ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್​ನ ಷೇರುಬೆಲೆ ಹೆಚ್ಚುತ್ತಿರುವುದು ಯಾಕೆ? ಮುಕೇಶ್ ತಮ್ಮನ ಅದೃಷ್ಟ ಖುಲಾಯಿಸಿತಾ?

|

Updated on: Jan 01, 2024 | 1:20 PM

Reliance Power Share Price: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್ ಸಂಸ್ಥೆಯ ಷೇರುಬೆಲೆ 9 ತಿಂಗಳಲ್ಲಿ 9 ರೂನಿಂದ 25 ರೂಗೆ ಏರಿದೆ. ವಿದ್ಯುತ್ ದರಗಳನ್ನು ಸರ್ಕಾರಗಳು ಹೆಚ್ಚಿಸಿರುವುದರಿಂದ ಎಲ್ಲಾ ದೊಡ್ಡ ಪವರ್ ಕಂಪನಿಗಳ ಷೇರುಗಳು ಬೇಡಿಕೆ ಪಡೆದಿವೆ. ಬ್ರೋಕರೇಜ್ ಕಂಪನಿಗಳು ರಿಲಾಯನ್ಸ್ ಪವರ್​ಗೆ ಶಾರ್ಟ್ ಟರ್ಮ್ ಪ್ರೈಸ್ ಟಾರ್ಗೆಟ್ ಆಗಿ 28 ರೂ ಅಥವಾ 30 ರೂ ಎಂದು ನಿಗದಿ ಮಾಡಿವೆ.

ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್​ನ ಷೇರುಬೆಲೆ ಹೆಚ್ಚುತ್ತಿರುವುದು ಯಾಕೆ? ಮುಕೇಶ್ ತಮ್ಮನ ಅದೃಷ್ಟ ಖುಲಾಯಿಸಿತಾ?
ಅನಿಲ್ ಅಂಬಾನಿ
Follow us on

ನವದೆಹಲಿ, ಜನವರಿ 1: 2023ರ ವರ್ಷದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹಲವು ಮಲ್ಟಿಬ್ಯಾಗರ್ ಷೇರುಗಳು (multibagger share) ಹೊರಹೊಮ್ಮಿವೆ. ಇದರಲ್ಲಿ ರಿಲಾಯನ್ಸ್ ಪವರ್ (Reliance Power) ಕಂಪನಿಯ ಷೇರು ಒಂದು. ರಿಲಾಯನ್ಸ್ ಪವರ್ ಮುಕೇಶ್ ಅಂಬಾನಿಯದ್ದಲ್ಲ, ಅವರ ತಮ್ಮ ಅನಿಲ್ ಅಂಬಾನಿ ಮಾಲಕತ್ವದ ಕಂಪನಿ. ರಿಲಾಯನ್ಸ್ ಪವರ್ ಷೇರುಬೆಲೆ ಇಂದು ಸೋಮವಾರ (ಜ. 1) ಬೆಳಗಿನ ವಹಿವಾಟಿನಲ್ಲಿ 24.15 ರೂ ಮಟ್ಟಕ್ಕೆ ಹೋಗಿತ್ತು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಇದರ ಷೇರು ಬೆಲೆ ಒಂದು ಹಂತದಲ್ಲಿ 9 ರುಪಾಯಿಗೆ ಕುಸಿದಿತ್ತು. ಏಪ್ರಿಲ್​ನಿಂದ ಈಚೆ ಇದು ಅಕ್ಷರಶಃ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದ್ದು, ಸತತವಾಗಿ ಏರುತ್ತಿದೆ.

ರಿಲಾಯನ್ಸ್ ಪವರ್ ಓಟಕ್ಕೆ ಏನು ಕಾರಣ?

