ಪ್ರಧಾನಮಂತ್ರಿ ಆವಾಸ ಯೋಜನಾ CLSS ಸ್ಕೀಮ್ ಎಂಐಜಿ- I, ಎಂಐಜಿ- IIಗೆ ಮಾರ್ಚ್ 31 ಕೊನೆ ದಿನ

ಪ್ರಧಾನಮಂತ್ರಿ ಆವಾಸ ಯೋಜನಾ (PMAY) ಎಂಐಜಿ- I, ಎಂಐಜಿ- IIಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್​ನಲ್ಲಿ ಸಬ್ಸಿಡಿ ಪಡೆಯುವುದಕ್ಕೆ ಮಾರ್ಚ್ 31, 2021 ಕೊನೆ ದಿನವಾಗಿದೆ.

ಪ್ರಧಾನಮಂತ್ರಿ ಆವಾಸ ಯೋಜನಾ CLSS ಸ್ಕೀಮ್ ಎಂಐಜಿ- I,  ಎಂಐಜಿ- IIಗೆ ಮಾರ್ಚ್ 31 ಕೊನೆ ದಿನ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Mar 23, 2021 | 3:46 PM

ಪ್ರಧಾನಮಂತ್ರಿ ಆವಾಸ ಯೋಜನಾ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್​ಎಸ್​ಎಸ್) ಎಂಐಜಿ- I ಹಾಗೂ ಎಂಐಜಿ- II ವಿಭಾಗದಲ್ಲಿ ಮನೆ ಖರೀದಿ ಮಾಡುವವರಿಗೆ ಪ್ರೋತ್ಸಾಹ ಧನವನ್ನು ಪಡೆಯುವುದಕ್ಕೆ ಮಾರ್ಚ್ 31, 2021 ಕೊನೆ ದಿನವಾಗಿದೆ. ಸರ್ಕಾರ ಏನಾದರೂ ಇದೇ ದಿನವನ್ನು ಕೊನೆ ಎಂದು ಘೋಷಣೆ ಮಾಡದಿದ್ದಲ್ಲಿ ಮಾರ್ಚ್ 31 ಅಂತಿಮ ಗಡುವಾಗಿರುತ್ತದೆ. ಇತರ ವಿಭಾಗಗಳಾದ ಎಲ್​ಐಜಿ/ಇಡಬ್ಲ್ಯುಎಸ್​ಗೆ ಕೊನೆ ದಿನ ಮಾರ್ಚ್ 31, 2022ರ ತನಕ ಇದೆ. ಮಧ್ಯಮ ಆದಾಯ ಗುಂಪು (ಎಂಐಜಿ)ಗಳಿಗೆ ಇರುವ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್​ಎಸ್​ಎಸ್) ಅನ್ನು ಜನವರಿ 1, 2017ರಿಂದ ಪರಿಚಯಿಸಲಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಐಜಿ I ಹಾಗೂ ಎಂಐಜಿ II ಎರಡೂ ವಿಭಾಗಕ್ಕೂ ಪ್ರಧಾನಮಂತ್ರಿ ಆವಾಸ ಯೋಜನಾ (ಪಿಎಂಎವೈ) ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಅನ್ನು ಮಾರ್ಚ್ 31, 2021ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಘೋಷಿಸಿದ್ದರು. ಯಾರು ಡೆವಲಪರ್​ಗಳಿಂದ ಮನೆ ಖರೀದಿಸುತ್ತಾರೋ ಅಥವಾ ಮಾರುಕಟ್ಟೆಯಲ್ಲಿ ರೀಸೇಲ್ ಮಾಡುವಾಗ ಸೆಕೆಂಡರಿ ಖರೀದಿ ಎಂದು ಮಾಡುತ್ತಾರೋ ಅಂಥವರಿಗೆ ಪಿಎಂಎವೈ ಸಿಗುತ್ತದೆ. ಅದೇ ರೀತಿ ಮನೆ ನಿರ್ಮಾಣಕ್ಕೆ ಸಾಲ ಪಡೆಯುತ್ತಿದ್ದರೂ ದೊರೆಯುತ್ತದೆ.

