ಸಗಟು ದರ ಆಧಾರಿತ ಹಣದುಬ್ಬರವು (Wholesale Price Based Inflation) ಸತತ ಎರಡನೇ ತಿಂಗಳಾದ ಜನವರಿಯಲ್ಲಿ ಇಳಿಕೆಯಾಗಿ, ಶೇ 12.96 ತಲುಪಿದೆ. ಆಹಾರ ಬೆಲೆಗಳ ಏರಿಕೆ ಹೊರತಾಗಿಯೂ ಇಂಥದ್ದೊಂದು ಬೆಳವಣಿಗೆ ಆಗಿದೆ ಎಂದು ಸೋಮವಾರದಂದು ಸರ್ಕಾರದಿಂದ ತಿಳಿಸಲಾಗಿದೆ. 2021ರ ಏಪ್ರಿಲ್ನಿಂದ ಆರಂಭಗೊಂಡಂತೆ ಸತತ ಹತ್ತನೇ ತಿಂಗಳು ಸಗಟು ದರ ಆಧಾರಿತ ಹಣದುಬ್ಬರವು ಎರಡಂಕಿಯನ್ನು ದಾಖಲಿಸಿತು. 2021ರ ಡಿಸೆಂಬರ್ನಲ್ಲಿ ಹಣದುಬ್ಬರ ದರವು ಶೇ 13.56ರಷ್ಟಿತ್ತು. ಅಂದಹಾಗೆ 2021ರ ಜನವರಿಯಲ್ಲಿ ಇದು ಶೇ 2.51ರಷ್ಟಿತ್ತು. ಆಹಾರ ವಸ್ತುಗಳಲ್ಲಿನ ಹಣದುಬ್ಬರವು 2021ರ ಡಿಸೆಂಬರ್ನಲ್ಲಿ ಶೇ 9.56ರಷ್ಟು ಇದ್ದದ್ದು 2022ರ ಜನವರಿಯಲ್ಲಿ ಶೇ 10.33ಕ್ಕೆ ಏರಿಕೆ ಆಗಿದೆ. ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿ, ಶೇ 38.45 ಆಗಿದ್ದು, ಹಿಂದಿನ ತಿಂಗಳಲ್ಲಿ ಶೇ 31.56ರಷ್ಟಿತ್ತು. ಆಹಾರ ವಸ್ತುಗಳ ವಿಭಾಗದಲ್ಲಿ ಬೇಳೆ ಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಭತ್ತದ ಬೆಲೆಯಲ್ಲಿ ತಿಂಗಳಿಂದ ತಿಂಗಳಿಗೆ ಬೆಲೆ ಏರಿಕೆ ಆಗಿದೆ. ಇನ್ನು ಮೊಟ್ಟೆ, ಮಾಂಸ, ಮೀನು ಇವುಗಳ ಹಣದುಬ್ಬರ ಶೇ 9.85ರಷ್ಟಿದೆ. ಆಲೂಗಡ್ಡೆ ಮತ್ತು ಈರುಳ್ಳಿ ಕ್ರಮವಾಗಿ (-) 14.45 ಮತ್ತು (-) 15.98 ಇವೆ.
2022ರ ಜನವರಿಯಲ್ಲಿ ಹಣದುಬ್ಬರ ದರ ಹೆಚ್ಚಾಗಲು ಮುಖ್ಯ ಕಾರಣ ಏನೆಂದರೆ, ಖನಿಜಯುಕ್ತ ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪ್ರಾಥಮಿಕ ಲೋಹ, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಆಹಾರ ಪದಾರ್ಥಗಳು ಮುಂತಾವುದರ ಬೆಲೆ ಏರಿಕೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022ರ ಜನವರಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ, ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ತಯಾರಿಕೆ ಉತ್ಪನ್ನಗಳ ಹಣದುಬ್ಬರ ವಸ್ತುಗಳು ಜನವರಿಯಲ್ಲಿ ಶೇ 9.42ರಷ್ಟಿತ್ತು. ಈ ಹಿಂದಿನ ತಿಂಗಳು ಶೇ 10.62ರಷ್ಟು ಇತ್ತು.
ಇಂಧನ ಹಾಗೂ ವಿದ್ಯುತ್ ಬ್ಯಾಸ್ಕೆಟ್ ಜನವರಿಯಲ್ಲಿ ಶೇ 32.27ರಷ್ಟು ಬೆಲೆ ಏರಿಕೆ ಇತ್ತು. ಡಿಸೆಂಬರ್ನಲ್ಲಿ ಇದ್ದ ಶೇ 32.30ಗೆ ಹೋಲಿಸಿದರೆ ಕಡಿಮೆ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕಳೆದ ವಾರ ಅದರ ಮುಖ್ಯ ರೆಪೋ ದರವನ್ನು ಹಾಗೇ ಉಳಿಸಿತು- ಇದೇ ದರದಲ್ಲಿ ಬ್ಯಾಂಕ್ಗಳು ಬ್ಯಾಂಕ್ಗಳಿಗೆ ಅಲ್ಪಾವಧಿಯಲ್ಲಿ ಹಣವನ್ನು ನೀಡುತ್ತವೆ. ಸತತವಾಗಿ ಹತ್ತನೇ ಬಾರಿಗೆ ಶೇ 4ರ ದರದಲ್ಲೇ ಉಳಿಸಿಕೊಳ್ಳಲಾಗಿದೆ. ಬೆಳವಣಿಗೆಯನ್ನು ಬೆಂಬಲಿಸುವುದಕ್ಕೆ ಹಾಗೂ ಹಣದುಬ್ಬರದ ಒತ್ತಡ ನಿರ್ವಹಿಸುವುದಕ್ಕೆ ಹೀಗೆ ನಿರ್ಧರಿಸಲಾಗಿದೆ.
ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು?
ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.
ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತೈಲ ಬೆಲೆಗಳ ಏರಿಕೆ, ಬಜೆಟ್ ಮತ್ತು ಹಣದುಬ್ಬರದ ಮೇಲೆ ಹೇಗೆ ಪ್ರಭಾವ ಬೀರಲಿದೆ?