Opening Bell: 1000ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದ ಸೆನ್ಸೆಕ್ಸ್, ನಿಫ್ಟಿ 315 ಪಾಯಿಂಟ್ಸ್ ನಷ್ಟ

| Updated By: Srinivas Mata

Updated on: Feb 14, 2022 | 11:08 AM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 14ರ ಸೋಮವಾರದಂದು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ದಿನದ ವಹಿವಾಟಿನಲ್ಲಿ ಪ್ರಮುಖವಾಗಿ ಇಳಿಕೆ, ಏರಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Opening Bell: 1000ಕ್ಕೂ ಹೆಚ್ಚು ಪಾಯಿಂಟ್ಸ್ ನೆಲ ಕಚ್ಚಿದ ಸೆನ್ಸೆಕ್ಸ್, ನಿಫ್ಟಿ 315 ಪಾಯಿಂಟ್ಸ್ ನಷ್ಟ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 14ನೇ ತಾರೀಕಿನ ಸೋಮವಾರದಂದು ಭಾರೀ ಪ್ರಮಾಣದಲ್ಲಿ ನೆಲ ಕಚ್ಚಿದೆ. ಉಕ್ರೇನ್​ ವಿರುದ್ಧ ರಷ್ಯಾ ದಂಡೆತ್ತಿ ಹೋಗಬಹುದು (Ukraine- Russia Crisis) ಎಂಬ ಆತಂಕದ ಕಾರ್ಮೋಡ ಜಾಗತಿಕ ಮಟ್ಟದಲ್ಲಿಯೇ ಕಾಡುತ್ತಿದ್ದು, ಅದರ ಪ್ರಭಾವ ಭಾರತದ ದೇಶೀ ಷೇರು ಮಾರುಕಟ್ಟೆ ಮೇಲೂ ಆಗಿದೆ. ಇಂದಿನ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1100 ಪಾಯಿಂಟ್ಸ್ ಕುಸಿದು, 57,041 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಎನ್​ಎಸ್​ಇ ನಿಫ್ಟಿ 348 ಪಾಯಿಟ್ಸ್ ನೆಲ ಕಚ್ಚಿ, 17,032 ಪಾಯಿಂಟ್ಸ್​ನಲ್ಲಿ ವ್ಯವಹಾರ ಮಾಡುತ್ತಿತ್ತು. ಎಚ್​ಡಿಎಫ್​ಸಿ, ಇಂಡಸ್​ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎಸ್​ಬಿಐ, ಐಸಿಐಸಿಐ ಬ್ಯಾಂಕ್, ಮಹೀಂದ್ರಾ ಅಂಡ್ ಮಹೀಂದ್ರಾ, ಭಾರ್ತಿ ಏರ್​ಟೆಲ್​ ಕಂಪೆನಿಯ ಷೇರುಗಳು ಸೆನ್ಸೆಕ್ಸ್​ ಹಿನ್ನಡೆಗೆ ಪ್ರಮುಖವಾದ ಕಾರಣವಾಗಿ ಶೇ 3ರಿಂದ ಶೇ 3.5ರಷ್ಟು ಕುಸಿದವು. ನಿಫ್ಟಿಯಲ್ಲಿ ಜೆಎಸ್​ಡಬ್ಲ್ಯು ಸ್ಟೀಲ್​ ಅತಿ ಹೆಚ್ಚಿನ ನಷ್ಟ, ಅಂದರ ಶೇ 5ರಷ್ಟು ಕೆಳಗಿಳಿಯಿತು. ಅದರ ಬೆನ್ನಿಗೆ ಎಚ್​ಡಿಎಫ್​ಸಿ ಲೈಫ್ ಹಾಗೂ ಟಾಟಾ ಮೋಟಾರ್ಸ್ ಷೇರು ಬೆಲೆ ಕೂಡ ಕೆಳಗೆ ಇಳಿದಿದೆ.

ಒಟ್ಟಾರೆಯಾಗಿ ಮಾರುಕಟ್ಟೆಯನ್ನು ನೋಡುವುದಾದರೆ, ಸೆನ್ಸೆಕ್ಸ್​ನಲ್ಲಿ 2630 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದರೆ, ಕೇವಲ 517 ಕಂಪೆನಿ ಷೇರುಗಳು ಏರಿಕೆಯನ್ನು ಕಂಡಿವೆ. ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಬಿಕ್ಕಟ್ಟು ತೀವ್ರವಾಗಿರುವುದರಿಂದ ಭಾವನಾತ್ಮಕವಾಗಿ ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಜಾಗತಿಕ ಮಾರುಕಟ್ಟೆ ಕುಸಿತ ಕೂಡ ಉಕ್ರೇನ್ ಬಿಕ್ಕಟ್ಟಿನ ಪರಿಣಾಮವಾಗಿದೆ. ಕಚ್ಚಾ ತೈಲ ಬೆಲೆ ಎಂಟು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಒಂದು ವೇಳೆ ಕಚ್ಚಾ ತೈಲ ಬೆಲೆ ಹೀಗೇ ಬ್ಯಾರಲ್​ಗೆ 95 ಡಾಲರ್​ನಂತೆ ಕೆಲ ಸಮಯ ಮುಂದುವರಿದಲ್ಲಿ ಹಣಕಾಸು ವರ್ಷ 2023ಕ್ಕೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಹಣದುಬ್ಬರವನ್ನು ಆರ್​ಬಿಐ ಶೇ 4.5ಕ್ಕೆ ಪರಿಷ್ಕೃತಗೊಳಿಸಬೇಕಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ದಿನದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1249 ಪಾಯಿಂಟ್ಸ್ ನೆಲ ಕಚ್ಚಿ, 56,904 ಪಾಯಿಂಟ್ಸ್​ ತಲುಪಿತ್ತು. ಇನ್ನು ನಿಫ್ಟಿ 356 ಪಾಯಿಂಟ್ಸ್​ ಕುಸಿದು, 17,019 ಪಾಯಿಂಟ್ಸ್​​ನಲ್ಲಿ ಇತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಟಿಸಿಎಸ್ ಶೇ 2.17

ಒಎನ್​ಜಿಸಿ ಶೇ 1.64

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಜೆಎಸ್​ಡಬ್ಲ್ಯು ಸ್ಟೀಲ್ ಶೇ -4.84

ಎಚ್​ಡಿಎಫ್​ಸಿ ಲೈಫ್ ಶೇ -4.48

ಐಟಿಸಿ ಶೇ -4.07

ಎಚ್​ಡಿಎಫ್​ಸಿ ಶೇ -3.81

ಟಾಟಾ ಸ್ಟೀಲ್ ಶೇ -3.09

ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

Published On - 11:04 am, Mon, 14 February 22