರದಲ್ಲಿ ಹಣವನ್ನು ಹಿಂತಿರುಗಿಸಲಾಗುತ್ತದೆ. ಎಸ್ಬಿಐ ಸುರಕ್ಷಾ ಲೈಫ್ ಇನ್ಷೂರೆನ್ಸ್ಗೂ ಇದೇ ಅನ್ವಯ ಆಗುತ್ತದೆ ಎಂದರು.
ಇನ್ನು ಹಣಕಾಸು ಸಲಹೆಗಾರರೊಬ್ಬರನ್ನು ಮಾತನಾಡಿಸಿದಾಗ, ಗೃಹ ಸಾಲ ಪಡೆಯುವ ಮೊದಲೇ ಟರ್ಮ್ ಇನ್ಷೂರೆನ್ಸ್ ಖರೀದಿ ಮಾಡಿದ್ದಲ್ಲಿ ಮತ್ತೆ ಹೊಸದಾಗಿ ಲೈಫ್ ಇನ್ಷೂರೆನ್ಸ್ ಖರೀದಿಸುವ ಅಗತ್ಯ ಇಲ್ಲ. ಆದರೆ ಮನೆಗೆ ಇನ್ಷೂರೆನ್ಸ್ ಪಡೆಯುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡ್ಡಾಯ ಮಾಡಿದೆ ಅಂತಾದ ಮೇಲೆ ಖರೀದಿಸಲೇಬೇಕು. ಮನೆಗೆ ಏನಾದರೂ ಹಾನಿ ಆದಲ್ಲಿ ಇದರಿಂದ ನಷ್ಟವನ್ನು ಕ್ಲೇಮ್ ಮಾಡಬಹುದು ಎಂದು ಹೇಳಿದರು.
ಸ್ಪಷ್ಟವಾದ ವಿವರಣೆ ನೀಡಬೇಕು
ಇನ್ನು ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದಿರುವ ರವಿ ಎಂಬುವರು ಮಾತನಾಡಿ, ಸಾಲ ಪಡೆಯುವಾಗ ಗೃಹ ಮತ್ತು ಲೈಫ್ ಇನ್ಷೂರೆನ್ಸ್ ಬಗ್ಗೆ ನನಗೆ ಸ್ಪಷ್ಟವಾದ ವಿವರಣೆಯನ್ನೇ ಹೇಳಿಲ್ಲ. ದೊಡ್ಡ ಮೊತ್ತದ ಹೌಸಿಂಗ್ ಲೋನ್ ಪಡೆಯುವಾಗ ಒಂದು ರೀತಿಯ ಮಾನಸಿಕವಾದ ಒತ್ತಡ ಇರುತ್ತದೆ. ಯಾವುದನ್ನಾದರೂ ಬೇಡ ಅಂದರೆ ಸಾಲವೇ ಕೊಡುವುದಿಲ್ಲವೇನೋ ಎಂಬ ಅಳುಕಿರುತ್ತದೆ. ಈಗ ನಾನು ಲೈಫ್ ಇನ್ಷೂರೆನ್ಸ್ ಸಹ ಕಟ್ಟಾಗಿದೆ. ಅದರ ಅಗತ್ಯ ನನಗೆ ಇರಲಿಲ್ಲ. ಈ ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ಮೂಡಬೇಕಿದೆ ಎಂದರು.
ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು
Published On - 4:28 pm, Thu, 25 March 21