ಡಿಎಚ್​ಎಫ್​ಎಲ್​ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು

ಪ್ರಧಾನಮಂತ್ರಿ ಆವಾಸ ಯೋಜನಾ ಸಬ್ಸಿಡಿ ವಿತರಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಡಿಎಚ್​ಎಫ್​ಎಲ್​ನಿಂದ 14,046 ಕೋಟಿ ರೂ. ಪಿಎಂಎವೈ ವಂಚನೆ; ಸಿಬಿಐನಿಂದ ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರ

Updated on: Mar 25, 2021 | 7:30 PM

ಕೇಂದ್ರೀಯ ತನಿಖಾ ದಳವು (ಸಿಬಿಐ) ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್​ಎಫ್​ಎಲ್) ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿದೆ. ಪ್ರಧಾನಮಂತ್ರಿ ಆವಾಸ ಯೋಜನಾ ಅಡಿಯಲ್ಲಿ 2.60 ಲಕ್ಷ ನಕಲಿ ಗೃಹ ಸಾಲ ಖಾತೆಯನ್ನು ಸೃಷ್ಟಿಸಿದ ಆರೋಪದಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವರ್ತಕರು (ಪ್ರಮೋಟರ್ಸ್) ವಂಚನೆ ಮಾಡಿ, ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ರೂ. 14,046 ಕೋಟಿ ರೂಪಾಯಿ ತನಕ ಅನುಕೂಲ ಮಾಡಿಕೊಂಡಿದ್ದಾರೆ. ಸಿಬಿಐಗೆ ಕಂಡುಬಂದಿರುವ ಪ್ರಕಾರ, ಒಟ್ಟು 14,046 ಕೋಟಿ ರೂಪಾಯಿ ಮೊತ್ತದ ಪೈಕಿ ರೂ. 11,755.79 ಕೋಟಿಯನ್ನು ಶೆಲ್ ಕಂಪೆನಿಗಳ ಹೆಸರಲ್ಲಿ ಸೃಷ್ಟಿಸಿದ ಖಾತೆಗಳಿಗೆ ತಿರುಗಿಸಲಾಗಿದೆ. ಕೇಂದ್ರದಿಂದ ಪ್ರಧಾನಮಂತ್ರಿ ಆವಾಸ ಯೋಜನಾ ಅಡಿಯಲ್ಲಿ ಡಿಎಚ್​ಎಫ್​ಎಲ್ 1,887 ಕೋಟಿ ರೂ. ಸಬ್ಸಿಡಿ ಪಡೆದುಕೊಂಡಿದೆ.

ಡಿಎಚ್​ಎಫ್​ಎಲ್ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಅವರ ವಿರುದ್ಧ ಈಗಾಗಲೇ ಯೆಸ್ ಬ್ಯಾಂಕ್ ಹಗರಣ ಮತ್ತು ಯು.ಪಿ. ಪವರ್ ಕಾರ್ಪೊರೇಷನ್ ಹಗರಣದ ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ. ಡಿಎಚ್​ಎಫ್​ಎಲ್​ನಲ್ಲಿ ಫೊರೆನ್ಸಿಕ್ ಆಡಿಟ್ ನಡೆಸಿದ ಗ್ರಾಂಟ್ ಥೋರ್ನ್​ಟಾನ್ ಬಹಿರಂಗ ಪಡಿಸಿದಂತೆ, ಸಿಬಿಐನಿಂದ ಪ್ರಕರಣಗಳು ದಾಖಲಾಗಿವೆ. ಈ ಸಾಲಗಳನ್ನು ಬಹುತೇಕ ಆರ್ಥಿಕ ದುರ್ಬಲ ವರ್ಗದವರು, ಕಡಿಮೆ ಮತ್ತು ಮಧ್ಯಮ ಆದಾಯ ಗುಂಪಿನವರಿಗೆ ನೀಡಲಾಗಿದೆ.

ಡಿಎಚ್​ಎಫ್​ಎಲ್​ನಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಫೊರೆನ್ಸಿಕ್ ಆಡಿಟ್ ನಡೆಸಿದ ಗ್ರಾಂಟ್ ಥೋರ್ನ್​ಟಾನ್ ವರದಿ ನೀಡಿದ ಮೇಲೆ ಮಾರ್ಚ್ 15ನೇ ತಾರೀಕಿನಂದು ಸಿಬಿಐನಿಂದ ಪ್ರಕರಣ ದಾಖಲಿಸಲಾಗಿತ್ತು. ಸಿಬಿಐನ ಎಫ್​ಐಆರ್ ಪ್ರಕಾರ, ಡಿಎಚ್​ಎಫ್​ಎಲ್ 88,651 ಪ್ರಕರಣಗಳನ್ನು ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಪ್ರೊಸೆಸ್ ಮಾಡಿದೆ. ಕ್ರೆಡಿಟ್ ಲಿಂಕ್ಡ್ ಇಂಟರೆಸ್ಟ್ ಸಬ್ಸಿಡಿಯನ್ನು ನೀಡಲಾಗಿದೆ. ಡಿಎಚ್​ಎಫ್​ಎಲ್​ನಿಂದ ವಿತರಣೆ ಮಾಡಿದ ಗರಿಷ್ಠ ಮೊತ್ತ ತಲಾ 24 ಲಕ್ಷ ರೂಪಾಯಿ. ಈ ಪೈಕಿ ಬಹುತೇಕ ಸಾಲವನ್ನು ನೀಡಿರುವುದು ಕೊಳೆಗೇರಿ ಪುನರ್​ಅಭಿವೃದ್ಧಿ ಯೋಜನೆಗಾಗಿ. ಡಿಎಚ್​ಎಫ್​ಎಲ್ ಸೃಷ್ಟಿ ಮಾಡಿರುವ ದಾಖಲಾತಿಗಳಿಂದ ಇದು ತಿಳಿದುಬರುತ್ತಿದೆ.

ಮೂಲಗಳ ಪ್ರಕಾರ, ಬಡ್ಡಿ ಪ್ರೋತ್ಸಾಹಧನ ವರ್ಷಕ್ಕೆ ಶೇಕಡಾ 3ರಿಂದ 6.5 ಆಗುತ್ತದೆ. ಮತ್ತು ಸಬ್ಸಿಡಿಯನ್ನು ಮುಂಚಿತವಾಗಿ ನೀಡುವ ಮೊತ್ತ ಕ್ರಮವಾಗಿ ರೂ. 2,30,156ರಿಂದ ರೂ. 2,67,280 ಆಗುತ್ತದೆ. ಆ ನಂತರ ಮೊತ್ತವನ್ನು ಕೇಂದ್ರ ಸರ್ಕಾರವು ಬ್ಯಾಂಕ್​ಗಳು ಮತ್ತು ಎನ್​ಬಿಎಫ್​ಸಿಗಳಿಗೆ ನೀಡುತ್ತವೆ.

ಇದನ್ನೂ ಓದಿ: ಪ್ರಧಾನಮಂತ್ರಿ ಆವಾಸ ಯೋಜನಾ CLSS ಸ್ಕೀಮ್ ಎಂಐಜಿ- I, ಎಂಐಜಿ- IIಗೆ ಮಾರ್ಚ್ 31 ಕೊನೆ ದಿನ