ರೂ. 2,35,068 ಹಾಗೂ ರೂ. 2,30,156 ಸಬ್ಸಿಡಿ ಯಾರಿಗೆ ಆದಾಯ 6 ರಿಂದ 12 ಲಕ್ಷ ರೂಪಾಯಿ ಇರುತ್ತದೋ ಅವರು ಎಂಐಜಿ Iಗೆ ಬರುತ್ತಾರೆ. ಅವರಿಗೆ 9 ಲಕ್ಷ ರೂಪಾಯಿಯೊಳಗಿನ ಸಾಲಕ್ಕೆ ಶೇಕಡಾ 4ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಅದೇ ರೀತಿ ಯಾರ ಆದಾಯ 12ರಿಂದ 18 ಲಕ್ಷ ರೂಪಾಯಿಯೊಳಗೆ ಬರುತ್ತದೋ ಅವರು ಎಂಐಜಿ IIಗೆ ಬರುತ್ತಾರೆ. 9 ಲಕ್ಷ ರೂಪಾಯಿಯೊಳಗೆ ಸಾಲಕ್ಕೆ ಅವರಿಗೆ ಬಡ್ಡಿ ಸಬ್ಸಿಡಿ ಶೇಕಡಾ 3ರಷ್ಟು ಸಿಗುತ್ತದೆ. ಅಂದರೆ, ಎಂಐಜಿ Iಗೆ ಸಬ್ಸಿಡಿ ಮೊತ್ತ ರೂ. 2,35,068 ಹಾಗೂ ಎಂಐಜಿ IIಗೆ ಸಬ್ಸಿಡಿ ಮೊತ್ತ ರೂ. 2,30,156 ದೊರೆಯುತ್ತದೆ.

ಪತಿ, ಪತ್ನಿ ಹಾಗೂ ಅವಿವಾಹಿತ ಮಕ್ಕಳು ಇರುವವರನ್ನು ಕುಟುಂಬ ಎಂದು ಪರಿಗಣಿಸಲಾಗುವುದು. ಅವರು ಈ ಸಿಎಲ್​ಎಸ್​ಎಸ್ ಅನುಕೂಲ ಪಡೆಯಬಹುದು. ಆದರೆ ಫಲಾನುಭವಿ ಕುಟುಂಬಕ್ಕೆ ಆತನ ಅಥವಾ ಆಕೆಯ ಅಥವಾ ಕುಟುಂಬ ಸದಸ್ಯರ ಯಾರದೇ ಹೆಸರಲ್ಲಿ ಭಾರತದ ಯಾವುದೇ ಭಾಗದಲ್ಲಿ ಪಕ್ಕಾ ಮನೆ ಇರಬಾರದು. ಇನ್ನು ಈ ಯೋಜನೆಯ ಮೂಲಕ ಸಾಲ ಪಡೆದು ಮನೆ ಕಟ್ಟುವುದಾದರೆ ಪಿಎಂಎವೈ ಮಾರ್ಗದರ್ಶಿ ಸೂತ್ರದ ಪ್ರಕಾರ, ಕುಟುಂಬದಲ್ಲಿನ ಮಹಿಳಾ ಒಡತಿ ಹೆಸರಲ್ಲಿ ಅಥವಾ ಪುರುಷನ ಜತೆಗೆ ಜಂಟಿ ಆ ಮಹಿಳೆಯ ಹೆಸರೂ ಸೇರಿ ಆಸ್ತಿ ಇರಬೇಕು.

ಪಿಎಂಎವೈ ಮಾರ್ಗದರ್ಶಿ ಸೂತ್ರದ ಪ್ರಕಾರ, ದುಡಿಯುವ ವಯಸ್ಕರ ಸದಸ್ಯರನ್ನು (ವೈವಾಹಿಕ ಸ್ಥಾನಮಾನ ಏನಿದ್ದರೂ ಪರವಾಗಿಲ್ಲ) ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಲಾಗುವುದು. ಆದರೆ ಅವರಿಗೆ ಭಾರತದ ಯಾವುದೇ ಭಾಗದಲ್ಲಿ ಪಕ್ಕಾ (ಸರ್ವ ಋತು) ಮನೆಯನ್ನು ಇರಬಾರದು. ಮಕ್ಕಳು ವಿವಾಹಿತರೋ ಅವಿವಾಹಿತರೋ ಏನೇ ಆಗಿರಲಿ, ಪೋಷಕರ ಸ್ವಂತ ಮನೆಯಲ್ಲಿ ಮಕ್ಕಳು ವಾಸವಿದ್ದರೆ, ಅವರು ದುಡಿಮೆ ಮಾಡುತ್ತಿದ್ದು ಯಾವುದೇ ಸ್ವಂತ ಮನೆ ಹೊಂದಿಲ್ಲ ಎಂದಾದಲ್ಲಿ ಪಿಎಂಎವೈ ಆರಿಸಿಕೊಳ್ಳಬಹುದು.

ಇದನ್ನೂ ಓದಿ: Hong Kong real estate: ಹಾಂಕಾಂಗ್​ನಲ್ಲಿ ಈ ಮನೆಯ ತಿಂಗಳ ಬಾಡಿಗೆ 1.26 ಕೋಟಿ ರೂಪಾಯಿ