ಸಾಲಗಳ ಮೇಲೆ ಸಾಲಗಳನ್ನು ಹೊಂದಿ ದಿವಾಳಿ ಎದ್ದಿರುವ ಅನಿಲ್ ಅಂಬಾನಿ ಅವರ ಮಾಲಕತ್ವದ ಈ ಕಂಪನಿಯ ಷೇರಿಗೆ ಯಾಕಿಷ್ಟು ಬೇಡಿಕೆ? ತಜ್ಞರ ಪ್ರಕಾರ ರಿಲಾಯನ್ಸ್ ಪವರ್ ಮೇಲೆ ಹೂಡಿಕೆದಾರರಿಗೆ ವಿಶೇಷ ಮೋಹವೇನೂ ಹುಟ್ಟಿಲ್ಲ. ವಿದ್ಯುತ್ ವಲಯದ ಎಲ್ಲಾ ಕಂಪನಿಗಳ ಷೇರುಗಳು ಬೇಡಿಕೆ ಪಡೆದಿವೆ. ಇದಕ್ಕೆ ಕಾರಣ ವಿದ್ಯುತ್ ದರ ಹೆಚ್ಚಳವಾಗಿರುವುದು. ಈ ವಿದ್ಯುತ್ ದರ ಹೆಚ್ಚಳದಿಂದ ವಿದ್ಯುತ್ ಕಂಪನಿಗಳಿಗೆ ಹೆಚ್ಚು ಲಾಭ ಆಗುತ್ತದೆ. ಹೀಗಾಗಿ, ದೊಡ್ಡ ವಿದ್ಯುತ್ ಕಂಪನಿಗಳ ಷೇರುಗಳ ಮೇಲೆ ಹೂಡಿಕೆದಾರರು ಆಸಕ್ತರಾಗಿದ್ದಾರೆ. ರಿಲಾಯನ್ಸ್ ಪವರ್ ಮಾತ್ರವಲ್ಲ, ಟಾಟಾ, ಅದಾನಿ ಮೊದಲಾದವರ ಕಂಪನಿಗಳ ಷೇರುಗಳ ಬೆಲೆಯೂ ಹೆಚ್ಚುತ್ತಿದೆ.

ಇದನ್ನೂ ಓದಿ: IPOs: 2023ರಲ್ಲಿ ಅತಿಹೆಚ್ಚು ಐಪಿಒಗಳ ಬಿಡುಗಡೆ; 2024ರಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ

ರಿಲಾಯನ್ಸ್ ಪವರ್​ನ ಷೇರುಬೆಲೆ ಸ್ಥಿರವಾಗಿ ಹೆಚ್ಚಲು ಇನ್ನೊಂದು ಕಾರಣ ಇದೆ. ಅದು ಅರುಣಾಚಲಪ್ರದೇಶದಲ್ಲಿ 1,200 ಮೆಗಾವ್ಯಾಟ್ ಜಲವಿದ್ಯುತ್ ಘಟಕ ಅಭಿವೃದ್ಧಿ ಯೋಜನೆಯ ಹಕ್ಕನ್ನು ರಿಲಾಯನ್ಸ್ ಪವರ್ ಸಂಸ್ಥೆ 128.39 ಕೋಟಿ ರುಪಾಯಿ ಮೊತ್ತಕ್ಕೆ ಟಿಎಚ್​ಡಿಸಿಗೆ ಮಾರಿದೆ. ಈ ಡೀಲ್​ನಿಂದ ರಿಲಾಯನ್ಸ್ ಪವರ್ ಸಂಸ್ಥೆಯ ಆರೋಗ್ಯ ಇನ್ನಷ್ಟು ಸುಸ್ಥಿತಿಗೆ ಬರುವ ನಿರೀಕ್ಷೆ ಇದೆ.

ಈಗ ರಿಲಾಯನ್ಸ್ ಪವರ್ ಷೇರು ಖರೀದಿಸಬಹುದಾ?

ಕೆಲ ಷೇರು ಬ್ರೋಕರೇಜ್ ಕಂಪನಿಗಳು ರಿಲಾಯನ್ಸ್ ಪವರ್ ಷೇರಿಗೆ ಶಾರ್ಟ್ ಟರ್ಮ್ ಟಾರ್ಗೆಟ್ ಆಗಿ 30 ರೂವರೆಗೂ ನೀಡಿವೆ. ಅಂದರೆ, ಇದರ ಷೇರುಬೆಲೆ 30 ರೂವರೆಗೂ ಹೋಗಬಹುದು. ಇನ್ನು, ಸ್ಟಾಪ್ ಲಾಸ್ ಆಗಿ 21 ರುಪಾಯಿ ಎಂದ ನಿಗದಿ ಮಾಡಿವೆ. ಅಂದರೆ, 21 ರೂಗೆ ಇದರ ಬೆಲೆ ಇಳಿದರೆ ಷೇರುಗಳನ್ನು ಮಾರಬೇಕೆಂಬುದು ಇದರ ಅರ್ಥ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