ನವದೆಹಲಿ, ಜನವರಿ 1: ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ (NDA government) ಎರಡು ಅವಧಿ ಪೂರ್ಣಗೊಳಿಸುತ್ತಿದೆ. ಹಿಂದಿನ ಯುಪಿಎ ಮೈತ್ರಿಕೂಟ ಕೂಡ 2004ರಿಂದ 2014ರವರೆಗೂ ಎರಡು ಅವಧಿ ಆಡಳಿತ ನಡೆಸಿತ್ತು. ಯುಪಿಎ 10 ವರ್ಷ, ಎನ್ಡಿಎ 10 ವರ್ಷ ಆಡಳಿತದ ಬಗ್ಗೆ ತುಲನೆ ಮಾಡುವುದು ಕುತೂಹಲ ಮೂಡಿಸುತ್ತದೆ. ಇವೆರಡು ಮೈತ್ರಿಕೂಟಗಳ ಆಡಳಿತದಲ್ಲಿ ಒಂದು ಪ್ರಮುಖ ವ್ಯತ್ಯಾಸ ಕಂಡು ಬಂದಿರುವುದು ಹಣಕಾಸು ನಿರ್ವಹಣೆ ವಿಚಾರದಲ್ಲಿ. ದಿ ಪ್ರಿಂಟ್ ಜಾಲತಾಣದಲ್ಲಿ ಈ ಬಗ್ಗೆ ಒಂದು ತುಲನಾತ್ಮಕವಾಗಿ ಮಾಹಿತಿ ನೀಡಿರುವ ಪುಟ್ಟ ಲೇಖನ ಇತ್ತೀಚೆಗೆ ಪ್ರಕಟವಾಗಿದೆ. ಅದರ ಪ್ರಕಾರ, ಬಂಡವಾಳ ವೆಚ್ಚ (Capex- capital expenditure) ಮತ್ತು ಸಬ್ಸಿಡಿ ವಿಚಾರದಲ್ಲಿ ಎರಡೂ ಸರ್ಕಾರಗಳ ವಿಭಿನ್ನ ದೃಷ್ಟಿಕೋನ ವ್ಯಕ್ತವಾಗುತ್ತದೆ. 20 ವರ್ಷಗಳ ಅವಧಿಯ ಬಜೆಟ್ಗಳನ್ನು ಅವಲೋಕಿಸಿ ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ಹೆಕ್ಕಲಾಗಿದೆ.
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚ ಕಡಿಮೆ ಆದರೆ, ಸಬ್ಸಿಡಿಗಳ ಪ್ರಮಾಣ ಹೆಚ್ಚಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಬಂಡವಾಳ ವೆಚ್ಚ ಹೆಚ್ಚಳವಾದರೆ, ಸಬ್ಸಿಡಿ ಪ್ರಮಾಣ ಗಣನೀಯವಾಗಿ ಇಳಿದಿದೆ.
ಇದನ್ನೂ ಓದಿ: FPI Investments: 2023ರಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ಹರಿದುಬಂದಿದೆ ಭರಪೂರ ಎಫ್ಪಿಐ ಹಣ; 2.4 ಲಕ್ಷ ಕೋಟಿ ರೂ ಹೂಡಿಕೆ
2023-24ರ ಹಣಕಾಸು ವರ್ಷದ ಅವಧಿಯಲ್ಲಿ ಸರ್ಕಾರದ ಬಂಡವಾಳ ವೆಚ್ಚವು ಅದರ ಒಟ್ಟಾರೆ ವೆಚ್ಚದ ಶೇ. 18.6ರಷ್ಟು ಇರಲಿದೆ. ಇದು ಕಳೆದ ಎರಡು ದಶಕದಲ್ಲೇ ಅತಿ ಹೆಚ್ಚಿನ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಎನ್ನಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಶುರುವಾದ 2020-21ರಿಂದಲೂ ಸರ್ಕಾರದಿಂದ ಬಂಡವಾಳ ವೆಚ್ಚ ಸತತವಾಗಿ ಏರುತ್ತಾ ಬಂದಿದೆ.
ಹಾಗೆಯೇ, ಸಾಂಕ್ರಾಮಿಕ ವರ್ಷ ಹೊರತುಪಡಿಸಿದರೆ ಸರ್ಕಾರದಿಂದ ಸಬ್ಸಿಡಿಗಳಿಗೆ ಆಗುತ್ತಿರುವ ವೆಚ್ಚ ಇಳಿಕೆ ಆಗುತ್ತಿದೆ. 2014-15ರಿಂದಲೂ ಈ ಟ್ರೆಂಡ್ ಇದೆ. ಗ್ಯಾಸ್ ಸಬ್ಸಿಡಿ ಇರಬಹುದು ಒಟ್ಟಾರೆ ಸಬ್ಸಿಡಿಗಳನ್ನು ಸರ್ಕಾರ ಕಡಿಮೆಗೊಳಿಸುತ್ತಿದೆ. ಆದರೆ, ಸಬ್ಸಿಡಿ ನೀಡುವಿಕೆಯಲ್ಲೂ ಕೆಲ ಆದ್ಯತೆಗಳನ್ನು ಅನುಸರಿಸುತ್ತಿದೆ. ಉದಾಹರಣೆಗೆ, ಎಲ್ಪಿಜಿ ಸಬ್ಸಿಡಿ ವಿಚಾರ. ಸರ್ಕಾರ ಗೃಹಬಳಕೆಯ ಅನಿಲಕ್ಕೆ ನೀಡುವ ಸಬ್ಸಿಡಿ ಮೊತ್ತವನ್ನು 823 ಕೋಟಿ ರೂಗೆ ಇಳಿಸಿದೆ. ಆದರೆ, ಬಡವರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುವ ಉಜ್ವಲ ಗ್ಯಾಸ್ ಯೋಜನೆಗೆ ಸರ್ಕಾರ ಕೊಡುವ ಧನಸಹಾಯ ಅಥವಾ ಸಬ್ಸಿಡಿ 6,110 ಕೋಟಿ ರೂಗೆ ಏರಿಸಿದೆ.
ಇದನ್ನೂ ಓದಿ: Financial Changes: ಬ್ಯಾಂಕ್ ಲಾಕರ್ನಿಂದ ಸಿಮ್ ಕಾರ್ಡ್ವರೆಗೆ, ಜ. 1ರಿಂದ ಆಗುವ ಈ ಹಣಕಾಸು ಬದಲಾವಣೆಗಳು ತಿಳಿದಿರಲಿ
ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಭಾರತ ಉತ್ತಮ ಸಾಧನೆ ಮಾಡಲು ನೆರವಾದ ಹಲವು ಅಂಶಗಳಲ್ಲಿ ಬಂಡವಾಳ ವೆಚ್ಚವೂ ಒಂದು. ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಾಗಿದ್ದು ಆರ್ಥಿಕತೆಗೆ ಪುಷ್ಟಿ ಕೊಟ್ಟಿದೆ. ಅದೇ ವೇಳೆ ಸಬ್ಸಿಡಿ ಹೊರೆ ಸರ್ಕಾರದ ಹೆಗಲಿಂದ ಕೆಳಗೆ ಇಳಿದಿದ್ದು ಇನ್ನಷ್ಟು ಅನುಕೂಲ ಮಾಡಿಕೊಟ್ಟಿತು ಎಂಬುದು ಆರ್ಥಿಕ ತಜ್ಞರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